ಮೂಡಬಿದ್ರೆ : ಬೆಳುವಾಯಿ ಗ್ರಾಮದ ತರುಣಿಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾಂತ ಇದೀಗ ತನ್ನ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2017 ರ ಜೂನ್ 18 ರಂದು ಮೂಡಬಿದ್ರೆಯ ತರುಣಿಯನ್ನು ಬೆಂಗಳೂರಿ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೂಡ ಪಡೆದಿದ್ದ. ಮದುವೆಯಾದ ಬಳಿಕ ರಾಘವೇಂದ್ರ ಕುಲಕರ್ಣಿ ತನ್ನ ಪತ್ನಿಗೆ ಆಗಾಗ್ಗೆ ದೈಹಿಕ ಹಿಂಸೆ ನೀಡುತ್ತಿದ್ದ , ಈ ನಡುವೆ ಮಗುವಿನ ಜನನದ ಬಳಿಕ ಪತ್ನಿ ಮತ್ತು ಮಗುವನ್ನು ಪತ್ನಿ ಮನೆಯಿಂದ ಕರೆದುಕೊಂಡು ಹೋಗಲು ಕೂಡ ಬಂದಿರಲಿಲ್ಲ, ಇಂತಹ ಪರಿಸ್ಥಿತಿಯಲ್ಲಿ ಪತ್ನಿ ಮತ್ತು ಮಗು ಬೆಂಗಳೂರಿನಲ್ಲಿ ಗಂಡನ ಮನೆಗೆ ತೆರಳಿದ್ದರು. ಆದರೆ ಮೂರೇ ದಿನದಲ್ಲಿ ಪತ್ನಿ ಮತ್ತು ಮಗುವನ್ನು ರಾಘವೇಂದ್ರ ಕುಲಕರ್ಣಿ ಮನೆಯಿಂದ ಹೊರಗೆ ಹಾಕಿದ್ದ.
ಈ ನಡುವೆ ಕಳೆದ ತಿಂಗಳು ಬೆಂಗಳೂರಿನ ಮಾಗಡಿ ರಸ್ತೆಯ ತಾವರೆ ಕೆರೆಯ ಸಮೀಪದ ಶ್ರೀ ಹೊನ್ನವ ಮಂತ್ರಾಲಯ ಮಠದಲ್ಲಿ ಗೌರಿ ಎಂಬವರೊಂದಿಗೆ ರಾಘವೇಂದ್ರ ಕುಲಕರ್ಣಿ ಮತ್ತೊಂದು ಮದುವೆಯಾಗಿರುತ್ತಾನೆ ಎಂದು ರಾಘವೇಂದ್ರ ಕುಲಕರ್ಣಿಯ ಪತ್ನಿ ದೂರು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಮೊದಲು ಕೂಡ ಈತ ಮದುವೆಯಾಗಿ ಪತ್ನಿಗೆ ವಿಚ್ಛೇದನೆ ನೀಡಿದ್ದ , ಮೊದಲ ಮದುವೆಯ ವಿಚಾರವನ್ನು ಮುಚ್ಚಿಟ್ಟು ತನ್ನನ್ನು ಮದುವೆಯಾಗಿರುವುದಾಗಿ ಮೂಡಬಿದ್ರೆಯ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ. ಇದೀಗ ರಾಘವೇಂದ್ರ ತನ್ನ ಎರಡನೇ ಪತ್ನಿಗೆ ವಿಚ್ಛೇದನೆ ನೀಡದೆ ಮೂರನೇ ಮದುವೆಯಾಗಿದ್ದಾನೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಾಘವೇಂದ್ರ ಕುಲಕರ್ಣಿ, ಆತನ ಸಹೋದರ ನರಹರಿ, ಆತನ ಮಾವ ನರಸಿಂಹ, ಅತ್ತೆ ಗೀತಾ, ಸಹೋದರಿಯರಾದ ಪ್ರೇಮಲಾ, ಸವಿತಾ ರಂಗನಾಥ್, ಹಾಗೂ ಬಾವ ನಾಗನಾಥ ಅವರ ವಿರುದ್ಧ ಮಂಗಳೂರಿನ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. ಮಹಿಳಾ ಠಾಣಾ ಇನ್ಸ್ ಪೆಕ್ಟರ್ ರೇವತಿ ಅವರು ಹಾಗೂ ಹೆಡ್ ಕಾನ್ಸ್ ಟೇಬಲ್ ಶ್ರೀಲತಾ ಅವರ ತಂಡ ಬೆಂಗಳೂರಿಗೆ ತೆರಳಿ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದು, ನರಹರಿ ಎಂಬಾತನನ್ನು ವಶಕ್ಕೆ ಪಡೆದಿದ್ದಾರೆ. ಇತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಈ ನಡುವೆ ಆರೋಪಿಗಳನ್ನು ಬಂಧಿಸಲು ಬಂದಿದ್ದ ಪೊಲೀಸರಿಗೆ ಆರೋಪಿಯ ಬಾವ ನಾಗನಾಥ ಎಂಬಾತ ದೂರವಾಣಿ ಕರೆ ಮಾಡಿ ಅವ್ಯಾಚ್ಯವಾಗಿ ನಿಂದಿಸಿರುವುದಾಗಿ ಹೇಳಲಾಗಿದೆ.
Click this button or press Ctrl+G to toggle between Kannada and English