ಮಂಗಳೂರು: ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಕೂಡಲೇ ಕಾರ್ಪೊರೇಟರ್ ಕೇಶವ್ ಮರೋಳಿ ಅವರ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದೆ.
ಕಂಕನಾಡಿಯ ಕನಪದವು, ಮಾರ್ತ ಕಾಂಪೌಂಡ್, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿಅರಣ್ಯಾಧಿಕಾರಿಗಳು ಶೋಧ ನಡೆಸಿದಾಗ ನಾಲ್ಕು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆ ಗುರುತನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ.
ಕಂಕನಾಡಿ ವ್ಯಾಪ್ತಿಯ ಎರಡು ಕಡೆ ಚಿರತೆ ಪತ್ತೆಯಾಗಿದ್ದು, ಸೋಮವಾರ ಸಂಜೆಯ ತನಕ ಶೋಧ ನಡೆಸಲಾಗಿದೆ. ಮಂಗಳವಾರ ಬೆಳಗ್ಗಿನಿಂದ ಪಶು ವೈದ್ಯರನ್ನು ಕರೆಯಿಸಿ ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಪ್ರಶಾಂತ್ ಪೈ ತಿಳಿಸಿದ್ದಾರೆ.
ಜಯನಗರ ವ್ಯಾಪ್ತಿಯಲ್ಲಿ 25ಕ್ಕೂ ಅಧಿಕ ಬೀದಿ ನಾಯಿಗಳಿದ್ದು, ಕೆಲ ದಿನಗಳಿಂದ ಈ ನಾಯಿಗಳು ನಾಪತ್ತೆಯಾಗಿವೆ. ಚಿರತೆ ದಾಳಿಗೆ ಈ ನಾಯಿಗಳು ಬಲಿಯಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.
ಮರೋಳಿ, ಜಯನಗರ, ಕಂಕನಾಡಿ ಜನವಸತಿ, ವಾಣಿಜ್ಯ ಸಂಕೀರ್ಣಗಳು ಇರುವ ಪ್ರದೇಶ. ಈ ವ್ಯಾಪ್ತಿಯಲ್ಲಿಕಾರ್ಯಾಚರಣೆ ನಡೆಸುವುದು ಅಧಿಕಾರಿಗಳಿಗೆ ದೊಡ್ಡ ಸವಾಲಾಗಿದೆ. ಒಂದು ವೇಳೆ ಕಾರ್ಯಾಚರಣೆ ನಡೆಸಿದಾಗ ಜನವಸತಿ ಪ್ರದೇಶದಲ್ಲಿ ಚಿರತೆ ಯದ್ವಾತದ್ವಾ ಓಡಿ ಅವಾಂತರ, ಅವಘಡ ಸೃಷ್ಟಿಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ವಾಕಿಂಗ್ ವೇಳೆ ಕೇವಲ 10 ಅಡಿ ದೂರದಲ್ಲೇ ಚಿರತೆ ಸಾಗುತ್ತಿರುವುದನ್ನು ನೋಡಿದ 9ನೇ ತರಗತಿಯ ವಿದ್ಯಾರ್ಥಿನಿ ನಿಧಿ ಪುಳಿಂಚ ಶೆಟ್ಟಿ ತನ್ನ ಮೊಬೈಲ್‌ನಲ್ಲಿಸೆರೆ ಹಿಡಿದಿದ್ದಾಳೆ. ಈಕೆಯ ತಾಯಿ ಮತ್ತು ತಮ್ಮ ಸುಮಾರು 50 ಮೀ. ದೂರದಲ್ಲಿನಡೆದುಕೊಂಡು ಹೋಗುತ್ತಿದ್ದರು. ಅದೃಷ್ಟವಶಾತ್ ಚಿರತೆ ದಾಳಿಯಿಂದ ಎಲ್ಲರೂ ಸೇಫ್ ಆಗಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮರೋಳಿ ಜಯನಗರ ಪರಿಸರದಲ್ಲಿ ಭಾನುವಾರ ಸಂಜೆ ವೇಳೆ ಚಿರತೆಯೊಂದು ಪ್ರತ್ಯಕ್ಷವಾಗಿದ್ದು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
Click this button or press Ctrl+G to toggle between Kannada and English