ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಚಾಮುಂಡಿ ಬೆಟ್ಟದಲ್ಲಿ ರಾಜಕೀಯ ಮುತ್ಸದ್ದಿ ಎಸ್.ಎಂ.ಕೃಷ್ಣ ಅವರು ನಾಡದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ನವರಾತ್ರಿ ವೈಭವವನ್ನು ಉದ್ಘಾಟಿಸಿದರು.
ಗುರುವಾರ (ಅ.7) ಬೆಳಗ್ಗೆ 7.30ಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದ ಎಸ್.ಎಂ. ಕೃಷ್ಣ ಅವರು 8.15 ರಿಂದ 8.45ರ ಶುಭ ಮುಹೂರ್ತದಲ್ಲಿ ನಾಡದೇವಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಮಾಡುವ ಮೂಲಕ 411ನೇ ನಾಡಹಬ್ಬ ದಸರಾಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಪತ್ನಿ ಚೆನ್ನಮ್ಮ , ಸಚಿವರಾದ ಆರ್ ಅಶೋಕ್, ಬೈರತಿ ಬಸವರಾಜ್, ಎಸ್ ಟಿ ಸೋಮಶೇಖರ್, ಬಿಸಿ ಪಾಟೀಲ್, ಸುನಿಲ್ ಕುಮಾರ್, ಶಶಿಕಲಾ ಜೊಲ್ಲೆ, ಸಂಸದ ಪ್ರತಾಪ್ ಸಿಂಹ, ಶಾಸಕ ರಾಮದಾಸ್, ಜಿಟಿ ದೇವೇಗೌಡ , ತನ್ವೀರ್ ಸೇಠ್ ಮತ್ತು ಇತರರು ಉಪಸ್ಥಿತರಿದ್ದರು.
ನವರಾತ್ರಿ ಮೊದಲ ದಿನ ಅರಮನೆಯಲ್ಲಿ ಮುಂಜಾನೆ 4.30 ರಿಂದಲೇ ಪೂಜಾ-ಕೈಂಕರ್ಯಗಳು ಆರಂಭವಾಗಿದೆ. ಬೆಳಗ್ಗೆ 6 ರಿಂದ 6.11ರ ವರೆಗೆ ದರ್ಬಾರ್ ಹಾಲ್‌ನ ಸಿಂಹಾಸನಕ್ಕೆ ಸಿಂಹದ ತಲೆ ಜೋಡಣೆ ಮಾಡಲಾಗಿದೆ. 6.30ರಿಂದ 7.30ರ ವರೆಗೆ ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಕಳಶ ತರಲಾಗುವುದು. 7.45ರಿಂದ 8.55ರ ವೇಳೆ ಚಾಮುಂಡಿ ತೊಟ್ಟಿಯಲ್ಲಿ ಯದುವೀರ್‌ಗೆ ಕಂಕಣ ಧಾರಣೆ ಮಾಡಲಾಗುತ್ತದೆ.
9 ರಿಂದ 9.30 ರವರೆಗೆ ಪಟ್ಟದ ಆನೆ, ಹಸು, ಒಂಟೆ, ಕುದುರೆಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. 11.45ರಿಂದ 12.15ರ ನಡುವೆ ಸಿಂಹಾಸನಾರೋಹಣ ಮಾಡಿ ಯದುವೀರ್ ಖಾಸಗಿ ದರ್ಬಾರ್ ಮಾಡಲಿದ್ದಾರೆ. ಕೋವಿಡ್ ಕಾರಣದಿಂದ ಈ ಬಾರಿ ಸರಳವಾಗಿ ದಸರಾ ಆಚರಣೆ ಮಾಡಲಾಗುತ್ತಿದೆ. ಧಾರ್ಮಿಕ ಪೂಜೆಗೂ ಕೆಲವರಿಗಷ್ಟೆ ಅವಕಾಶ ನೀಡಲಾಗಿದೆ. ಮಾಧ್ಯಮಗಳಿಗು ನಿರ್ಬಂಧ ಹೇರಲಾಗಿದೆ.
ಈ ಬಾರಿ ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭ ಸೇರಿದಂತೆ ಅರಮನೆ ವೇದಿಕೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜಂಬೂ ಸವಾರಿ ಕಾರ್ಯಕ್ರಮಗಳನ್ನು ಸರ್ಕಾರವೇ ಹೊರತಂದಿರುವ ವೆಬ್‌ಸೈಟ್, ಫೇಸ್‌ಬುಕ್ ಹಾಗೂ ಯೂಟ್ಯೂಬ್ ನೇರಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ.
ಕಾರ್ಯಕ್ರಮಗಳ ವೇಳಾಪಟ್ಟಿಯನ್ನು www.mysoredasara.gov.in ವೆಬ್‌ಸೈಟ್ನಲ್ಲಿ ಪ್ರಕಟಿಸಲಾಗಿದೆ. ಕಾರ್ಯಕ್ರಮಗಳು ನಡೆಯುವ ವೇಳೆ ನೇರಪ್ರಸಾರವನ್ನು ಮುಂದಿನ ಲಿಂಕ್‌ಗಳಲ್ಲಿ ನೀವು ನೋಡಬಹುದಾಗಿದೆ.
Click this button or press Ctrl+G to toggle between Kannada and English