ಮಂಗಳೂರು : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮಂಗಳೂರು ದಸರಾ ಮಹೋತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅದ್ಧೂರಿ ಚಾಲನೆ ನೀಡಿದರು.
ಅಕ್ಟೋಬರ್ 7 ರಿಂದ 16ರವರೆಗೆ ʼನಮ್ಮ ದಸರಾ – ನಮ್ಮ ಸುರಕ್ಷೆ’ ಎಂಬ ಘೋಷವಾಕ್ಯದಡಿ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ ಮಹೋತ್ಸವ ನಡೆಯಲಿದೆ. ಇಂದು ದೇವಳದಲ್ಲಿ ಶ್ರೀ ಶಾರದಾ ಮಾತೆ, ಶ್ರೀ ಮಹಾಗಣಪತಿ ದೇವರ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಅ.16ರಂದು ನವರಾತ್ರಿ ಮಹೋತ್ಸವ ಸಂಪನ್ನಗೊಂಡು ಶ್ರೀ ಶಾರದಾ ಮಾತೆ, ಶ್ರೀಮಹಾಗಣಪತಿ, ನವದುರ್ಗೆಯರ ಮೂರ್ತಿಯನ್ನು ದೇವಳದ ಪುಷ್ಕರಣಿಯಲ್ಲಿ ಜಲಸ್ತಂಭನ ಮಾಡಲಾಗುತ್ತದೆ.
ದಸರಾ ಮಹೋತ್ಸವದ ಹಿನ್ನೆಲೆ ಮಂಗಳೂರಿನ ರಾಜಬೀದಿಗಳು ವಿದ್ಯುತ್ ದೀಪಗಳಿಂದ ಸಿಂಗಾರಗೊಂಡಿದೆ. ಈ ಬಾರಿ ಶ್ರೀಕ್ಷೇತ್ರ ಕುದ್ರೋಳಿ ದೇವಳದಲ್ಲಿ ಮುಂದಿನ 10 ದಿನಗಳ ಕಾಲ ಕೊರೊನಾ ಲಸಿಕೆ ನೀಡುವ ವ್ಯವಸ್ಥೆಯನ್ನು ಮಾಡಲಾಗಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು. ದಸರಾ ಹಿನ್ನೆಲೆ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಗುರುವಾರ ಮಧ್ಯಾಹ್ನ12 ಗಂಟೆಯ ವೇಳೆಗೆ ನವರಾತ್ರಿ ಮಹೋತ್ಸವಕ್ಕೆ ಗುರುಪೂಜೆಯೊಂದಿಗೆ ಚಾಲನೆ ನೀಡಲಾಯಿತು.
ಮಂಗಳೂರು ದಸರಾ ಉತ್ಸವಕ್ಕೆ ಕುದ್ರೋಳಿ ಕ್ಷೇತ್ರದಲ್ಲಿ ಚಾಲನೆ ನೀಡಿ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಮಂಗಳೂರು ದಸರಾ ಜನರ ಹಬ್ಬವಾಗಿದೆ. ಮಂಗಳೂರು ಮಹಾನಗರ ಪಾಲಿಕೆಯ ರಾಜಬೀದಿಯ ಅಲಂಕಾರವನ್ನು ವಹಿಸಿದೆ. ಈ ಬಾರಿ ಮಂಗಳೂರು ಮಹಾ ನಗರ ಪಾಲಿಕೆ ವಹಿಸಿದ್ದು ಉತ್ತಮ ಬೆಳವಣಿಗೆ. ಮೈಸೂರು ದಸರಾ ರೀತಿಯಲ್ಲಿ ಮಂಗಳೂರು ದಸರಾ ನಡೆಯುತ್ತಿದೆ ಎಂದು ಹೇಳಿದರು.
ಈ ವೇಳೆ ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಕ್ಷೇತ್ರಾಡಳಿತ ಸಮಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಪದ್ಮರಾಜ ಕರ್ಕೇರ, ಮೂಡ ಅಧ್ಯಕ್ಷ ರವಿಶಂಕರ ಮಿಜಾರು, ಹರಿಕೃಷ್ಣ ಬಂಟ್ವಾಳ, ಶಶಿಧರ ಹೆಗ್ಡೆ, ಪದ್ಮ ರಾಜ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English