ಮಂಗಳೂರು: ತಂದೆಯಿಂದಲೇ ಗುಂಡೇಟಿಗೆ ಒಳಗಾಗಿದ್ದ ಹದಿನಾರರ ಹರೆಯದ ಬಾಲಕ ಮೆದುಳು ನಿಷ್ಕ್ರಿಯಗೊಂಡಿದ್ದ ಬಾಲಕ ಶುಕ್ರವಾರ ಬೆಳಗ್ಗೆ 5 ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.
ಉದ್ಯಮಿ ರಾಜೇಶ್ ಪ್ರಭು ನಗರದ ಮೋರ್ಗನ್ಸ್‌ಗೇಟ್‌ನಲ್ಲಿ ಅ.5ರಂದು ಪುತ್ರ ಸುಧೀಂದ್ರನ ಮೇಲೆ ಆಕಸ್ಮಿಕವಾಗಿ ಗುಂಡು ಹಾರಿಸಿದ್ದರು.
ಗಂಭೀರವಾಗಿ ಗಾಯಗೊಂಡಿದ್ದ ಸುಧೀಂದ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಆತನ ಮೆದುಳು ನಿಷ್ಕ್ರಿಯಗೊಂಡ ವಿಷಯವನ್ನು ವೈದ್ಯರು ಘೋಷಿಸಿದ್ದರು. ಶುಕ್ರವಾರ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಮೋರ್ಗನ್ಸ್‌ಗೇಟ್‌ನ ವೈಷ್ಣವಿ ಎಕ್ಸ್‌ಪ್ರೆಸ್ ಕಾರ್ಗೊ ಸರಕು ಸಾಗಾಟ ಸಂಸ್ಥೆಯಲ್ಲಿ ಸೆ.30ರಂದು ಅಶ್ರಫ್, ಚಂದ್ರಹಾಸ ಎಂಬವರು ಕೆಲಸಕ್ಕೆ ಸೇರಿಕೊಂಡಿದ್ದರು. ಅದೇ ದಿನ ಗೂಡ್ಸ್ ಕಂಟೈನರ್ ವಾಹನಕ್ಕೆ ಚಾಲಕ, ಕ್ಲೀನರ್ ಆಗಿ ಮುಂಬೈಗೆ ತೆರಳಿ ಅ.3ಕ್ಕೆ ವಾಪಸಾಗಿದ್ದರು. ಅವರಿಗೆ ಮೊದಲೇ 10 ಸಾವಿರ ರೂ. ಸಂಬಳ ನೀಡಲಾಗಿತ್ತು. ಇನ್ನುಳಿದ 4000 ರೂ. ಕೇಳಲು ಅ.5ರಂದು ಸಂಜೆ 3:30ಕ್ಕೆ ಕಚೇರಿಗೆ ಬಂದ ಚಾಲಕ, ಕ್ಲೀನರ್ ಬಾಕಿ ಹಣ ನೀಡುವಂತೆ ಸಂಸ್ಥೆಯ ಮಾಲಕನ ಪತ್ನಿ ಶಾಂತಲಾ ಪ್ರಭು ಅವರಲ್ಲಿ ಒತ್ತಾಯಿಸಿದ್ದರು. ಈ ವೇಳೆ ಅವರು ಪತಿ, ಪುತ್ರನನ್ನು ಕರೆಸಿಕೊಂಡಿದ್ದರು. ಅಶ್ರಫ್, ಚಂದ್ರಹಾಸ, ರಾಜೇಶ್ ಪ್ರಭು, ಸುಧೀಂದ್ರ ಪ್ರಭು ನಡುವೆ ಮಾತಿನ ಚಕಮಕಿ ನಡೆದು ವಾಗ್ವಾದಕ್ಕೆ ಕಾರಣವಾಗಿದೆ.
ತಳ್ಳಾಟದ ವೇಳೆ ರಾಜೇಶ್ ಎರಡು ಸುತ್ತಿನ ಗುಂಡು ಹಾರಿಸಿದ್ದು, ಅಶ್ರಫ್, ಚಂದ್ರಹಾಸರತ್ತ ಹಾರಿಸಿದ್ದ ಗುಂಡು ಸ್ವಂತ ಮಗ ಸುಧೀಂದ್ರನ ಎಡಗಣ್ಣಿನ ಪಕ್ಕ ಹಾದು, ತಲೆಯ ಒಳಭಾಗದಲ್ಲಿ 7-8 ಇಂಚು ಆಳದಲ್ಲಿ ಗಾಯ ಮಾಡಿತ್ತು. ಗಂಭೀರ ಗಾಯಗೊಂಡ ಪುತ್ರನನ್ನು ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Click this button or press Ctrl+G to toggle between Kannada and English