ಬೆಂಗಳೂರು : ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಉದ್ಯೋಗ ನೀತಿಯನ್ನು ರೂಪಿಸಲಾಗುವುದು. ಈ ನೀತಿಯ ಅಡಿ ಉದ್ಯೋಗ ಸೃಜನೆ ಆಧಾರದ ಮೇಲೆ ಹೆಚ್ಚು ಪ್ರೋತ್ಸಾಹ ಸವಲತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರು ಅರಮನೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ವತಿಯಿಂದ ಆಯೋಜಿಸಿರುವ ” ಉದ್ಯಮಿಯಾಗು – ಉದ್ಯೋಗ ನೀಡು” ಕಾರ್ಯಾಗಾರದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು.
ಉದ್ಯೋಗ ನೀತಿಯ ರಚನೆ ಕುರಿತು ಚಿಂತನೆ ನಡೆಸಲಾಗುತ್ತಿದೆ. ಸದ್ಯದಲ್ಲಿಯೇ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದ ಮುಖ್ಯಮಂತ್ರಿಗಳು ಗರಿಷ್ಠ ಉದ್ಯೋಗ ನೀಡುವ ಕೈಗಾರಿಕೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಪ್ರೋತ್ಸಾಹಕಗಳನ್ನು ರಾಜ್ಯದಲ್ಲಿ ನೀಡಲಾಗುವುದು ಎಂದರು.
ಕರ್ನಾಟಕ ಉದ್ಯಮಸ್ನೇಹಿ ರಾಜ್ಯ. ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್ ನಮ್ಮ ರಾಜ್ಯದಲ್ಲಿ ಸಾಧ್ಯವಾಗಿಸಿದೆ. ಉದ್ಯಮಗಳು ಸ್ಥಾಪನೆಯಾಗಲು ಸೂಕ್ತ ವಾತಾವರಣ ನಿರ್ಮಾಣ ಮಾಡಿ, ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದರು. 180 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಟ್ಟದ ಆರ್ ಎಂಡ್ ಡಿ ಸೆಕ್ಟರ್ ರಾಜ್ಯದಲ್ಲಿದೆ. ಬಯೋಟೆಕ್ನಾಲಜಿ, ಇಂಜಿನಿಯರಿಂಗ್, ಸ್ಪೇಸ್ ವಿಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳ ಆರ್ ಎಂಡ್ ಡಿ ಸೆಕ್ಟರ್ ಸಿಲಿಕಾನ್ ವ್ಯಾಲಿ ಬೆಂಗಳೂರಿನಲ್ಲಿದೆ. ಕೈಗಾರಿಕಾ ಅಭಿವೃದ್ಧಿ ಮತ್ತು ಇದರಿಂದ ಕೌಶಲ್ಯಭರಿತ ಮಾನವ ಸಂಪನ್ಮೂಲ ಬರಲು ಸಹಕಾರಿಯಾಗಿದೆ. ಇದರ ಮುಖಾಂತರ ಹೊಸ ಉದ್ಯಮಗಳು ಬರುತ್ತವೆ ಎಂದು ತಿಳಿಸಿದರು.
ಸ್ಟಾರ್ಟ್ ಅಪ್ ನೀತಿ, ಆರ್.ಅಂಡ್ ಡಿ ಎಲ್ಲಾ ವಲಯಗಳಲ್ಲಿ ತರಲಾಗುತ್ತಿದೆ. .24% 2 ನೇ ಮತ್ತು 3 ನೇ ಸ್ತರದ ನಗರಗಳಲ್ಲಿ ಪ್ರಾರಂಭಿಸಲಾಗಿದೆ. ಸ್ಟಾರ್ಟ್ ಅಪ್ ಪ್ರಾರಂಭಿಸಿದರೆ, 50 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡುವ ಏಕೈಕ ರಾಜ್ಯ ಸರ್ಕಾರ ಎಂದು ತಿಳಿಸಿದರು.
ವಲಯವಾರು ತರಬೇತಿಯನ್ನು ನೀಡುವ ತೀರ್ಮಾನವನ್ನು ಕೈಗಾರಿಕಾ ಇಲಾಖೆ ಕೈಗೊಂಡಿದೆ. ಯುವಕರಲ್ಲಿ ಹೊಸ ಉತ್ಸಾಹ, ಚೈತನ್ಯ ಹಾಗೂ ವೃತ್ತಿ ಮಾರ್ಗದರ್ಶನ ನೀಡುವ ತುಂಬುವ ಕೆಲಸವನ್ನು ಸಹ ಮಾಡುತ್ತಿದ್ದು, ಯುವಜನರಲ್ಲಿ ಸಮಯ ಪ್ರಜ್ಞೆ, ಶ್ರಮ,ದುಡಿಮೆ ಇದ್ದರೆ ಮಾತ್ರ ಯಶಸ್ಸು ಸಾಧ್ಯ. ಯುವಕರು ಉದ್ಯಮವನ್ನು ಸ್ಥಾಪಿಸುವ ಸಂಕಲ್ಪವನ್ನು ಮಾಡಬೇಕು ಎಂದು ಕರೆ ನೀಡಿದರು. ಹಿಂದೆ ಕುಳಿತಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ವೇದಿಕೆಯ ಮುಂಭಾಗದಲ್ಲಿ ಕುಳಿತುಕೊಳ್ಳುವಂತಾಗಬೇಕು ಎಂದರು.
ಕೈಗಾರಿಕಾ ಅದಾಲತ್ ಸಹ ಆಯೋಜಿಸಲಾಗಿದೆ. ಉದ್ಯಮ ಸ್ಥಾಪನೆಗೆ ಸೂಕ್ತ ತಂತ್ರಜ್ಞಾನ, ಹಣಕಾಸಿನ ನೆರವನ್ನು ನೀಡಲಾಗುವುದು, ಎಸ್.ಸಿ/ಎಸ್.ಟಿ ಹಾಗೂ ಹಿಂದುಳಿದ ವರ್ಗಗಳೂ ಸಹ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಉದ್ಯಮಿಗಳಾಗಬೇಕು.ಮಹಿಳೆಯರು ಕೂಡ ದೇಶದ ಜಿಡಿಪಿಗೆ ಕೊಡುಗೆ ನೀಡುವಂತಾಗಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಮುರುಗೇಶ್ ನಿರಾಣಿ, ಎಂಟಿಬಿ ಅವರು ಉದ್ಯಮಿಯಾಗಿ ಉದ್ಯೋಗ ಕಲ್ಪಿಸಿ, ತಂತ್ರಜ್ಞಾನ ಬಳಸಿ, ರೈತರಿಗೆ ಅನುಕೂಲ ಕಲ್ಪಿಸಿ ಉತ್ತಮ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಚಿವರಾದ ಮುರುಗೇಶ್ ನಿರಾಣಿ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ್, ಎಂ.ಟಿ.ಬಿ.ನಾಗರಾಜ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English