ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ಹೃದಯಾಘಾತದಿಂದ ನಿಧನ

5:55 PM, Tuesday, October 12th, 2021
Share
1 Star2 Stars3 Stars4 Stars5 Stars
(No Ratings Yet)
Loading...

Padyana Ganapathi Bhatಸುಳ್ಯ : ಖ್ಯಾತ ತೆಂಕುತಿಟ್ಟಿನ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ (67) ಇಂದು ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಬೆಳಗ್ಗೆ 7.45ಕ್ಕೆ ಅವರು ಕೊನೆಯುಸಿರೆಳೆದರು.

ಬಂಟ್ವಾಳ ತಾಲೂಕು ಕರೋಪಾಡಿ ಗ್ರಾಮದ ಪದ್ಯಾಣ ಕುಟುಂಬದಲ್ಲಿ  1955ರ ಜನವರಿ 21ರಂದು ಕಲ್ಮಡ್ಕ ಗ್ರಾಮದಲ್ಲಿ ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೇ ಮಗನಾಗಿ ಗಣಪತಿ ಭಟ್ ಅವರು  ಜನಿಸಿದರು. ಬಾಲ್ಯದಿಂದಲೇ ಯಕ್ಷಗಾನದಲ್ಲಿ ಆಸಕ್ತಿ ಹೊಂದಿದ್ದ ಇವರು ಧರ್ಮಸ್ಥಳದ ಯಕ್ಷಗಾನ ತರಬೇತಿ ಕೇಂದ್ರದಲ್ಲಿ ಗುರು ಮಾಂಬಾಡಿ ನಾರಾಯಣ ಭಾಗವತರ ಬಳಿ ಭಾಗವತಿಕೆ ಅಭ್ಯಾಸ ಮಾಡಿದ್ದಾರೆ. ಬಳಿಕ ಸುಮಾರು 35 ವರ್ಷಕ್ಕೂ ಅಧಿಕ ಕಾಲ ಸುರತ್ಕಲ್ ಮೇಳ, ಮಂಗಳಾದೇವಿ ಮೇಳ, ಎಡನೀರು ಮೇಳ, ಹನುಮಗಿರಿ ಮೇಳ ಸೇರಿದಂತೆ ವಿವಿಧ ಯಕ್ಷಗಾನ ಮೇಳಗಳಲ್ಲಿ ಪ್ರಧಾನ ಭಾಗವತರಾಗಿದ್ದರು.

ಗಣಪತಿ ಭಟ್ ಅವರು ಸುರತ್ಕಲ್ ಮೇಳದಲ್ಲಿದ್ದಾಗ ನಾಟ್ಯರಾಣಿ ಶಾಂತಲೆ, ಪಾಪಣ್ಣ ವಿಜಯ, ಕಡುಗಲಿ ಕುಮಾರರಾಮ, ರಾಜಾ ಯಯಾತಿ ಮೊದಲಾದ ಪ್ರಸಂಗಗಳು ಜನಪ್ರಿಯವಾಗಿದ್ದವು. ಸುರತ್ಕಲ್ ಮೇಳವೊಂದರಲ್ಲೇ ಅವರು ಸುಮಾರು 25ಕ್ಕೂ ಅಧಿಕ ವರ್ಷಗಳ ಕಾಲ ತಿರುಗಾಟ ನಡೆಸಿದ್ದಾರೆ. ನಾಟಿ, ಭೈರವಿ ರಾಗಗಳಲ್ಲಿ ಹಾಡುವುದರಲ್ಲಿ ಜನಪ್ರಿಯರಾಗಿದ್ದ ಅವರು ಹಾಡುಗಾರಿಕೆಯಲ್ಲಿ ಅಂದೇ ವಿವಿಧ ಪ್ರಯೋಗಗಳನ್ನು ನಡೆಸಿದ್ದರು.

ದೇಶ ವಿದೇಶಗಳಲ್ಲಿ ಯಕ್ಷಗಾನದ ಕಂಪನ್ನು ಹರಡಿಸಿದ್ದ  ಅವರು  ಕನ್ನಡ, ತುಳು ಯಕ್ಷಗಾನದ ಧ್ವನಿಸುರುಳಿಗಳಲ್ಲಿ ಪದ್ಯಾಣ ಕಂಠ ಜನಪ್ರಿಯವಾಗಿದ್ದವು. ಅವರಿಗೆ ಹಲವು ಪ್ರಶಸ್ತಿ-ಸನ್ಮಾನಗಳು ಸಂದಿವೆ.

ಪದ್ಯಾಣ ಗಣಪತಿ ಭಟ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

ಖ್ಯಾತ ಯಕ್ಷಗಾನ ಭಾಗವತ ಪದ್ಯಾಣ ಗಣಪತಿ ಭಟ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಯಕ್ಷಗಾನ ಕಲಾವಿದರ ಕುಟುಂಬದ ಹಿನ್ನೆಲೆಯಿಂದ ಬಂದ ಗಣಪತಿ ಭಟ್ಟರು ತಮ್ಮ ಕಂಠಸಿರಿ ಹಾಗೂ ಮನೋಜ್ಞ ಭಾಗವತಿಕೆಯಿಂದ ಪದ್ಯಾಣ ಶೈಲಿಯನ್ನೇ ಹುಟ್ಟು ಹಾಕಿದ್ದರು. ಅವರ ನಿಧನ ಯಕ್ಷಗಾನ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಮುಖ್ಯಮಂತ್ರಿಗಳು ಸ್ಮರಿಸಿದ್ದಾರೆ.

ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಕುಟುಂಬದವರು ಹಾಗೂ ಅಭಿಮಾನಿಗಳಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಪದ್ಯಾಣರ ಅಗಲಿಕೆಗೆ ಕಲ್ಕೂರ ಸಂತಾಪ

ಪದ್ಯಾಣ ಗಣಪತಿ ಭಟ್ಟರ ನಿಧನದಿಂದಾಗಿ ತೆಂಕುತಿಟ್ಟಿನ ಪರಂಪರಾಗತ ಭಾಗವತಿಕೆಯ ಕೊಡಿಯೊಂದು ಕಳಚಿದಂತಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತನ್ನ ಸಂತಾಪ ವ್ಯಕ್ತಪಡಿಸಿದ್ದಾರೆ. ಕಠಿಣ ಪರಿಶ್ರಮ ಹಾಗೂ ವಿಶೇಷ ಸಾಧನೆಯ ಮೂಲಕ ಶುದ್ಧ ಸಂಪ್ರದಾಯ ಶೈಲಿಯ ಭಾಗವತಿಕೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಯಕ್ಷಕಲಾ ಸೇವೆಗೈದ ಪದ್ಯಾಣರ ಅಗಲಿಕೆ ನಿಜಕ್ಕೂ ಯಕ್ಷಗಾನ ರಂಗಕ್ಕೆ ದೊಡ್ಡ ನಷ್ಟ ಎಂದು ಕಲ್ಕೂರ ತಿಳಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭ ಸಾಧಕ ಶೇಷ್ಠ ಪುರಸ್ಕಾರ ಸಹಿತವಾಗಿ ಅನೇಕ ಪ್ರಶಸ್ತಿ ಮನ್ನಣೆಗೆ ಪಾತ್ರರಾಗಿದ್ದ ಪದ್ಯಾಣರು ಕರಾವಳಿ ಜಿಲ್ಲೆಗಳ ಅನೇಕ ಮೇಳಗಳಲ್ಲಿ ತಿರುಗಾಟ ಮಾಡಿರುವ ಅನುಭವಿಗಳಲ್ಲೊಬ್ಬರಾಗಿದ್ದು ಅವರ ನಿಧನಕ್ಕೆ ಗಣ್ಯರಾದ ಹರಿಕೃಷ್ಣ ಪುನರೂರು, ಡಾ. ಎಂ. ಪ್ರಬಾಕರ ಜೋಶಿ, ಕುಂಬ್ಳೆ ಸುಂದರ ರಾವ್, ಪೊಳಲಿ ನಿತ್ಯಾನಂದ ಕಾರಂತ, ಜಿ.ಕೆ. ಭಟ್ ಸೇರಾಜೆ, ಕದ್ರಿ ನವನೀತ ಶೆಟ್ಟಿ, ಭಾಸ್ಕರ ರೈ ಕುಕ್ಕುವಳ್ಳಿ ಮೊದಲಾದವರು ಸಂತಾಪ ಸೂಚಿಸಿರುವರು.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English