ದಾವಣಗೆರೆ: ವೈದ್ಯನೋರ್ವ ತನ್ನ ಮಡದಿಗೆ ಹೈಡೋಸ್ ಇಂಜೆಕ್ಷನ್ ಕೊಟ್ಟು ಕೊಲೆಗೈದಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಶಿಲ್ಪಾ(36) ಮೃತ ಮಹಿಳೆ. ಚನ್ನೇಶಪ್ಪ (45) ಶಿಲ್ಪಾಳನ್ನು ಕೊಲೆ ಮಾಡಿದ ಪತಿ.
ಕಳೆದ ಹತ್ತು ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಶಿಲ್ಪಾಳ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಡಾ. ಚನ್ನೇಶಪ್ಪ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ.
ಪತ್ನಿಗೆ ಹೆಕ್ಸಾಮೆಟಜೋನ್ ಸ್ಪಿರಾಯಡ್ ಹೈಡೋಸ್ ನೀಡಿ ಕೊಲೆಗೈದಿದ್ದಾನೆ. ಬಳಿಕ ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವನ್ನಪಿದ್ದಾಳೆ ಎಂದು ಆರೋಪಿ ವೈದ್ಯ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸಿದ್ದಾನೆ. ಈ ವೇಳೆ ಶವವನ್ನು ಆಸ್ಪತ್ರೆಗೆ ಕೊಂಡೊಯ್ಯುವ ಬದಲು ಮನೆಗೆ ತಂದಿದ್ದ ವೈದ್ಯ ಚನ್ನೇಶಪ್ಪ ಮೇಲೆ ಶಿಲ್ಪಾಳ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಶಿಲ್ಪಾಳ ಎಡ ಭುಜದ ಮೇಲೆ ಚುಚ್ಚುಮದ್ದಿನ ಗುರುತು ಪತ್ತೆಯಾಗಿದ್ದು, ಬಾಯಿಂದ ರಕ್ತ ಮಿಶ್ರಿತ ನೊರೆ ಬಂದಿದ್ದರಿಂದ ಶಿಲ್ಪಾ ಪಾಲಕರಿಗೆ ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಹೀಗಾಗಿ ಶಿಲ್ಪಾಳ ತಂದೆ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ವೈದ್ಯನ ವಿರುದ್ಧ ದೂರು ದಾಖಲಿಸಿದ್ದರು.
ಮೃತ ಶಿಲ್ಪಾಳ ಮೃತದೇಹವನ್ನು ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌ಎಸ್‍ಎಲ್ ತನಿಖೆ ವರದಿ ಎರಡು ಹೊಂದಿಕೆಯಾದ ಬೆನ್ನಲ್ಲೇ ಕೊಲೆ ಪ್ರಕರಣ ಖಚಿತಪಡಿಸಿಕೊಂಡ ಪೊಲೀಸರು ಡಾ. ಚನ್ನೇಶಪ್ಪ ವಿರುದ್ಧ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ. ಸದ್ಯ ಆರೋಪಿ ವೈದ್ಯ ಚನ್ನೇಶಪ್ಪ ನ್ಯಾಯಾಂಗ ಬಂಧನದಲ್ಲಿದ್ದು, ಕೊಲೆಗೆ ಕಾರಣ ತನಿಖೆ ಬಳಿಕ ತಿಳಿದು ಬರಬೇಕಾಗಿದೆ.
Click this button or press Ctrl+G to toggle between Kannada and English