ಪುನೀತ್ ರಾಜಕುಮಾರ್ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ : ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ

11:18 PM, Friday, October 29th, 2021
Share
1 Star2 Stars3 Stars4 Stars5 Stars
(No Ratings Yet)
Loading...

PunnethRajಬೆಂಗಳೂರು :  ವರನಟ ಡಾ.ರಾಜಕುಮಾರ್ ಸುಪುತ್ರ, ಖ್ಯಾತ ನಟ ಪುನೀತ್ ರಾಜಕುಮಾರ್ ಅಕಾಲಿಕ ನಿಧನ ಹೊಂದಿರುವುದು ಅತೀವ ಆಘಾತವನ್ನುಂಟು ಮಾಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ. ಕಿರಿಯ ವಯಸ್ಸಿನಲ್ಲಿಯೇ ದೊಡ್ಡ ಸಾಧನೆ ಮಾಡಿದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಜನಪ್ರಿಯ ಮೇರು ನಟ, ಯುವಜನತೆಯ ಕಣ್ಮಣಿ, ಯೂಥ್ ಐಕಾನ್ ಆಗಿದ್ದ ಪುನೀತ್ ನಿಧನ ಹೊಂದಿರುವುದು ಕಲಾರಂಗಕ್ಕೆ ಬಹಳ ದೊಡ್ಡ ನಷ್ಟ, ವಿಧಿಯ ಕ್ರೂರ ಆಟ” ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

“ವೈಯಕ್ತಿಕವಾಗಿ ಅತ್ಯಂತ ಆತ್ಮೀಯ ಸಹೃದಯ ಬಂಧುವನ್ನು ಕಳೆದುಕೊಂಡಿದ್ದೇನೆ. ಅವರ ಉತ್ಸಾಹ, ಪ್ರತಿಭೆ, ಅವರ ಅನೇಕ ಅತ್ಯುತ್ತಮ ಚಲನಚಿತ್ರಗಳನ್ನು, ಕನ್ನಡದ ಸಾಂಸ್ಕೃತಿಕ ರಾಯಭಾರಿಯಂತೆ ನಾಡಿನ ಸಮಸ್ತ ಜನತೆಯ ಮನೆ, ಮನ ತಲುಪಿದ್ದ ಅವರ ವ್ಯಕ್ತಿತ್ವವನ್ನು ಮರೆಯುವುದು ಸಾಧ್ಯವೇ ಇಲ್ಲ. ಅವರ ಆತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸುತ್ತೇನೆ.”

“ಅವರ ಕುಟುಂಬದವರಿಗೆ ದುಃಖ ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಕೋರುತ್ತೇನೆ ಎಂದು ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಸಂಯಮದಿಂದ ವರ್ತಿಸಿ: ಅಭಿಮಾನಿಗಳಿಗೆ ಮನವಿ
ಈ ದುಃಖಕರ ಸನ್ನಿವೇಶದಲ್ಲಿ, ಭಾವಾವೇಶಕ್ಕೆ ಒಳಗಾಗಿ ಅಹಿತಕರ ಘಟನೆಗಳಿಗೆ ಅವಕಾಶ ಕೊಡಬೇಡಿ, ಶಾಂತಿ, ಸಂಯಮದಿಂದ ವರ್ತಿಸಿ ಅಂತಿಮ ನಮನಗಳನ್ನು ಸಲ್ಲಿಸೋಣ ಎಂದು ಮುಖ್ಯಮಂತ್ರಿಗಳು ಪುನೀತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ಪುನೀತ್ ರಾಜ್ ಕುಮಾರ್ ಅವರ ಅಂತ್ಯಕ್ರಿಯೆಯ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English