ಮಂಗಳೂರು : ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ ಅವರು ನ.01ರ ಸೋಮವಾರ ಮಂಗಳೂರು ನಗರದ ನೆಹರೂ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.
ಬಳಿಕ ಮಾತನಾಡಿದ ಅವರು 66ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ದೇಶದ ತ್ರಿವರ್ಣ ಧ್ವಜಾರೋಹಣ ಮಾಡುವ ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ. ರಾಜ್ಯ ಮತ್ತು ಜಿಲ್ಲೆಯಾದ್ಯಂತ ಸುಖಃ, ಶಾಂತಿ, ನೆಮ್ಮದಿ ಮತ್ತು ಸಾಮರಸ್ಯ ನೆಲೆಸಲಿ ಹಾಗೂ ಸಮಸ್ತ ನಾಗರಿಕರು ಶಾಂತಿಯುತ, ಸಹಬಾಳ್ವೆ ನಡೆಸುವಂತಾಗಲಿ ಎಂದು ತಾಯಿ ಭುವನೇಶ್ವರಿ ದೇವಿಯನ್ನು ಪ್ರಾರ್ಥಿಸುತ್ತೇನೆ.
ಕರ್ನಾಟಕದ ಪರಂಪರೆಯು ದೇಶದ ಪುರಾತನ ಪರಂಪರೆಗಳಲ್ಲಿ ಒಂದು. ಕನ್ನಡ ನಾಡು ಕಾವೇರಿಯಿಂದ ಗೋದಾವರಿಯವರೆಗೆ ಪಸರಿಸಿತ್ತು. ವಿಜಯನಗರ ಸಾಮ್ರಾಜ್ಯ ಪತನದ ಬಳಿಕ ವಿವಿಧ ಆಡಳಿತಕ್ಕೆ ಒಳಪಟ್ಟಿದ್ದ ಈ ನಾಡು ಮತ್ತೆ ಒಂದಾಗಬೇಕಾದರೆ 391 ವರ್ಷಗಳ ಕಾಲ ಕಾಯಬೇಕಾಯಿತು. ಕರ್ನಾಟಕವೆಂಬುದು ಕೇವಲ ಒಂದು ಭೂ ಪ್ರದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕರ್ನಾಟಕವೆಂದರೆ ಒಂದು ಸಂಸ್ಕೃತಿ, ಒಂದು ಜನ ಸಮುದಾಯ, ಒಂದು ಜೀವನ ಪದ್ಧತಿ ಎಂಬ ವಿಶಾಲ ಅರ್ಥ ಹೊಂದಿದೆ.
ಬ್ರಿಟಿಷರ ಅಧಿಕಾರದಲ್ಲಿ ಹರಿದು ಹಂಚಿಹೋಗಿದ್ದ ಕರ್ನಾಟಕ ಏಕೀಕರಣದ ಕನಸನ್ನು ಡೆಪ್ಯೂಟಿ ಚೆನ್ನಬಸಪ್ಪ ಅವರು ಕಂಡಿದ್ದರು. ಅವರು 1865ರಲ್ಲಿ ಚಾಲನೆ ನೀಡಿದ ಚಳುವಳಿ ಒಂದುನೂರು ವರ್ಷಗಳವರೆಗೆ ನಿರಂತರ ಹೋರಾಟ ನಡೆಸಿದ ಫಲವಾಗಿ 1956ರ ನವೆಂಬರ್ 1 ರಂದು ಒಂದುಗೂಡಿದ ವಿಶಾಲ ಮೈಸೂರು ರಾಜ್ಯ ಉದಯವಾಗುದರೊಂದಿಗೆ ವಿವಿಧೆಡೆ ಹಂಚಿಹೋಗಿದ್ದ ಕನ್ನಡಿಗರನ್ನು ಭಾವನಾತ್ಮಕವಾಗಿ ಬೆಸೆಯಲಾಯಿತು.
ಇದಕ್ಕಾಗಿ ಹೋರಾಡಿದ ಆಲೂರು ವೆಂಕಟರಾಯ, ಆಚಾರ್ಯ ಬಿ.ಎಂ ಶ್ರೀಕಂಠಯ್ಯ, ಅ.ನ. ಕೃಷ್ಣರಾಯರು, ಮಂಗಳವೇಡೆ ಶ್ರೀನಿವಾಸರಾಯರು, ಎಸ್. ನಿಜಲಿಂಗಪ್ಪ, ಕೆ.ಎಫ್. ಪಾಟೀಲ, ಗೋರೂರು ರಾಮಸ್ವಾಮಿ ಅಯ್ಯಂಗಾರ, ಕಡಿದಾಳ ಮಂಜಪ್ಪ, ಕೆಂಗಲ್ ಹನುಮಂತಯ್ಯ, ಎಚ್.ಎಸ್. ದೊರೆಸ್ವಾಮಿ, ಬಳ್ಳಾರಿ ಸಿದ್ದಮ್ಮ, ಪಾಟೀಲ್ ಪುಟ್ಟಪ್ಪ ಸೇರಿದಂತೆ ಹಲವಾರು ಮಹನೀಯರು ಹಾಗೂ ಅಸಂಖ್ಯಾತ ಲೇಖಕ – ಲೇಖಕಿಯರನ್ನು, ಸಂಘ – ಸಂಸ್ಥೆಗಳನ್ನು, ಪತ್ರಿಕೋದ್ಯಮಿಗಳನ್ನು ಹಾಗೂ ಹೋರಾಟಗಾರರನ್ನು ನೆನೆಯಬೇಕಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಕನ್ನಡ ಭಾಷೆಗೆ ಈ ಜಿಲ್ಲೆಯ ಕೊಡುಗೆ ಅನನ್ಯ. ಪಂಜೆ ಮಂಗೇಶರಾವ್, ಗೋವಿಂದ ಪೈ, ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರಭಟ್ಟ, ಗೋಪಾಲ ಕೃಷ್ಣ ಅಡಿಗ, ಕಯ್ಯಾರ ಕಿಞ್ಣಣ್ಣ ರೈ, ಕುಡ್ಪಿ ವಾಸುದೇವ ಶೆಣೈ, ದಾಮೋದರ ಬಾಳಿಗ, ಪೇಜಾವರ ಸದಾಶಿವ ರಾವ್ ಸೇರಿದಂತೆ ಹಲವು ಕವಿಗಳು ಕನ್ನಡ ಭಾಷೆಯನ್ನು ಕಟ್ಟುವ, ಉಳಿಸಿ – ಬೆಳೆಸುವ ಕಾಯಕದಲ್ಲಿ ತೊಡಗಿದ್ದರು.
ಕನ್ನಡನಾಡು ಹರಿದು ಹಂಚಿ ಹೋಗಿದ್ದ ಅಂದಿನ ದಿನಗಳಲ್ಲಿ ಕನ್ನಡ ನಾಡಿನಾದ್ಯಂತ ಬೇರೆ ಬೇರೆ ಭಾಗಗಳಿಗೆ ಹೋಗಿ ಪಂಜೆ ಮಂಗೇಶರಾವ್, ಬೆನಗಲ್ ರಾಮರಾವ್, ಗೋವಿಂದ ಪೈ, ಶಿವರಾಮ ಕಾರಂತರು ಸೇರಿದಂತೆ ಹಲವು ಹಿರಿಯರು ಕನ್ನಡದ ಕಹಳೆ ಮೊಳಗಿಸಿದರು.
ಭಾರತೀಯ ಭಾಷೆ ಸಂಸ್ಕೃತಿಗಳು ಭಾರತೀಯರಷ್ಟೇ ಅಲ್ಲದೇ ಅನೇಕ ಪಾಶ್ಚಿಮಾತ್ಯ ಮಹನಿಯರೂ ಕೊಡುಗೆ ನೀಡಿದ್ದಾರೆ. ಕನ್ನಡದ ಮೊದಲ ದಿನಪತ್ರಿಕೆ ಮಂಗಳೂರು ಸಮಾಚಾರ ಪತ್ರಿಕೆ ರೆವ್. ಹರ್ಮನ್ ಫ್ರೆಡ್ರಿಕ್ ಮೊಗ್ಲಿಂಗ್ ಸಂಪಾದಕತ್ವದಲ್ಲಿ 1842 ರಲ್ಲಿ ಮಂಗಳೂರಿನಿಂದ ಪ್ರಕಟಣೆಯನ್ನು ಪ್ರಾರಂಭಿಸಿರುವುದು ನಮ್ಮ ಹೆಮ್ಮೆ. ಕೋವಿಡ್-19 ಸೋಂಕಿನ ಎರಡನೇ ಅಲೆ ನಿರ್ವಹಣೆಯಲ್ಲಿ ಜೀವದ ಹಂಗು ತೊರೆದು ತಮ್ಮನ್ನು ತೊಡಗಿಸಿಕೊಂಡಿರುವ ವೈದ್ಯರು, ಶುಶ್ರೂಷಕರು, ಇತರ ವೈದ್ಯಕೇತರ ಸಿಬ್ಬಂದಿ, ಪೊಲೀಸರು, ಜಿಲ್ಲಾ ಆಡಳಿತ, ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಯವರನ್ನು ಕೃತಜ್ಞತಾ ಪೂರ್ವಕವಾಗಿ ಈ ಸಂದರ್ಭದಲ್ಲಿ ನೆನೆಯುತ್ತೇನೆ ಎಂದರು.
ಆರೋಗ್ಯ ಇಲಾಖೆ:-
ಸಂಭಾವ್ಯ ಮೂರನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸಲು ಈಗಾಗಲೇ 12 ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳು ಜಿಲ್ಲೆಯಲ್ಲಿ ಕಾರ್ಯಾರಂಭ ಮಾಡಿವೆ. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ತಲಾ 5 ಬೆಡ್‌ಗಳಿಗೆ ಐಸಿಯು ವೆಂಟಿಲೇಟರ್ ಸೌಲಭ್ಯವನ್ನು ಕಲ್ಪಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ ಶೇ.89 ರಷ್ಟು ಮಂದಿಗೆ ಕೋವಿಡ್‌ನ ಮೊದಲನೇ ಡೋಸ್ ಹಾಗೂ ಶೇ.53 ಮಂದಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ.
ಖಾಸಗಿ ವೈದ್ಯಕೀಯ ಸಂಸ್ಥೆಯ ತಜ್ಞರೊಂದಿಗೆ ಆರೋಗ್ಯ ನಂದನ ಕಾರ್ಯಕ್ರಮದಡಿ ಅಪೌಷ್ಟಿಕ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ, ಹದಿ-ಹರೆಯದರಿಗೆ ಆರೋಗ್ಯ ತಪಾಸಣೆ ನಡೆಸಿ ಉನ್ನತ ಮಟ್ಟದ ಆರೋಗ್ಯ ಸಂಸ್ಥೆಗಳಿಗೆ ಶಿಫಾರಸ್ಸು ಮಾಡಲಾಗುತ್ತಿದೆ.
ಎಬಿ-ಎಆರ್‌ಕೆ ಯೋಜನೆಯಡಿ 5,490 ಕೋವಿಡ್ ಹಾಗೂ 15,840 ಕೋವಿಡ್‌ಯೇತರ ರೋಗಿಗಳಿಗೆ 61 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತವನ್ನು ಚಿಕಿತ್ಸೆಗೆ ಪಾವತಿಸಲಾಗಿದೆ.
ಜಿಲ್ಲೆಯ ಆರೋಗ್ಯಾಧಿಕಾರಿಗಳಿಗೆ ಉತ್ತಮ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಇತ್ತೀಚಿಗೆ ನೂತನ ಸ್ಕಾರ್ಪಿಯೋ ಹಾಗೂ ಬೊಲೇರೋ ವಾಹನಗಳನ್ನು ನೀಡುವ ಮೂಲಕ ಪ್ರೋತ್ಸಾಹಿಸಲಾಗಿದೆ.
ಒಂದು ಸಾವಿರ ಹಾಗೂ 930 ಲೀ. ವೈದ್ಯಕೀಯ ಆಮ್ಲಜನಕವನ್ನು ಉತ್ಪಾದನೆ ಮಾಡುವ ಘಟಕವನ್ನು ಇತ್ತೀಚೆಗಷ್ಟೇ ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ ಆವರಣದಲ್ಲಿ ಲೋಕಾರ್ಪಣೆ ಮಾಡಲಾಯಿತು.
ಕೃಷಿ ಇಲಾಖೆ:-
ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಒಟ್ಟು 10,085 ಹೆಕ್ಟೇರ್ ಕ್ಷೇತ್ರದಲ್ಲಿ ಭತ್ತದ ಬಿತ್ತನೆuಟಿಜeಜಿiಟಿeಜಯಾಗಿದೆ.
ಮುಂಗಾರು ಬೆಳೆ ಸಮೀಕ್ಷೆ ಯೋಜನೆಯಡಿ 7,38,260 ರೈತರ ತಾಲೂಕುಗಳಲ್ಲಿ ಬೆಳೆದ ಬೆಳೆಯನ್ನು ತಾಂತ್ರಾಂಶದಲ್ಲಿ ನೋಂದಾಯಿಸಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 356 ಹೆಕ್ಟೇರ್ ಹಡೀಲು ಪ್ರದೇಶದಲ್ಲಿ ಭತ್ತ ಬೆಳೆಯಲು ಪ್ರೇರೆಪಿಸಲಾಗಿದೆ.
ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ 194 ರೈತರಿಗೆ ಪ್ರೋತ್ಸಾಹಧನ ವಿತರಿಸಲಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಜಿಲ್ಲೆಯ ಒಟ್ಟು 1,54,516 ರೈತರ ಖಾತೆಗೆ ಒಟ್ಟು 219.68 ಕೋಟಿ ರೂ.ಗಳು ಜಮೆ ಆಗಿದೆ.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ಇದುವರೆಗೂ 473 ರೈತರ ಮಕ್ಕಳಿಗೆ ಶಿಷ್ಯ ವೇತನಕ್ಕೆ ಅನುಮೋದನೆ ನೀಡಲಾಗಿದೆ.
ತೋಟಗಾರಿಕೆ ಇಲಾಖೆ:-
ತೋಟಗಾರಿಕೆಯೆಡೆಗೆ ರೈತರನ್ನು ಪ್ರೋತ್ಸಾಹಿಸುವ ಹಾಗೂ ಲಾಭದಾಯಕವಾಗಿಸುವ ನಿಟ್ಟಿನಲ್ಲಿ ತೋಟಗಾರಿಕೆ ಬೆಳೆಗಳ ಉತ್ಪಾದನೆ, ಸಂಸ್ಕರಣೆ ಮತ್ತು ಮೌಲ್ಯವರ್ಧನೆ, ಮಾರುಕಟ್ಟೆ ಸೌಲಭ್ಯಗಳು ಹಾಗೂ ಇತರೆ ತೋಟಗಾರಿಕೆ ಸಂಬAಧಿತ ಚಟುವಟಿಕೆಗಳಿಗೆ ವಿವಿಧ ಯೋಜನೆಗಳಡಿ ರೈತರಿಗೆ ಸಹಾಯಧನ ನೀಡಲಾಗುತ್ತಿದೆ.
ಸುಳ್ಯ ಸೇರಿದಂತೆ ಕರಾವಳಿ ಭಾಗದಲ್ಲಿ ಅಡಕೆಗೆ ಹಳದಿ ಎಲೆ ರೋಗ ಬಾಧಿಸುತ್ತಿದ್ದು, 18 ಕೋಟಿ ರೂಗಳ ಪ್ಯಾಕೇಜ್ ನೀಡುವಂತೆ ರಾಜ್ಯ ಸರ್ಕಾರಕ್ಕೆ ತೋಟಗಾರಿಕೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೆ ಶೀಘ್ರ ಮಂಜೂರಾತಿ ದೊರೆಯುವ ನಿರೀಕ್ಷೆಯಿದೆ.
3,000 ಎಕರೆಗಳಲ್ಲಿ ಹಳದಿ ಎಲೆ ರೋಗ ಅಧ್ಯಯನ ಹಾಗೂ ಪರ್ಯಾಯ ಬೆಳೆಗಳ ಬಗ್ಗೆ ಪ್ಯಾಕೇಜ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಲೋಕೋಪಯೋಗಿ ಇಲಾಖೆ:-
ಜಿಲ್ಲೆಯಲ್ಲಿ 2020-21ನೇ ಸಾಲಿನಲ್ಲಿ ಅತಿವೃಷ್ಠಿಯಿಂದ ಪ್ರವಾಹ ಬಂದು ರಸ್ತೆ, ಸೇತುವೆ ಹಾಗೂ ಕಟ್ಟಡಗಳು ಹಾನಿಗೊಂಡಿದ್ದವು, 26 ಕೋಟಿ ಅನುದಾನದಲ್ಲಿ 87 ರಸ್ತೆಗಳು, 22 ಸೇತುವೆಗಳು, ಮೋರಿಗಳು ಮತ್ತು 46 ಕಟ್ಟಡಗಳನ್ನು ದುರಸ್ತಿಗೊಳಿಸಲು ಕ್ರಮವಹಿಸಲಾಗಿದೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸಂಪರ್ಕಿಸುವ ಮುಖ್ಯ ರಸ್ತೆಯಾದ ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿ ಸಂಖ್ಯೆ 67 ರಲ್ಲಿ 1 ಕೆಳ ಸೇತುವೆ ಹಾಗೂ 1 ಬೃಹತ್ ಸೇತುವೆಯನ್ನೊಳಗೊಂಡಂತೆ 2.27 ಕಿ.ಮೀ ಉದ್ದದ ಚಾಚುವನ್ನು (ವ್ಯಾಪ್ತಿಯ ಪ್ರದೇಶವನ್ನು) ಚತುಷ್ಪಥಗೊಳಿಸಿ ಅಭಿವೃದ್ಧಿಪಡಿಸುವ ಕಾಮಗಾರಿಯನ್ನು 50 ಕೋಟಿ ಅಂದಾಜು ಮೊತ್ತದಲ್ಲಿ ಕೈಗೊಂಡಿದ್ದು, ಹೊಸ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಸಮಾಜ ಕಲ್ಯಾಣ ಇಲಾಖೆ:-
ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 2021-22ನೇ ಸಾಲಿಗೆ ಎಸ್.ಎಸ್.ಎಲ್.ಸಿಯಲ್ಲಿ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾದ 378 ವಿದ್ಯಾರ್ಥಿಗಳಿಗೆ 72.30 ಲಕ್ಷ ರೂ.ಗಳು ಹಾಗೂ ಮೆಟ್ರಿಕ್ ನಂತರದ 37 ವಿದ್ಯಾರ್ಥಿಗಳಿಗೆ 10.20 ಲಕ್ಷ ರೂ.ಗಳ ಪ್ರೋತ್ಸಾಹಧನ ನೀಡಲಾಗಿದೆ.
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆ:-
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಜಿಲ್ಲೆಯ 32 ಗ್ರಾಮಗಳು ಆಯ್ಕೆಯಾಗಿವೆ. ಈ ಗ್ರಾಮಗಳ ವಿವಿಧ ಮೂಲಭೂತ ಸೌಕರ್ಯಗಳ ಅಭಿವೃದ್ದಿಗೆ ಒಟ್ಟು ರೂ. 32 ಕೋಟಿ ರೂ.ಗಳ ಅನುದಾನ ಹಂಚಿಕೆ ಮಾಡಲಾಗಿದ್ದು, 710 ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ.
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ:-
ಯೋಜನೆಯಡಿ ಜಿಲ್ಲೆಯಲ್ಲಿ 1,46,723 ಕುಟುಂಬಗಳಿಗೆ ಉದ್ಯೋಗ ಚೀಟಿ ವಿತರಿಸಲಾಗಿದೆ. ಇದೂವರೆಗೆ 9.86 ಲಕ್ಷ ಮಾನವ ದಿನಗಳನ್ನು ಸೃಜಿಸಿ 4870.36 ಲಕ್ಷ ರೂ.ಗಳನ್ನು ವೆಚ್ಚ ಮಾಡಲಾಗಿದೆ.
ಗ್ರಾಮೀಣ ವಸತಿ ಯೋಜನೆ:-
ಅಮೃತ ಗ್ರಾಮೀಣ ವಸತಿ ಯೋಜನೆಗೆ ಆಯ್ಕೆಗೊಂಡಿರುವ 27 ಗ್ರಾಮ ಪಂಚಾಯತ್‌ಗಳಲ್ಲಿ ಒಟ್ಟು 2,390 ವಸತಿ ರಹಿತರು ಹಾಗೂ 3,170 ನಿವೇಶನ ರಹಿತರಿದ್ದು, ಅವರೆಲ್ಲರಿಗೂ ಸೌಲಭ್ಯ ಕಲ್ಪಿಸುವ ಗುರಿಯನ್ನು ಹೊಂದಲಾಗಿದೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ:-
ಬಾಡಿಗೆ ಕಟ್ಟಡದಲ್ಲಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಕ್ಕೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಸಕ್ತ ಸಾಲಿನಲ್ಲಿ 2.01 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿದೆ.
ಅಲೆಮಾರಿ, ಅರೆ-ಅಲೆಮಾರಿ ಜನಾಂಗದ ನಿವೇಶನ ರಹಿತರಿಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 9 ಅರ್ಹ ಫಲಾನುಭವಿಗಳಿಗೆ ನಿವೇಶನ ಮಂಜೂರು ಮಾಡಿ ಹಕ್ಕುಪತ್ರಗಳನ್ನು ವಿತರಿಸಲಾಗಿದೆ.
ಶಿಕ್ಷಣ ಇಲಾಖೆ:-
ಜಿಲ್ಲೆಯಲ್ಲಿ ಒಂದೂವರೆ ವರ್ಷದ ನಂತರ ಪೂರ್ಣ ಪ್ರಮಾಣದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಭೌತಿಕ ತರಗತಿಗಳು ಯಶಸ್ವಿಯಾಗಿ ಪ್ರಾರಂಭಗೊಂಡಿದೆ. 3,20,000 ವಿದ್ಯಾರ್ಥಿಗಳು ಅತ್ಯಂತ ಸಂತಸದಿಂದ ತರಗತಿಗಳಿಗೆ ಹಾಜರಾಗುತ್ತಿದ್ದಾರೆ. ನಿತ್ಯದ ಹಾಜರಾತಿ ಪ್ರಮಾಣ ಉತ್ತಮವಾಗಿದೆ.
27 ಶಾಲೆಗಳ ಭೌತಿಕ ಸೌಲಭ್ಯಗಳಿಗೆ 2.70 ಕೋಟಿ ರೂ.ಗಳ ಅನುದಾನ ಕಾಯ್ದಿರಿಸಿ, ಕ್ರಿಯಾ ಯೋಜನೆಯ ಅನುಮೋದನೆಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಬಂಟ್ವಾಳ ತಾಲೂಕಿನ ಮೊಂಟೆಪದವು, ಪುತ್ತೂರು ತಾಲೂಕಿನ ಕೆಯ್ಯೂರುನಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳಿಗೆ ಮೂಲಭೂತ ಸೌಲಭ್ಯಗಳ ಅಭಿವೃದ್ಧಿಗೆ ತಲಾ 2 ಕೋಟಿಯಂತೆ ಒಟ್ಟು 4 ಕೋಟಿ ರೂ.ಗಳ ಅನುದಾನ ಮಂಜೂರಾಗಿದೆ.
6 ರಿಂದ 10ನೇ ತರಗತಿಯ ಮಕ್ಕಳಿಗೆ 2021ರ ಅಕ್ಟೋಬರ್ 21 ರಿಂದ ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ, ಅದರಂತೆ ನವೆಂಬರ್ 2 ರಿಂದ 1-5ನೇ ತರಗತಿಯ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಪ್ರಾರಂಭಿಸಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ.
2021-22ನೇ ಸಾಲಿನಲ್ಲಿ ಬಂಟ್ವಾಳ ತಾಲೂಕಿನ ವಿಟ್ಲ ಹಾಗೂ ದಡ್ಡಲಕಾಡು ಶಾಲೆಗಳನ್ನು ಪ್ರೌಢ ಶಾಲೆಗಳಾಗಿ ಮೇಲ್ದರ್ಜೆಗೇರಿಸಲಾಗಿದೆ.
ನೂತನ ರಾಷ್ಟ್ರೀಯ ಶಿಕ್ಷಣ ನೀತಿ- 2020 ರನ್ವಯ 70 ಸರಕಾರಿ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆಯಲು ಕೇಂದ್ರ ಸರಕಾರ ಅನುಮೋದನೆ ನೀಡಿದೆ.
ಅರಣ್ಯ ಇಲಾಖೆ:-
ಪ್ರಸಕ್ತ ಸಾಲಿನಲ್ಲಿ 1,42,398 ಸಸಿಗಳನ್ನು ರೈತರಿಗೆ ಮತ್ತು ಸಾರ್ವಜನಿಕರಿಗೆ ವಿತರಿಸಲಾಗಿದೆ. ಮಾನವ ಪ್ರಾಣಿ ಸಂಘರ್ಷ ತಡೆಗೆ 6.46 ಕಿ.ಮೀ ಆನೆ ನಿರೋಧಕ ಕಂದಕ, 303 ಮೀ. ಕಾಂಕ್ರೀಟ್ ವಿಶೇಷ ತಡೆ ರಚನೆಯನ್ನು ಮಾಡಲಾಗಿದೆ ಹಾಗೂ ವನ್ಯ ಪ್ರಾಣಿಗಳಿಂದಾದ ಹಾನಿಗಳಲ್ಲಿ 116 ಪ್ರಕರಣಗಳಿಗೆ 19 ಲಕ್ಷ ರೂ.ಗಳ ಪರಿಹಾರ ಧನ ವಿತರಿಸಲಾಗಿದೆ.
ಪ್ರವಾಸೋದ್ಯಮ ಇಲಾಖೆ:-
ಪಣಂಬೂರು, ತಣ್ಣೀರು ಬಾವಿ, ಸೊಮೇಶ್ವರ, ತಲಪಾಡಿ, ಸಸಿಹಿತ್ಲು, ಸುರತ್ಕಲ್, ಉಳ್ಳಾಲ ಹಾಗೂ ಮುಕ್ಕ ಕಡಲ ತೀರಗಳಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಕಟೀಲು ದುರ್ಗಾಪರಮೇಶ್ವರಿ, ಕದ್ರಿ ಮಂಜುನಾಥ, ಉರ್ವಾ ಮಾರಿಯಮ್ಮ, ಮಂಗಳಾದೇವಿ, ಪೊಳಲಿ ರಾಜರಾಜೇಶ್ವರಿ, ಧರ್ಮಸ್ಥಳ, ಸೌತಡ್ಕ ಗಣಪತಿ, ಮರೋಳಿ ಸೂರ್ಯ ನಾರಾಯಣ ದೇವಸ್ಥಾನ ಸೇರಿದಂತೆ ಇತರೆ ಪ್ರವಾಸಿ ತಾಣಗಳಿಗೆ ಯಾತ್ರಿ ನಿವಾಸ, ರಸ್ತೆ, ಶೌಚಾಲಯಗಳು ಸೇರಿದಂತೆ 23.6 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಂಡ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ.
ಜಿಲ್ಲಾ ಕೈಗಾರಿಕಾ ಕೇಂದ್ರ:-
ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆಗೆ ಕೇಂದ್ರ ಸರಕಾರದ ಅನುಮೋದನೆ ದೊರೆತಿದೆ. ಅದರಿಂದ ಪ್ಲಾಸ್ಟಿಕ್ ಆಧಾರಿತ ಆಧುನಿಕ ಉತ್ಫನ್ನಗಳನ್ನು ತಯಾರಿಸುವ ಕೈಗಾರಿಕೆಗಳ ಸ್ಥಾಪನೆಗೆ ಪೂರಕ ವಾತಾವರಣ ನಿರ್ಮಾಣವಾಗಲಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.
ಪಶುಪಾಲನ ಹಾಗೂ ಪಶು ವೈದ್ಯಕೀಯ ಸೇವಾ ಇಲಾಖೆ:-
ಸರಕಾರಿ ಗೋಶಾಲೆ ನಿರ್ಮಿಸಲು ಕಡಬ ತಾಲೂಕಿನ ರಾಮಕುಂಜ ಗ್ರಾಮದಲ್ಲಿ 98.45 ಎಕರೆ ಪ್ರದೇಶವನ್ನು ಮೀಸಲಿಡಲಾಗಿದ್ದು, 24 ಲಕ್ಷ ರೂ,ಗಳ ಅನುದಾನ ಬಿಡುಗಡೆಯಾಗಿದೆ.
ಮೀನುಗಾರಿಕಾ ಇಲಾಖೆ:-
ಮುಖ್ಯಮಂತ್ರಿಗಳ ಕೋವಿಡ್ ಪ್ಯಾಕೇಜ್-2 ನಲ್ಲಿ ಘೋಷಿಸಿದಂತೆ ತಲಾ ಮೂರು ಸಾವಿರ ರೂ.ಗಳಂತೆ 1,558 ಮೀನುಗಾರರಿಗೆ 46.74 ಲಕ್ಷ ರೂ. ಗಳನ್ನು ಪರಿಹಾರ ವಿತರಿಸಲಾಗಿದೆ.
ಆಳ ಸಮುದ್ರ ಮೀನುಗಾರಿಕೆಯ ಬಲವರ್ಧನೆಗೆ ಪ್ರೋತ್ಸಾಹ ನೀಡುತಿದ್ದು, 72 ಲಕ್ಷ ರೂ. ಗಳ ಸಹಾಯಧನವನ್ನು ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ.
17.29 ಕೋಟಿ ರೂ.ಗಳ ಮೊತ್ತದ ಡಿಸೇಲ್ ಮೇಲಿನ ಮಾರಾಟಕರ ಸಹಾಯಧನವನ್ನು 949 ಯಂತ್ರೀಕೃತ ದೋಣಿಗಳ ಮಾಲೀಕರ ಖಾತೆಗೆ ಈಗಾಗಲೇ ವರ್ಗಾವಣೆ ಮಾಡಲಾಗಿದೆ.
ಯಾಂತ್ರೀಕೃತ ಮೀನುಗಾರಿಕೆಯನ್ನು ಲಾಭದಾಯಕಗೊಳಿಸಲು ನೋಂದಾಯಿತ ದೋಣಿ ಮಾಲೀಕರ ದೋಣಿಗಳು ಬಳಸುವ ಡೀಸೆಲ್ ಮೇಲಿನ ಮಾರಾಟಕರವನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.
ಸ್ಮಾರ್ಟ್ ಸಿಟಿ:-
ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ 930 ಕೋಟಿ ರೂ. ಗಳಿಗೆ ಒಟ್ಟು 45 ಕಾಮಗಾರಿಗಳು ಅನುಮೋದನೆಗೊಂಡಿವೆ. ಅವುಗಳಲ್ಲಿ ಸರಕಾರಿ ಕಟ್ಟಡಗಳಲ್ಲಿ ಎಲ್.ಇ.ಡಿ ಬಲ್ಪ್ ಅಳವಡಿಕೆ, ಕ್ಲಾಕ್ ಟವರ್ ನಿರ್ಮಾಣ, ವಿವಿಧ ರಸ್ತೆಗಳ ನಿರ್ಮಾಣ, ಇ-ಶೌಚಾಲಯ ಸೇರಿದಂತೆ ವಿವಿಧ 14 ಕಾಮಗಾರಿಗಳು ಪೂರ್ಣಗೊಂಡಿದ್ದು ಸಾರ್ವಜನಿಕರ ಸೇವೆಗೆ ಸಮರ್ಪಣೆಯಾಗಿವೆ.
ಕೊನೆಯದಾಗಿ ಒಂದು ಮಾತು
ಸರ್ವ ಸಮುದಾಯಗಳನ್ನೊಳಗೊಂಡ ಸರ್ವತೋಮುಖ ಬೆಳವಣಿಗೆ ಮತ್ತು ಹಲವಾರು ಯೋಜನೆಗಳ ಮೂಲಕ ಸಾಮಾಜಿಕ ನ್ಯಾಯದ ಪರಿಕಲ್ಪನೆಯೊಂದಿಗೆ ಎಲ್ಲರಿಗೂ ನ್ಯಾಯ ಒದಗಿಸಲು ನಮ್ಮ ಸರಕಾರ ಬದ್ಧವಾಗಿದೆ.
ಕರ್ನಾಟಕದ ಭವ್ಯ ಪರಂಪರೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸಿಕೊಂಡು ಹೋಗುವತ್ತ ನಾವೆಲ್ಲರೂ ಶ್ರಮಿಸಬೇಕು. ಜಾತಿ, ಪಂಗಡಗಳ ಸಂಕುಚಿತ ಭಾವನೆಯಿಂದ ಹೊರಬಂದು ಸ್ನೇಹ ಹಾಗೂ ಸೌಹಾರ್ದತೆಯ ವಾತಾವರಣ ನಿರ್ಮಿಸಿ ದೇಶದ ಒಗ್ಗಟ್ಟು ಮತ್ತು ಏಕತೆಯನ್ನು ಕಾಪಾಡಿ ಬಲಿಷ್ಠರಾಷ್ಟ್ರ ನಿರ್ಮಾಣ ಮಾಡುವುದಕ್ಕೆ ಒಟ್ಟಾಗಿ ಸೇರಿ ಶ್ರಮಿಸೋಣ…
“ಕಾಯಕವೇ ಕೈಲಾಸ” ಎಂಬ ಬಸವಣ್ಣನವರ ನುಡಿಯಂತೆ ನಾವೆಲ್ಲ ಸಾಗುತ್ತಾ… ಸನ್ಮಾನ್ಯ ಮೋದಿಜಿ ಅವರ “ಆತ್ಮನಿರ್ಭರ್ ಭಾರತ್” ಸಾಧನೆಯ ಕನಸನ್ನು ನನಸಾಗಿಸೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲೆಯ 57 ಸಾಧಕರಿಗೆ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ, ಗೌರವಿಸಲಾಯಿತು. ಈ ಬಾರಿ ಒಟ್ಟು 57 ಸಾಧಕರಿಗೆ ಈ ಬಾರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ.
ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರಿವರು:
ಸಮಾಜ ಸೇವೆಯಲ್ಲಿ-ಮಂಗಳೂರಿನ ಎಸ್.ಎಸ್. ನಾಯಕ್, ಕ್ರೀಡೆಯಲ್ಲಿ-ಬಂಟ್ವಾಳ ತಾಲೂಕಿನ ಬದಿಗುಡ್ಡ ಮನೆಮಾಣಿ ಉದಯ ಚೌಟ, ಕಂಬಳದಲ್ಲಿ-ಹಳದಂಗಡಿ ರವಿಕುಮಾರ್, ಸಮಾಜ ಸೇವೆಯಲ್ಲಿ-ಕಾಟಿಪಳ್ಳದ ಕೂಸಪ್ಪ ಶೆಟ್ಟಿಗಾರ್, ಸಮಾಜ ಸೇವೆಯಲ್ಲಿ-ಬೆಳ್ತಂಗಡಿಯ ವಿವೇಕ್ ವಿನ್ಸೆಂಟ್ ಪಾಯಿಸ್, ಸಮಾಜ ಸೇವೆಯಲ್ಲಿ- ಮಂಗಳೂರಿನ ಕೆ. ರಾಮ ಮೊಗರೋಡಿ, ಸಮಾಜ ಸೇವೆಯಲ್ಲಿ ಮಂಗಳೂರಿನ ಡಾ. ಅಶೋಕ್ ಶೆಟಿ ್ಟ.ಬಿ.ಎನ್, ಸಮಾಜ ಸೇವೆಯಲ್ಲಿ- ಮಂಗಳೂರಿನ ಬೋಳಾರ್ ತಾರಾನಾಥ್ ಶೆಟ್ಟಿ, ಕ್ರೀಡೆಯಲ್ಲಿ ಮಂಗಳೂರಿನ ದಿನೇಶ್ ಕುಂದರ್, ಕ್ರೀಡೆಯಲ್ಲಿ ಮಂಗಳೂರಿನ ಸತೀಶ್ ಬೋಳಾರ್, ಕ್ರೀಡೆಯಲ್ಲಿ ಅನೀಲ್ ಮೆಂಡೋನ್ಸಾ, ಕ್ರೀಡೆಯಲ್ಲಿ ಬಂಟ್ವಾಳ ತಾಲೂಕಿನ ಕು. ಜಯಲಕ್ಷ್ಮೀ.ಜಿ, ಕ್ರೀಡೆಯಲ್ಲಿ ಮಂಗಳೂರಿನ ಕುಲಶೇಖರದ ಕು. ವೆನಿಜಿಯಾ ಆ್ಯನ್ನಿ ಕಾರ್ಲೊ, ಕ್ರೀಡೆಯಲ್ಲಿ ಮಂಗಳೂರಿನ ಕುಲಶೇಖರದ ವಿನ್ಸೆಂಟ್ ಪ್ರಕಾಶ್ ಕಾರ್ಲೊ, ಸ್ಯಾಕ್ಸೋಪೋನ್ ವಾದಕದಲ್ಲಿ ಬಂಟ್ವಾಳ ತಾಲೂಕಿನ ಪಡಿಬಾಗಿಲು ಮನೆ ಅಳಕೆಯ ಪಿ.ಕೆ. ದಾಮೋದರ, ನಾಗಸ್ವರ ವಾದಕದಲ್ಲಿ ಮಂಗಳೂರಿನ ಶಿಬರೂರು-ದೇಲಂತಬೆಟ್ಟುವಿನ ಶಿವರಾಮ ಶೇರಿಗಾರ, ಸಾಂಸ್ಕøತಿಕ ವಿಭಾಗದಲ್ಲಿ ಮಂಗಳೂರಿನ ಜಗಜ್ಜನನಿ ಕುಕ್ಕೆ ರೊಟ್ಟು ಮನೆ ಹೊಸಬೆಟ್ಟುವಿನ ಶಂಕರ್.ಜೆ.ಶೆಟ್ಟಿ, ತಾಸೆ ವಾದಕ ವಿಭಾಗದಲ್ಲಿ ಮೂಡಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಅಣ್ಣಿ ಸುವರ್ಣ, ನಾದಸ್ವರ ವಾದಕ ವಿಭಾಗದಲ್ಲಿ ಮೂಡಬಿದಿರೆ ತಾಲೂಕಿನ ಬಡಗಮಿಜಾರುವಿನ ಎ.ಕೆ. ಉಮಾನಾಥ್ ದೇವಾಡಿಗ, ತಾಳಮದ್ದಳೆ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಪದ್ಮನಾಭ್ ಶೆಟ್ಟಿಗಾರ್, ನಾಗಸ್ವರ ವಾದಕ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಅರಳ ಗ್ರಾಮದ ನಾಗೇಶ್ ಶೇರಿಗಾರ, ನಾಟಕ ವಿಭಾಗದಲ್ಲಿ ಕಡಬ ತಾಲೂಕಿನ ರವಿ ರಾಮಕುಂಜ, ಯಕ್ಷಗಾನ ವಿಭಾಗದಲ್ಲಿ ಸುಳ್ಯ ತಾಲೂಕಿನ ಜಯಾನಂದ ಸಂಪಾಜೆ, ಸಂಗೀತ ವಿಭಾಗದಲ್ಲಿ ಪುತ್ತೂರು ತಾಲೂಕಿನ ಪುತ್ತೂರು ಪಾಂಡುರಂಗ ನಾಯಕ್, ಸಾಂಸ್ಕøತಿಕ ವಿಭಾಗದಲ್ಲಿ ಪುತ್ತೂರು ತಾಲೂಕಿನ ಕರ್ಕುಂಜದ ಲಿಂಗಪ್ಪ ಗೌಡ ಕಡೆಂಗ, ಸಾಹಿತ್ಯ ವಿಭಾಗದಲ್ಲಿ ಬೆಳ್ತಂಗಡಿ ತಾಲೂಕಿನ ಪ.ರಾಮಕೃಷ್ಣ ಶಾಸ್ತ್ರಿ, ಸಾಂಸ್ಕøತಿಕ ವಿಭಾಗದಲ್ಲಿ À ಉಳ್ಳಾಲದ ಡಾ.ಅರುಣ್ ಉಳ್ಳಾಲ್, ಜಾನಪದ ವಿಭಾಗದಲ್ಲಿ ಕೊಂಚಾಡಿಯ ಉಮೇಶ್ ಪಂಬದ, ಜಾನಪದ ವಿಭಾಗದಲ್ಲಿ ಹಳೆಯಂಗಡಿಯ ಶ್ರೀ ಕೃಷ್ಣ ಪೂಜಾರಿ, ವೈದ್ಯಕೀಯ ವಿಭಾಗದಲ್ಲಿ ಮಂಗಳಾದೇವಿಯ ಡಾ. ಗೋಪಾಲ್ ಕೃಷ್ಣ ಭಟ್.ಬಿ.ಸಂಕಬಿತ್ತಿಲು, ವೈದ್ಯಕೀಯ ವಿಭಾಗದಲ್ಲಿ ಬಿಜೈನ ಡಾ.ಶಶಿಕಾಂತ್ ತಿವಾರಿ, ನಾಟಿ ವೈದ್ಯ ವಿಭಾಗದಲ್ಲಿ ಬಂಟ್ವಾಳ ತಾಲೂಕಿನ ಬಡಗ ಬೆಳ್ಳೂರುವಿನ ಶೀನಾ ಪೂಜಾರಿ, ಪತ್ರಿಕೋದ್ಯಮ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕೋಡಿಕಲ್‍ನ ಶಿವಪ್ರಸಾದ್.ಬಿ, ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾಧರ್ ಶೆಟ್ಟಿ, ಪತ್ರಿಕೋದ್ಯಮ ವಿಭಾಗದಲ್ಲಿ ಗುವಾಯನ ಕೆರೆಯ ಕುವೆಟ್ಟು ಗ್ರಾಮದ ಬಿ.ಶ್ರೀನಿವಾಸ್ ಕುಲಾಲ್, ಗಡಿನಾಡು (ಯಕ್ಷಗಾನ) ವಿಭಾಗದಲ್ಲಿ ಕಾಸರಗೋಡು ಜಿಲ್ಲೆಯ ರಾಘವ್ ಬಳ್ಳಾಲ್ ಕಾರಡ್ಕ, ಹೊರನಾಡು ವಿಭಾಗದಲ್ಲಿ (ಬಹರೈನ್‍ನಲ್ಲಿ ವಾಸ) ಕಮಲಾಕ್ಷ ಅಮೀನ್, ಚಿತ್ರಕಲೆ ವಿಭಾಗದಲ್ಲಿ ಮಂಗಳೂರು ತಾಲೂಕಿನ ಕಾಟಿಪಳ್ಳದ ದೇವಿ ಕಿರಣ್ ಗಣೇಶ್‍ಪುರ, ಕೃಷಿ ವಿಭಾಗದಲ್ಲಿ ಪುತ್ತೂರು ತಾಲೂಕಿನ ಕೆದಂಬಾಡಿಯ ಕಡಮಜಲು ಶ್ರೀ ಸುಭಾಸ್ ರೈ.ಬಿ.ಎ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಬೊಕ್ಕಪಟ್ಣದ ವೀರನಾಯಕ್ ಜನಸೇವಾ ಟ್ರಸ್ಟ್‍ಗೆ, ಸಮಾಜ ಸೇವೆಯಲ್ಲಿ ಮುಲ್ಕಿಯ ಬಿಲ್ಲವ ಸಮಾಜ ಸೇವ ಸಂಘ, ಸಮಾಜ ಸೇವೆಯಲ್ಲಿ ಉರ್ವದ ಚಿಲಿಂಬಿಯ ಬಾಲಕರ ಸಾರ್ವಜನಿಕ ಶ್ರೀ ಶಾರದ ಮಹೋತ್ಸವ ಟ್ರಸ್ಟ್, ಸಮಾಜ ಸೇವೆಯಲ್ಲಿ ಬಂಟ್ವಾಳ ತಾಲೂಕಿನ ಕಡೆಶಿವಾಲಯದ ಯುವಶಕ್ತಿ ಕಡೆ ಶಿವಾಲಯ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಜಪ್ಪು ಕಡೆಕಾರು ಮಲ್ಲಿಕಾರ್ಜುನ ಸೇವಾ ಸಂಘ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕುಳಾಯಿಯ ಸ್ಪಂದನಾ ಫ್ರೆಂಡ್ಸ್ ಸರ್ಕಲ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಪಣಂಬೂರಿನ ಬೈಕಂಪಾಡಿ ವಿದ್ಯಾರ್ಥಿ ಸಂಘ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಉಜಿರೆಯ ಸ್ವಾಮಿ ಶ್ರೀ ವಿವೇಕಾನಂದ ಸೇವಾಶ್ರಮ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕಿನ್ಯದ ಶ್ರೀ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ತೊಕ್ಕೊಟ್ಟುವಿನ ಹೆಲ್ತ್ ಇಂಡಿಯಾ ಫೌಂಡೇಷನ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಮರೋಳಿಯ ವೈಟ್ ಡೌಸ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕೋಟೆಕಾರ್‍ನ ಕೇಸರಿ ಮಿತ್ರ ವೃಂದ, ಭರತನಾಟ್ಯದಲ್ಲಿ ಮಂಗಳೂರು ತಾಲೂಕಿನ ಬಳ್ಳಾಲ್ ಬಾಗ್‍ನ ಸನಾತನ ನಾಟ್ಯಾಲಯ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಉಳ್ಳಾಲದ ಶ್ರೀ ಸಾಯಿ ಪರಿವಾರ್ ಟ್ರಸ್ಟ್, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಹಳೆಯಂಗಡಿಯ ಶ್ರೀ ಸುಬ್ರಹ್ಮಣ್ಯ ಮಹಾಗಣಪತಿ ಸ್ಪೋಟ್ರ್ಸ ಕ್ಲಬ್-ತೋಕೂರು, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಪಡುಪೆರಾರ್‍ನ ಶ್ರೀ ನಾಗಬ್ರಹ್ಮ ಯುವಕ ಮಂಡಲ, ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಕಂಕನಾಡಿಯ ಕಂಕನಾಡಿ ಯುವಕ ವೃಂದ ಹಾಗೂ ಸಮಾಜ ಸೇವೆಯಲ್ಲಿ ಮಂಗಳೂರು ತಾಲೂಕಿನ ಸೋಮೇಶ್ವರದ ಅಶೋಕ್ ಅವರಿಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರು, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಸೇರಿದಂತೆ ಅಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English