ಮೈಸೂರು : ಮೈಸೂರು ಜಿಲ್ಲೆ ಕಬಿನಿ ಜಲಾಶಯ ಭರ್ತಿಯಾಗಿರುವುದು ಸಂತಸ ತಂದಿದೆ. ಇದರಿಂದ ನಾಡಿನ ರೈತರಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.
ಮಂಗಳವಾರ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸಲು ಕಬಿನಿಗೆ ಆಗಮಿಸಿದ ವೇಳೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು.
ನವೆಂಬರ್ ತಿಂಗಳಲ್ಲಿ ಬಾಗಿನ ಅರ್ಪಿಸುವುದು ವಿಶೇಷ. ಅಂತಾರಾಜ್ಯ ನೀರಿನ ವಿಚಾರ ಇದೆ. ನೀರು ತುಂಬಿರುವುದರಿಂದ ತಮಿಳುನಾಡಿಗೂ ನೀರು ಕೊಡಬಹುದು, ನಾಲೆಗಳಿಗೂ ನೀರು ಹರಿಸಬಹುದು ಎಂದರು.
ಕಳೆದ ವರ್ಷ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗಲೂ ನಾನು ಕಬಿನಿ ಜಲಾಶಯಕ್ಕೆ ಬಾಗಿನ ಸಲ್ಲಿಸಲು ಬಂದಿದ್ದೆ. ನಾನು ಮುಖ್ಯಮಂತ್ರಿಯಾದ ನಂತರ ಅಲಮಟ್ಟಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ್ದೀನಿ. ಈಗ ಕಾವೇರಿ ಜಲಾನಯನ ಪ್ರದೇಶದ ಎರಡು ಜಲಾಶಯಗಳಿಗೆ ಬಾಗಿನ ಸಲ್ಲಿಸುತ್ತಿದ್ದೇನೆ ಎಂದರು.
ಕಬಿನಿ ಜಲಾಶಯದ ಕೆಳಭಾಗದಲ್ಲಿ ಬೃಂದಾವನ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಾಣವನ್ನು ಪಿ.ಪಿ.ಪಿ. ಮಾದರಿಯಲ್ಲಿ ಕೈಗೊಳ್ಳಲು ಪ್ರಸ್ತಾವನೆ ಬಂದಿದೆ. ಸರ್ಕಾರದಿಂದ ನೇರವಾಗಿಯೂ ಮಾಡಬೇಕು ಎಂಬ ವಿಚಾರವೂ ಇದೆ. ಶೀಘ್ರದಲ್ಲೇ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಕಬಿನಿ ಜಲಾಶಯದಲ್ಲಿ ಕೆಳಭಾಗದಲ್ಲಿ ಪ್ರವಾಹ ಬಂದಾಗ ನೀರು ನುಗ್ಗುವ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು. ಇದಕ್ಕೆ ಅವರ ಸಹಕಾರವೂ ಬೇಕು ಎಂದು ಹೇಳಿದರು.
ಪುನಿತ್ ರಾಜ್‌ಕುಮಾರ್:- ಪುನಿತ್ ರಾಜ್‌ಕುಮಾರ್ ಅವರಿಗೆ ಪದ್ಮಶ್ರಿ ಪ್ರಶಸ್ತಿಗೆ ಶಿಫಾರಸ್ಸು ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ಪುನಿತ್ ರಾಜ್‌ಕುಮಾರ್ ಅವರ ಬಗ್ಗೆ ತಮಗೆ ಅಪಾರ ಗೌರವ ಪ್ರೀತಿ ಇದೆ. ಈ ವಿಚಾರವನ್ನು ಸರ್ವಾನುಮತದಿಂದ ಎಲ್ಲರೂ ಒಪ್ಪುತ್ತಾರೆ. ಶಿಫಾರಸ್ಸು ಮಾಡಲು ಅದಕ್ಕೊಂದು ಪದ್ಧತಿ ಇದೆ. ಸರ್ಕಾರವಾಗಿ ಎಲ್ಲವನ್ನೂ ಯೋಚನೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಹೆಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು, ಕೊಳ್ಳೇಗಾಲ ಶಾಸಕ ಎನ್. ಮಹೇಶ್, ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English