ಬೆಳ್ತಂಗಡಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪಡಂಗಡಿ ಭೋಜರಾಜ ಹೆಗ್ಡೆ (98) ಇಂದು (ಮಂಗಳವಾರ) ಸ್ವಗೃಹ ಪಡಂಗಡಿಯಲ್ಲಿ ನಿಧನರಾಗಿದ್ದಾರೆ.
ಅಪ್ಪಟ ಗಾಂಧಿವಾದಿಯಾಗಿದ್ದ ಭೋಜರಾಜ ಹೆಗ್ಡೆಯವರು ಹಲವು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸಿದ್ದರು. ಸರಳ ಸಜ್ಜನಿಕೆಯಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು. ಮೃತ ಭೋಜರಾಜ್ ಪುತ್ರ ವಿನಯ್ ಪ್ರಸಾದ್, ಪುತ್ರಿ ವೀಣಾರನ್ನು ಅಗಲಿದ್ದಾರೆ.
1923ರ ಫೆಬ್ರವರಿ 13 ರಂದು ಪಡಂಗಡಿಯಲ್ಲಿ ಶಾಂತಿರಾಜ ಶೆಟ್ಟಿ ಮತ್ತು ಲಕ್ಷ್ಮೀಮತಿ ದಂಪತಿಯ ಪುತ್ರನಾಗಿ ಭೋಜರಾಜ ಹೆಗ್ಡೆ ಜನಿಸಿದ್ದರು. ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ 1942ರಲ್ಲಿ ಆಯೋಜಿಸಿದ್ದ ‘ಭಾರತ ಬಿಟ್ಟು ತೊಲಗಿ’ ಚಳವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಧಾರ್ಮಿಕ, ಸಾಮಾಜಿಕ, ಸಹಕಾರಿ, ಶೈಕ್ಷಣಿಕ ಕ್ಷೇತ್ರದ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಅಲ್ಲದೇ, ಉಜಿರೆ ರಬ್ಬರ್ ಸೊಸೈಟಿ, ಮುಂಡಾಜೆಯ ಶತಾಬ್ದಿ ವಿದ್ಯಾಲಯ ಸಮಿತಿಯ ಉಪಾಧ್ಯಕ್ಷರಾಗಿ ಹಲವು ಕಾಲ ಸೇವೆ ಸಲ್ಲಿಸಿದ್ದರು.
ಮಾಜಿ ಮುಖ್ಯಮಂತ್ರಿಗಳಾದ ನಿಜಲಿಂಗಪ್ಪ, ವೀರೇಂದ್ರ ಪಾಟೀಲ್, ರಾಮಕೃಷ್ಣ ಹೆಗ್ಗಡೆ ಸೇರಿದಂತೆ ಅನೇಕ ರಾಜಕೀಯ ನಾಯಕರ ನಿಕಟ ಸಂಪರ್ಕವನ್ನು ಹೊಂದಿದ್ದರು. ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸವನ್ನು ಅನುಭವಿಸಿದ್ದರು. ಭೋಜರಾಜ ಹೆಗ್ಡೆ ಅವರು ಓರ್ವ ಪುತ್ರ, ಓರ್ವ ಪುತ್ರಿ ಹಾಗೂ ಅಪಾರ ಬಂಧು-ವರ್ಗದವರನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English