ಮಂಗಳೂರು : ಕನ್ನಡಿಗರಾದ ನಾವೆಲ್ಲರೂ ಮಾತೃಭಾಷೆ ಕನ್ನಡವನ್ನು ಬೆಳೆಸುವಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸುವ ಅನಿವಾರ್ಯತೆ ಬಂದೊದಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ಕನ್ನಡಿಗನು ಕನ್ನಡ ಭಾಷೆಯನ್ನು ಪ್ರೀತಿಸಿ ಭಾಷಾ ಬೆಳವಣಿಗೆಯಲ್ಲಿ ಸಹಕರಿಸಬೇಕೆಂದು ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೃತ್ತ ಐ.ಎ.ಎಸ್. ಅಧಿಕಾರಿ ಡಾ. ಸಿ ಸೋಮಶೇಖರ್ ನುಡಿದರು. ಕಲ್ಕೂರ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಉದ್ಘಾಟಿಸಿ ರಾಜ್ಯೋತ್ಸವ ಸಂದೇಶ ನೀಡಿದರು. ಗಡಿನಾಡಿನ ಕಾಸರಗೋಡಿನಲ್ಲಿರುವ ಕನ್ನಡಿಗರು ಕೂಡ ಈ ನೆಲೆಯಲ್ಲಿ ತಮ್ಮ ಕೊಡುಗೆಯನ್ನು ನೀಡಬೇಕಾಗಿದೆ ಎಂದರು.
ಮಂಗಳೂರು ಕೊಡಿಯಾಲ್‌ಬೈಲ್‌ನ ಶಾರದಾ ವಿದ್ಯಾಲಯದ ಸಭಾಭವನದಲ್ಲಿ ಬುಧವಾರದಂದು ಜರಗಿದ ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ. ವಾಮನ ನಂದಾವರ ಮತ್ತು ಶ್ರೀಮತಿ ಚಂದ್ರಕಲಾ ನಂದಾವರ ದಂಪತಿಗಳಿಗೆ ‘ರಾಜ್ಯೋತ್ಸವ ಗೌರವ ಪ್ರದಾನ’ ಮಾಡಲಾಯಿತು.
ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಹಾಗೂ ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವನೆಗೈದರು. ಹೊರನಾಡ ಮತ್ತು ಗಡಿನಾಡ ಬಾಲಪ್ರತಿಭೆಗಳಿಗೆ ‘ಸಾಧಕ ಪುರಸ್ಕಾರ’ ನೀಡಿ ಅಭಿನಂದಿಸಲಾಯಿತು.
ಇದೇ ಸಂದರ್ಭ ರಾಜ್ಯೋತ್ಸವ ಕವಿಗೋಷ್ಠಿಯೊಂದು ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಉಪಾಧ್ಯಕ್ಷೆ, ಕವಯಿತ್ರಿ ಶ್ರೀಮತಿ ಸಂಧ್ಯಾಗೀತಾ ಬಾಯಾರು ಅವರ ಅಧ್ಯಕ್ಷತೆಯಲ್ಲಿ ಜರಗಿತು. ಹಿರಿಯ ಕವಿಗಳಾದ ಡಾ. ಸುರೇಶ ನೆಗಳಗುಳಿ, ನಲ್ಕ ಗೋಪಾಲಕೃಷ್ಣ ಆಚಾರ್, ಡಾ. ಕೊಳ್ಚಪ್ಪೆ ಗೋವಿಂದ ಭಟ್, ಚಾರ್ಲ್ಸ್ ಡಿಸೋಜಾ, ಬಿ.ಎಸ್. ಹಸನಬ್ಬ ಅಮ್ಮೆಂಬಳ, ಯುವ ಕವಿಗಳಾದ ರಾಘವೇಂದ್ರ ಸಾಂತೂರು, ವಿದ್ವತ್ ಶೆಟ್ಟಿ ಹಾಗೂ ಸುಲೋಚನಾ ವಿ.ವೈ. ಆಚಾರ್ಯ ಕಟೀಲು ಕವಿಗೋಷ್ಠಿಯಲ್ಲಿ ಸ್ವರಚಿತ ಕವನಗಳನ್ನು ವಾಚಿಸಿದರು.
ಶಾರದಾ ವಿದ್ಯಾಲಯ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಕನ್ನಡ ಕವನ ರಚನಾ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿದರು. ಹಿರಿಯ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತರು ಅಭಿನಂದನಾ ಭಾಷಣ ಮಾಡಿದರು. ಗಡಿನಾಡ ಸಾಹಿತ್ಯ ಸಂಸ್ಕೃತಿ ಅಕಾಡೆಮಿ, ಕಾಸರಗೋಡು ಇದರ ಅಧ್ಯಕ್ಷ ಪ್ರಭಾಕರ ಕಲ್ಲೂರಾಯ ಬನದಗದ್ದೆ, ಕರಾವಳಿ ಲೇಖಕಿ ವಾಚಕಿಯರ ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಬಿ. ಶೆಟ್ಟಿ, ಕಾಸರಗೋಡು ಜಿಲ್ಲಾ ಪತ್ರಕರ್ತ ಎ.ಆರ್. ಸುಬ್ಬಯ್ಯಕಟ್ಟೆ ಉಪಸಿತರಿದ್ದರು. ಇದೇ ಸಂದರ್ಭದಲ್ಲಿ ಶಾರದಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಮತ್ತು ಶಾರದಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಕನ್ನಡ ಗೀತಗಾಯನ ನಡೆಸಿಕೊಟ್ಟರು, ದಯಾನಂದ ಕಟೀಲು ಹಾಗೂ ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English