ಮಂಗಳೂರು : ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರ ವಿಧಾನ ಪರಿಷತ್ ಚುನಾವಣಾ ಕಾರ್ಯಾಲಯದ ಉದ್ಘಾಟನಾ ಕಾರ್ಯಕ್ರಮವು ಮಂಗಳವಾರ ನಗರದ “ಇನ್‌ಲ್ಯಾಂಡ್ ಓರ್ನೆಟ್” ನಲ್ಲಿ ನಡೆಯಿತು.
ಜಾಗತಿಕ ಬಂಟರ ಸಂಘದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಕಾರ್ಯಾಲಯವನ್ನು ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಅವರು ಸಹಕಾರಿ ಧುರೀಣ ಅತ್ಯಂತ ಪ್ರಾಮಾಣಿಕರಾದ, ಜನಸಾಮಾನ್ಯರ ಸೇವಕರಾದ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪಕ್ಷಾತೀತ ವ್ಯಕ್ತಿ. ಸಮಾಜ ಸೇವಕರಿಗೆ ಯಾವುದೇ ಪಕ್ಷದ ಅಗತ್ಯವಿಲ್ಲ, ಜನಸಾಮಾನ್ಯರ ಸಹಕಾರವೇ ಶಕ್ತಿಯಾಗಿದೆ. ಈ ಶಕ್ತಿಯಿಂದಲೇ ರಾಜೇಂದ್ರ ಕುಮಾರ್ ವಿಧಾನ ಪರಿಷತ್ ಸದಸ್ಯರಾಗಿ ಗೆದ್ದು ಸಚಿವರಾಗಿ ಜನಸೇವೆ ಮುಂದುವರಿಸಲಿ ಎಂದು ಆಶಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಚುನಾವಣೆಯ ಪಕ್ಷೇತರ ಅಭ್ಯರ್ಥಿ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಮಾತನಾಡಿ ಸಹಕಾರಿ ಕ್ಷೇತ್ರಕ್ಕೆ ವಿಧಾನ ಪರಿಷತ್‌ನಲ್ಲಿ ಅವಕಾಶ ಕೊಡಿ ಎಂದು ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾರೂ ಸ್ಪಂದಿಸಲಿಲ್ಲ. ಹಾಗಾಗಿ ಸಹಕಾರಿಗಳ, ಸರ್ವ ಪಕ್ಷಗಳ, ಸಾಮಾಜಿಕ, ಧಾರ್ಮಿಕ ಮುಖಂಡರ ಒತ್ತಡಕ್ಕೆ ಮಣಿದು ವಿಧಾನ ಪರಿಷತ್ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ಹಾಗಾಗಿ ಎಲ್ಲಾ ಪಕ್ಷದವರೂ ನನ್ನ ಗೆಲುವಿಗೆ ಶ್ರಮಿಸಬೇಕು. ಗೆದ್ದ ಬಳಿಕ ಅಭಿವೃದ್ಧಿಗಾಗಿ ಶಕ್ತಿಮೀರಿ ಶ್ರಮಿಸುವೆ ಎಂದರು.
ನಾಮಪತ್ರ ಹಿಂದಕ್ಕೆ ಪಡೆಯಲು ಬೇರೆ ಬೇರೆ ಕಡೆಯಿಂದ ಸಾಕಷ್ಟು ಒತ್ತಡವಿತ್ತು. ಆದರೆ ಕಣಕ್ಕೆ ಇಳಿದಾಗಿದೆ. ಸುಮಾರು 6 ಸಾವಿರ ಮತದಾರರನ್ನು ತಲುಪಲು ಸಹಕಾರಿ ರಂಗದ 4 ಲಕ್ಷ ಜನರು ನನ್ನೊಂದಿಗೆ ಇದ್ದಾರೆ ಎಂಬ ವಿಶ್ವಾಸವಿದೆ. ನಾನು ನಿಮ್ಮವ ಎಂದು ಭಾವಿಸಿ ಯಾವ ಆಸೆ, ಯಾರದೇ ಆಮಿಷಕ್ಕೆ ಬಲಿಯಾಗದೆ ಎಲ್ಲರೂ ನನ್ನ ಗೆಲುವಿಗೆ ಶ್ರಮಿಸಬೇಕು ಎಂದು ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮನವಿ ಮಾಡಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಶ್ರೀನಾಥ್ ಹೆಬ್ಬಾರ್, ಕಂಬಳ ಅಕಾಡಮಿಯ ಅಧ್ಯಕ್ಷ ಗುಣಪಾಲ ಕಡಂಬ, ಧರ್ಮಗುರುಗಳಾದ ರೆ.ಫಾ. ಸಂತೋಷ್ ಕುಮಾರ್, ಮುಹಮ್ಮದ್ ಕಾಮಿಲ್ ಸಖಾಫಿ, ಪುರೋಹಿತರಾದ ರಮೇಶ್ ಭಟ್, ಹಿರಿಯ ಸಹಕಾರಿಗಳಾದ ವಿನಯ ಕುಮಾರ್ ಸೂರಿಂಜೆ, ಈಶ್ಚರ ಭಟ್ ಪುತ್ತೂರು, ಉದ್ಯಮಿಗಳಾದ ರೋಹನ್ ಮೊಂತೆರೋ, ಸಿರಾಜ್ ಅಹ್ಮದ್ ಇನ್‌ಲ್ಯಾಂಡ್, ಲಕ್ಷ್ಮೀಶ ಭಂಡಾರಿ, ದಲಿತ ಸಂಘರ್ಷ ಸಮಿತಿಯ ಸಂಚಾಲಕ ಸುಂದರ ಮಾಸ್ಟರ್, ಉಡುಪಿ ಜಿಪಂ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಪ್ರಮುಖ ಸಂಘಟನೆಗಳ ಮುಖಂಡರಾದ ವರ್ಗೀಸ್ ಕಡಬ, ಜಯಕರ ಶೆಟ್ಟಿ ಇಂದ್ರಾಳಿ, ಕೆ.ಪಿ. ಥಾಮಸ್ ನೆಲ್ಯಾಡಿ, ಪ್ರಸಾದ್ ಕೌಶಲ್ಯ ಶೆಟ್ಟಿ, ವೈ. ಸುಧೀರ್ ಕುಮಾರ್, ಪದ್ಮಶೇಖರ್ ಜೈನ್ ಮತ್ತಿತರರು ಭಾಗವಹಿಸಿದ್ದರು.
ಬೆಳಪು ದೇವಿಪ್ರಸಾದ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಶಿಕುಮಾರ್ ರೈ ಬಾಲ್ಯೊಟ್ಟು ವಂದಿಸಿದರು. ಅರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English