ಮಂಗಳೂರು : ಬೀರಪ್ಪನಾಯಕನು ೧೬ನೆಯ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯದಲ್ಲಿ ಬಂಕಾಪುರ ಪ್ರಾಂತ್ಯದ ಬಾಡ ಪಟ್ಟಣದ ದಳಪತಿಯಾಗಿದ್ದನು. ಬಚ್ಚಮ್ಮ ಬೀರಪ್ಪನ ಹೆಂಡತಿ. ಇವರು ತಿರುಪತಿ ವೆಂಕಟೇಶ್ವರಸ್ವಾಮಿಯ ಭಕ್ತರು.
ತಿರುಪತಿ ತಿಮ್ಮಪ್ಪನ ಕೃಪೆಯಿಂದ ಈ ದಂಪತಿಗಳಿಗೆ ಒಂದು ಗಂಡು ಮಗು ಜನಿಸಿತು. ಅದಕ್ಕೆ ‘ತಿಮ್ಮಪ್ಪ’ ಎಂದೇ ಹೆಸರಿಟ್ಟರು. ತಿಮ್ಮಪ್ಪ ನಾಯಕ ಬಾಲ್ಯದಲ್ಲಿಯೇ ಅಕ್ಷರಾಭ್ಯಾಸದ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತನು. ತಂದೆಯ ಕಾಲಾನಂತರ ಬಂಕಾಪುರ ಪ್ರಾಂತ್ಯಕ್ಕೆ ದಳಪತಿಯಾದನು.
ತಿಮ್ಮಪ್ಪನು ಹೊಸ ಮನೆ ಕಟ್ಟಿಸುವಾಗ ಆ ಸ್ಥಳದಲ್ಲಿ ಆತನಿಗೆ ಚಿನ್ನ, ವಜ್ರ, ವೈಢೂರ್ಯಗಳಿಂದ ತುಂಬಿದ ಒಂದು ಕೊಪ್ಪರಿಗೆ ಸಿಕ್ಕಿತು. ಉದಾರಿಯಾದ ಆತನು ಈ ಸಂಪತ್ತನ್ನು ಬಡವರಿಗೆ ಧಾರಾಳವಾಗಿ ದಾನ ಮಾಡಿದ. ಆದುದರಿಂದ ಜನರು ಆತನನ್ನು ‘ಕನಕನಾಯಕ’ ಎಂದು ಕರೆಯತೊಡಗಿದರು.
ಕನಕನ ಇಷ್ಟದೇವರು ಶ್ರೀ ಆದಿಕೇಶವ. ಆದುದರಿಂದಲೇ ಅವನು ಬಾಡಕ್ಕೆ ಸಮೀಪದ ಕಾಗಿನೆಲೆಯಲ್ಲಿ ಆದಿಕೇಶವ ದೇವಾಲಯವನ್ನು ಕಟ್ಟಿಸಿದ. ಆದಿಕೇಶವನು ಆಗಾಗ್ಗೆ ಕನಕನ ಕನಸಿನಲ್ಲಿ ಬಂದು ‘ಬಾ, ನನ್ನ ದಾಸನಾಗು’ ಎಂದು ಕರೆಯುತ್ತಿದ್ದಂತೆ ಭಾಸವಾಗುತ್ತಿತ್ತು. ಆದರೆ ದಳಪತಿಯಾಗಿದ್ದ ಕನಕನು, ದಾಸನಾಗಲು ಇಚ್ಛಿಸಲಿಲ್ಲ. ಒಮ್ಮೆ ಯುದ್ಧವೊಂದರಲ್ಲಿ ಕನಕ ಗಾಯಗೊಂಡು ಅರೆ ಜೀವವಾಗಿ ಬಿದ್ದಿದ್ದ. ಆಗ ಆತನಿಗೆ ಆದಿಕೇಶವನ ವಾಣಿ ಪುನಃ ಕೇಳಿಸಿತು. ಕನಕನು ತನ್ನ ಇಷ್ಟದೇವತೆಯ ಕರೆಗೆ ಓಗೊಟ್ಟು ದಾಸನಾದನು.
ಸ್ವಲ್ಪ ಕಾಲ ಕಾಗಿನೆಲೆಯ ಗುಡಿಯಲ್ಲೇ ದೈವಸ್ತುತಿಯಲ್ಲಿ ತೊಡಗಿದ್ದನು. ಬಳಿಕ ಕನಕದಾಸನು ಗುರುವನ್ನು ಹುಡುಕಿಕೊಂಡು ಹೊರಟನು. ವಿಜಯನಗರದಲ್ಲಿ ಕೃಷ್ಣದೇವರಾಯನ ಗುರುಗಳಾಗಿದ್ದ ವ್ಯಾಸರಾಯರು ಕನಕನನ್ನು ತಮ್ಮ ಶಿಷ್ಯನನ್ನಾಗಿ ಸ್ವೀಕರಿಸಿದರು.
ಗುರುಗಳಿಗೆ ಉಳಿದವರಿಗಿಂತ ಕನಕನ ಮೇಲೆ ಹೆಚ್ಚು ಪ್ರೀತಿ. ಇದರಿಂದ ಉಳಿದ ಶಿಷ್ಯರಿಗೆ ಹೊಟ್ಟೆಕಿಚ್ಚು. ಒಂದು ಸಲ ಶ್ರೀ ವ್ಯಾಸರಾಯರು ತಮ್ಮ ಶಿಷ್ಯರನ್ನೆಲ್ಲ ಕರೆದು, ‘ಇಂದು ಏಕಾದಶಿ. ಹಸಿವಿನ ಬಾಧೆಯನ್ನು ತಡೆಯಲು ಆಗದು. ಒಂದೊಂದು ಬಾಳೆ ಹಣ್ಣನ್ನು ನಿಮಗೆ ಕೊಡುತ್ತೇನೆ. ಜನರಿಲ್ಲದ ಸ್ಥಳದಲ್ಲಿ, ಯಾರೂ ನೋಡದಂತೆ ಈ ಹಣ್ಣು ತಿನ್ನಿರಿ’ ಎಂದು ಹೇಳಿದರು. ಶಿಷ್ಯರಿಗೆ ಬಾಳೆಹಣ್ಣುಗಳನ್ನು ಕೊಟ್ಟರು. ಕನಕದಾಸರನ್ನು ಬಿಟ್ಟು ಇತರ ಶಿಷ್ಯರು- ಒಬ್ಬನು ದನದ ಕೊಟ್ಟಿಗೆಯಲ್ಲಿ, ಮತ್ತೊಬ್ಬ ಕತ್ತಲೆ ಕೋಣೆಯಲ್ಲಿ, ಮೂರನೆಯವನು ಊರ ಹೊರಗೆ ಬಯಲಿನಲ್ಲಿ !! ಹೀಗೆ ಬಾಳೆಹಣ್ಣನ್ನು ತಿಂದು ಬಂದರು.
ವ್ಯಾಸರಾಯರು ಎಲ್ಲರನ್ನೂ ಕರೆದು, ‘ನನ್ನ ಮಾತನ್ನು ಪಾಲಿಸಿದ್ದೀರಾ? ಯಾರೂ ಇಲ್ಲದ ಕಡೆ ಹಣ್ಣು ತಿಂದಿರಾ?’ ಎಂದು ಕೇಳಿದರು. ‘ಓಹೋ, ಹಣ್ಣು ತಿಂದು ಬಂದೆವು, ಹಣ್ಣು ತಿನ್ನುವಾಗ ನಮ್ಮನ್ನು ಯಾರೂ ನೋಡಲಿಲ್ಲ’ ಎಂದು ಶಿಷ್ಯರು ಹೆಮ್ಮೆಯಿಂದ ಹೇಳಿದರು. ‘ಕನಕ, ನಿನಗೆ ಕೊಟ್ಟ ಬಾಳೆಹಣ್ಣನ್ನು ನೀನು ಎಲ್ಲಿ ತಿಂದೆಯಪ್ಪಾ?’ ಎಂದು ಕನಕದಾಸರನ್ನು ಕೇಳಿದರು. ವ್ಯಾಸರಾಯರು ಕೊಟ್ಟಿದ್ದ ಬಾಳೆಹಣ್ಣನ್ನು ಕನಕನು ಅವರ ಮುಂದಿಟ್ಟು, ‘ಸ್ವಾಮೀ, ಯಾರೂ ಇಲ್ಲದ ಸ್ಥಳ ನನಗೆ ತೋರಲಿಲ್ಲ. ಎಲ್ಲಿ ಹೋದರಲ್ಲಿ ಭಗವಂತನ ಕಣ್ಣುಗಳು ನನ್ನ ಮೇಲೆ, ನನ್ನ ಆಚರಣೆಯ ಮೇಲೆ ನೆಟ್ಟಿದ್ದವು. ಭಗವಂತನು ಇಲ್ಲದ ಸ್ಥಳವೆಲ್ಲಿ? ಆದುದರಿಂದ ಹಣ್ಣನ್ನು ತಿನ್ನದೆ ಮರಳಿ ತಂದಿದ್ದೇನೆ’ ಎಂದನು. ಕನಕದಾಸರ ಈ ತಿಳುವಳಿಕೆ ಕಂಡು ವ್ಯಾಸರಾಯರು ತುಂಬಾ ಸಂತೋಷಪಟ್ಟರು. ಉಳಿದ ಶಿಷ್ಯಂದಿರು, ‘ಛೇ, ನಮಗೆ ಇಷ್ಟೂ ತಿಳಿಯಲಿಲ್ಲವಲ್ಲ’ ಎಂದು ಕೈ ಕೈ ಹಿಸುಕಿಕೊಂಡರು.
ಭಗವಂತನ ಅಸ್ತಿತ್ವವನ್ನು ಅರಿತುಕೊಂಡು, ಅನ್ಯಾಯವನ್ನು ಮಾಡದೇ ಸದ್ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಎಲ್ಲರನ್ನೂ ಪ್ರೀತಿಸಿರಿ. ನಾಮದೊಂದಿಗೆ ಕರ್ತವ್ಯ ವನ್ನು ಉತ್ತಮವಾಗಿ ನಿರ್ವಹಿಸಿ.
ಸಂಗ್ರಹ : ಶ್ರೀ ಚಂದ್ರ ಮೊಗೇರ್
Click this button or press Ctrl+G to toggle between Kannada and English