ಮಂಗಳೂರು : ಉಳಾಯಿಬೆಟ್ಟು ಪರಾರಿ ಎಂಬಲ್ಲಿನ ಟೈಲ್ಸ್ ಫ್ಯಾಕ್ಟರಿಯ ಆವರಣದಲ್ಲಿ ರವಿವಾರ ನಡೆದ 8 ವರ್ಷದ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆಗೈದಿದ್ದಾರೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಜಯ್ ಸಿಂಗ್(21), ಮುಕೇಶ್ ಸಿಂಗ್(20), ಮನೀಶ್ ತಿರ್ಕಿ(33) ಹಾಗೂ ಮುನೀಮ್ ಸಿಂಗ್ (20) ಬಂಧಿತ ಆರೋಪಿಗಳಾಗಿದ್ದಾರೆ.
ಜಯ್ ಸಿಂಗ್, ಮುಕೇಶ್ ಸಿಂಗ್ ಹಾಗೂ ಮನೀಶ್ ತಿರ್ಕಿ ಪರಾರಿಯಲ್ಲಿರುವ ಟೈಲ್ಸ್ ಫ್ಯಾಕ್ಟರಿಯ ಕೂಲಿ ಕಾರ್ಮಿಕರಾಗಿದ್ದರೆ, ಮುನೀಮ್ ಸಿಂಗ್ (20) ಪುತ್ತೂರಿನಲ್ಲಿ ಕೂಲಿ ಕಾರ್ಮಿಕನಾಗಿ ದುಡಿಯುತ್ತಿದ್ದ. ಇವರೆಲ್ಲ ಸ್ನೇಹಿತರಾಗಿದ್ದಾರೆ. ಈ ಪೈಕಿ ಮೂವರು ಮಧ್ಯ ಪ್ರದೇಶ ರಾಜ್ಯದ ಪನ್ನಾ ಜಿಲ್ಲೆಯ ನಿವಾಸಿಗಳಾದರೆ, ಓರ್ವ ಜಾರ್ಖಂಡ್ ರಾಜ್ಯದ ರಾಂಚಿ ನಿವಾಸಿ.
ಆರೋಪಿಗಳು ನ.21ರಂದು ಮಧ್ಯಾಹ್ನ ಪರಾರಿಯ ಟೈಲ್ಸ್ ಫ್ಯಾಕ್ಟರಿಯ ಕಂಪೌಂಡ್ ಹೊರಗೆ ಆಟವಾಡುತ್ತಿದ್ದ ಬಾಲಕಿಯನ್ನು ಬಲವಂತದಿಂದ ಎತ್ತಿಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿ ಬಳಿಕ ಕತ್ತು ಹಿಸುಕಿ ಕೊಲೆಗೈದಿದ್ದಾರೆ ಎಂದು ಅವರು ಆರೋಪಿಗಳ ದುಷ್ಕೃತ್ಯಗಳ ಬಗ್ಗೆ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್, ದಿನೇಶ್ ಕುಮಾರ್, ಎಸಿಪಿ ರಂಜಿತ್ ಭಂಡಾರು ಮತ್ತು ರವೀಶ್ ನಾಯಕ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English