ಸಂಪ್ರದಾಯ ಮುರಿದು ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ, ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಯುವಕರು

3:43 PM, Thursday, November 25th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

Harish-Poonjaಬೆಳ್ತಂಗಡಿ :  ಲಾಯಿಲ ಶ್ರೀ ವೆಂಕಟರಮಣ ದೇವಸ್ಥಾನದ ಪಲ್ಲಕ್ಕಿಗೆ ಸಂಪ್ರದಾಯ ಮೀರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಹೆಗಲು ಕೊಟ್ಟ ಪ್ರಸಂಗ ಇದೀಗ ಹೊಸ ತಿರುವು ಪಡದಿದೆ. ಹರೀಶ್ ಪೂಂಜಾರಂತೆ ತಮಗೂ ಪಲ್ಲಕ್ಕಿ ಹೊರಲು ಅವಕಾಶ ನೀಡಬೇಕು ಎಂಬ ದಲಿತ ಸಮುದಾಯದ ಒತ್ತಾಯಮಾಡಿದ್ದರೆ,  ಪಲ್ಲಕ್ಕಿ ಹೊರಲು ಶಾಸಕರನ್ನು ಕರೆತಂದ ಯುವಕರು ದೇವಸ್ಥಾನದಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಪ್ರಸಂಗವೂ ನಡೆದಿದೆ.

ವಿವಾದದ ಹಿನ್ನೆಲೆಯಲ್ಲಿ ಉತ್ಸವದ ಕೊನೆಯ ದಿನವಾದ (ಮಕ್ಕಳ ಹಬ್ಬ) ಬುಧವಾರ ರಾತ್ರಿ ನಡೆಯಬೇಕಿದ್ದ ದೇವರ ಪಲ್ಲಕ್ಕಿಯ ಪೇಟೆ ಸವಾರಿಯನ್ನು  ದೇವಸ್ಥಾನದ ಆಡಳಿತ ಮಂಡಳಿ ಕೈಬಿಟ್ಟಿದೆ.

ಕಾರ್ತಿಕ ಹುಣ್ಣಿಮೆಯ ದೀಪೋತ್ಸವದಂದು ಲಾಯಿಲ ವೆಂಕಟರಮಣ ದೇವಸ್ಥಾನದ ದೀಪೋತ್ಸವದ ನಿಮಿತ್ತ ರಾತ್ರಿ ಪೇಟೆ ಸವಾರಿ ‘ಪಲ್ಲಕ್ಕಿ ಉತ್ಸವ’ ನಡೆದಿತ್ತು. ಪಲ್ಲಕ್ಕಿ ಉತ್ಸವವು ರಾತ್ರಿ ಬೆಳ್ತಂಗಡಿ ನಗರದ ಮಧ್ಯಭಾಗ ತಲುಪುತ್ತಿದ್ದಂತೆ ತನ್ನೆಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಊರಿಗೆ ತೆರಳುತ್ತಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಲ್ಲಿಗೆ ತಲುಪಿದ್ದಾರೆ. ಅವರು ತಮ್ಮ ಕಾರಿನಿಂದಿಳಿದು ದೇವರ ಪಲ್ಲಕ್ಕಿ ಕಡೆಗೆ ತೆರಳಿ ಕೈ ಮುಗಿದು ಪ್ರಸಾದವನ್ನು ಸ್ವೀಕರಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಕರೆತಂದು ಕೆಲ ಯುವಕರು ದೇವರ ಪಲ್ಲಕ್ಕಿಗೆ ಹೆಗಲು ಕೊಡಲು ಹೇಳಿದ್ದು ಅದರಂತೆ ಅವರು ಪಲ್ಲಕಿಗೆ ಹೆಗಲು ಕೊಟ್ಟು ತುಸು ದೂರದವರೆಗೆ ಪಲ್ಲಕ್ಕಿ ಹೊತ್ತು ನಡೆದಿದ್ದರು. ಆದರೆ ಸಂಪ್ರದಾಯ ಮುರಿದು ಪಲ್ಲಕ್ಕಿ ಹೊತ್ತ ಶಾಸಕ ಹರೀಶ್ ಪೂಂಜಾ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯ ವಿರುದ್ಧ ಸಮುದಾಯದ ಒಳಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ನಡುವೆ ಪಲ್ಲಕ್ಕಿ ಹೊರಲು ಶಾಸಕರನ್ನು ಕರೆತಂದ ಯುವಕರು ದೇವಸ್ಥಾನದಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆ ಯಾಚಿಸಿದ ಪ್ರಸಂಗವೂ ನಡೆದಿತ್ತು.

ಗೌಡ ಸಾರಸ್ವತ ಬ್ರಾಹ್ಮಣ (ಜಿ.ಎಸ್.ಬಿ) ಸಮುದಾಯ ಲಾಯಿಲ ವೆಂಕಟರಮಣ ದೇವಸ್ಥಾನದಲ್ಲಿ ಕಾರ್ತಿಕ ಹುಣ್ಣಿಮೆಯ ದೀಪೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ದೇವರ ಪಲ್ಲಕಿಯ ಕೊನೆಯ ಪೇಟೆ ಸವಾರಿ ನಡೆಯಬೇಕಿತ್ತು. ಕೊನೆಯ ‘ಪೇಟೆ ಸವಾರಿ’ ಸಂದರ್ಭದಲ್ಲಿ ದಲಿತ ಸಮುದಾಯಕ್ಕೂ ಪಲ್ಲಕ್ಕಿ ಹೊತ್ತು ಸಾಗಲು ಅವಕಾಶ ನೀಡಬೇಕು ಎಂದು ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಮಿತಿ ಸದಸ್ಯ ಶೇಖರ್ ಲಾಯಿಲ ಒತ್ತಾಯಿಸಿದ್ದರು. ಈ ನಡುವೆ ಪಲ್ಲಕ್ಕಿ ವಿವಾದ ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗೆ ಕಾರಣವಾಗಿದ್ದಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಈ ಬಗ್ಗೆ ನಿರಂತರ ಚರ್ಚೆಗಳು ನಡೆಯುತ್ತಿದ್ದವು. ಈ ಎಲ್ಲ ಗೊಂದಲಗಳ ನಡುವೆ ವಿವಿಧ ಕಾರಣಗಳನ್ನು ನೀಡಿ ಬುಧವಾರ ರಾತ್ರಿ ನಡೆಯಬೇಕಿದ್ದ ಕೊನೆಯ ಪೇಟೆ ಸವಾರಿಯನ್ನು  ದೇವಸ್ಥಾನದ ಆಡಳಿತ ಸಮಿತಿ ಕೈ ಬಿಟ್ಟಿದೆ.

ಶಾಸಕ ಹರೀಶ್ ಪೂಂಜಾ ದೇವರ ಪಲ್ಲಕ್ಕಿಗೆ ಹೆಗಲು ಕೊಟ್ಟ ವಿಚಾರವನ್ನು ಮುಂದಿಟ್ಟುಕೊಂಡು ದಲಿತ ನಾಯಕರು ತಮಗೂ ದೇವರ ಪಲ್ಲಕ್ಕಿ ಹೊರಲು ಅವಕಾಶ ಕೇಳಿದರೆ ಒಂದೋ ನೀಡಬೇಕು ಅಥವಾ ನೀಡದಿದ್ದಲ್ಲಿ ಇದು ಘರ್ಷಣೆಗೆ ಮೂಲವಾದೀತು ಎಂಬ ಕಾರಣದಿಂದ ಸಂಪ್ರದಾಯ ಮುರಿದು ‘ಪೇಟೆ ಸವಾರಿ’ ಕೈಬಿಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.

Dharmasthala-Deepothsava  

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 

 Click this button or press Ctrl+G to toggle between Kannada and English