ಡಿ. ವೀರೇಂದ್ರ ಹೆಗ್ಗಡೆ : ದೃಷ್ಟಿ – ಸೃಷ್ಟಿ ಗ್ರಂಥ ಲೋಕಾರ್ಪಣೆ

10:01 PM, Sunday, November 28th, 2021
Share
1 Star2 Stars3 Stars4 Stars5 Stars
(No Ratings Yet)
Loading...

Dristi ಉಜಿರೆ: ನಾನು ಯಾವುದೇ ರೀತಿಯ ಕೃತಕ ಮುಖವಾಡವಿಲ್ಲದೆ ಸ್ವಾಭಾವಿಕವಾಗಿ, ಸಹಜವಾಗಿ ಬದುಕುತ್ತಿದ್ದೇನೆ. ಇಂದಿನ ಪುಸ್ತಕ ಬಿಡುಗಡೆ ಸಮಾರಂಭವು ಕನ್ನಡಿಯ ಎದುರು ನಿಂತು ನನ್ನನ್ನು ನಾನು ಅವಲೋಕನ ಮಾಡುವಂತೆ ಮಾಡಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

ಭಾನುವಾರ ಧರ್ಮಸ್ಥಳದಲ್ಲಿ ಹೆಗ್ಗಡೆಯವರ ನಿವಾಸದಲ್ಲಿ ಡಾ. ಎಮ್. ಪ್ರಭಾಕರ ಜೋಶಿ ಬರೆದ ಲೇಖನಗಳ ಸಂಕಲನ ಡಿ. ವೀರೇಂದ್ರ ಹೆಗ್ಗಡೆ : ದೃಷ್ಟಿ – ಸೃಷ್ಟಿ ಗ್ರಂಥ ಎಂಬ ಗ್ರಂಥದ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ನಾವು ನಿತ್ಯವೂ ಯಾವುದನ್ನು ಕೇಳುತ್ತೇವೆಯೋ ಅದು ನಮಗೆ ಹೊಸ ಅನುಭವ ನೀಡುತ್ತದೆ. ಧರ್ಮಸ್ಥಳಕ್ಕೆ ನಿತ್ಯವೂ ಬರುವ ಸಹಸ್ರಾರು ಭಕ್ತಾದಿಗಳಿಂದ ಅವರ ಸಮಸ್ಯೆಗಳನ್ನು, ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿ ಸಹಾನುಭೂತಿಯಿಂದ ಸಾಂದರ್ಭಿಕವಾಗಿ ಪರಿಹಾರಕ್ಕಾಗಿ ಸಲಹೆ, ಮಾರ್ಗದರ್ಶನದೊಂದಿಗೆ ಅಭಯದಾನ ಮಾಡುತ್ತೇನೆ. ನಿತ್ಯವೂ ಪ್ರತಿಕ್ಷಣವೂ ವೈವಿಧ್ಯತೆಯಿಂದ ಕೂಡಿದ್ದು ಪರಿವರ್ತನಾಶೀಲವಾಗಿದ್ದು ತನಗೆ ವಿಶೇಷ ಲೋಕಾನುಭವ ನೀಡುತ್ತದೆ. ಇದು ತನಗೆ ಯಾವಗಲೂ ಸುಖ, ಸಂತೋಷ, ಶಾಂತಿ ಮತ್ತು ನೆಮ್ಮದಿಯನ್ನು ನೀಡುತ್ತದೆ ಎಂದು ತನ್ನ ಜೀವನ ರಹಸ್ಯವನ್ನು ಅವರು ತಿಳಿಸಿದರು. ಧರ್ಮಸ್ಥಳಕ್ಕೆ ಇಂದು ಸರ್ವರೀತಿಯ ಸಹಕಾರ ನೀಡಲು ಬೃಹತ್ ಭಕ್ತರ ಗಡಣವೇ ಸಿದ್ಧವಾಗಿದೆ ಎಂದು ಅವರು ಸಂತೋಷ ವ್ಯಕ್ತಪಡಿಸಿದರು.

ಡಾ. ಪ್ರಭಾಕರ ಜೋಶಿಯವರು ಸಮಗ್ರ ಅಧ್ಯಯನ ಮಾಡಿ, ನೋಡಿ, ತಿಳಿದು, ಮಾಹಿತಿ ಕಲೆ ಹಾಕಿ ಉತ್ತಮ ಪುಸ್ತಕವನ್ನು ರಚಿಸಿರುವುದಕ್ಕೆ ಹೆಗ್ಗಡೆಯವರು ಅವರನ್ನು ಅಭಿನಂದಿಸಿ ಗೌರವಿಸಿದರು.

ಗ್ರಂಥ ಲೋಕಾರ್ಪಣೆ ಮಾಡಿದ ಉಜಿರೆಯ ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್. ಪ್ರಭಾಕರ್ ಮಾತನಾಡಿ ಆಡು ಮುಟ್ಟದ ಸೊಪ್ಪಿಲ್ಲ ಅನ್ನುವಂತೆ ಹೆಗ್ಗಡೆಯವರು ತ್ಯಾಗ ಮತ್ತು ಸೇವೆ ಮಾಡದ ಕ್ಷೇತ್ರವಿಲ್ಲ. ೧೯೪೮ ರ ನವೆಂಬರ್ ೨೫ ರಂದು ಅಂದು ವೀರೇಂದ್ರ ಕುಮಾರ್ ಜನಿಸಿದಾಗ ಧರ್ಮಸ್ಥಳದ ಬೀಡಿನ ಜ್ಯೋತಿ ಬೆಳಗಿತು ಎಂದು ಹಿರಿಯರು ಹೇಳಿದ್ದರಂತೆ. ಆದರೆ, ಈಗ ಹೆಗ್ಗಡೆಯವರು ಭುವನದ ಜ್ಯೋತಿಯಾಗಿ ಬೆಳೆಯುತ್ತಿದ್ದಾರೆ, ಬೆಳಗುತ್ತಿದ್ದಾರೆ ಎಂದು ಪ್ರೊ.ಎಸ್. ಪ್ರಭಾಕರ್ ಮೆಚ್ಚುಗೆ ವ್ಯಕ್ತಪಡಿಸಿದರು. ತಾನು ಅವರ ಬಾಲ್ಯದಿಂದಲೂ ಬೆಳವಣಿಗೆಯನ್ನು ಗಮನಿಸಿದ್ದು ಹೆಗ್ಗಡೆಯವರು ಸಂಕೀರ್ಣ, ವಿಸ್ಮಯದ ಹಾಗೂ ವಿಶೇಷ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಪ್ರಭಾಕರ್ ಅಭಿಪ್ರಾಯಪಟ್ಟರು.

ಡಾ. ಪ್ರಭಾಕರ ಜೋಶಿ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಉಜಿರೆ ಅಶೋಕ್ ಭಟ್ ಧನ್ಯವಾದವಿತ್ತರು.

ಎಸ್.ಡಿ.ಎಮ್. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್, ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷ ಡಾ. ಎಮ್.ಪಿ. ಶ್ರೀನಾಥ್, ಹಿರಿಯ ಯಕ್ಷಗಾನ ಕಲಾವಿದ ಕೆ. ಗೋವಿಂದ ಭಟ್ ಮತ್ತು ನಿವೃತ್ತ ಪತ್ರಕರ್ತ ಮುಂಡಾಜೆಯ ಶ್ರೀಕರ ರಾವ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English