ಮಂಗಳೂರು : ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹಾಗೂ ಇತ್ತೀಚೆಗೆ ಹೊರ ರಾಷ್ಟ್ರಗಳಲ್ಲಿ ವರದಿಯಾಗುತ್ತಿರುವ ಅದರ ರೂಪಾಂತರಿಯನ್ನು ತಡೆಗಟ್ಟುವಲ್ಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವ ಮಂಗಳೂರು ಬಂದರು ಟ್ರಸ್ಟ್ ನ ಪಾತ್ರ ಅತಿ ಮುಖ್ಯವಾಗಿದ್ದು, ಕೋವಿಡ್ ಸೋಂಕಿತರ ಪತ್ತೆಗಾಗಿ ಅತ್ಯಂತ ಎಚ್ಚರಿಕೆಯ ಕ್ರಮಗಳನ್ನು ವಹಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಸಂಬಂಧಿಸಿದವರಿಗೆ ಸೂಚಿಸಿದರು.
ಅವರು, ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನ.30ರ ಮಂಗಳವಾರ ಜಿಲ್ಲೆಯ ಚೆಕ್ ಪೋಸ್ಟ್ ಗಳಲ್ಲಿ ಅಂತರಾಷ್ಟ್ರೀಯ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರ ತಪಾಸಣೆ ಹಾಗೂ ನಿಗಾ ವಹಿಸುವ ಕುರಿತು ಹಮ್ಮಿಕೊಳ್ಳಲಾಗಿದ್ದ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಏರ್ಪೋರ್ಟ್ ಗೆ ಬರುವವರು ಕಡ್ಡಾಯವಾಗಿ ಆರ್ಟಿಪಿಸಿಆರ್ ವರದಿ ಹೊಂದಿರಬೇಕು, ಕೋವಿಡ್ ತಪಾಸಣೆ ವೇಳೆ ಪಾಸಿಟಿವ್ ಕಂಡುಬಂದಲ್ಲಿ ಕೂಡಲೇ ಆಂಬುಲೆನ್ಸ್ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸಬೇಕು, ಏರ್ಪೋರ್ಟ್ ಮ್ಯಾನೇಜರ್ ಗೆ ಸೋಂಕಿತರನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ಜವಬ್ದಾರಿ ನೀಡಲಾಗಿದೆ ಎಂದರು.
ಅದೇ ರೀತಿ ನವ ಮಂಗಳೂರು ಬಂದರು ಟ್ರಸ್ಟ್ಗೆ ಅಂತರಾಷ್ಟ್ರೀಯ ಹಾಗೂ ರಾಷ್ಟ್ರೀಯ ಹಡಗುಗಳಲ್ಲಿರುವ ಆಗಮಿಸುವ ಪ್ರಯಾಣಿಕರನ್ನು ಕೋವಿಡ್ ತಪಾಸಣೆಗೆ ಒಳಪಡಿಸಬೇಕು ಹಾಗೂ ಎಷ್ಟು ಪ್ರಯಾಣಿಕರು, ಎಷ್ಟು ಹಡಗುಗಳು ಇಲ್ಲಿಗೆ ಬಂದವು, ಆ ವಿವರಗಳನ್ನು ಪ್ರತಿ ವಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು ಎಂದು ಎನ್ ಎಂ ಪಿ ಟಿ ಮ್ಯಾನೇಜರ್ ಗೆ ತಿಳಿಸಿದರು.
ಪ್ರಮುಖವಾಗಿ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೋವಿಡ್ ವ್ಯಾಕ್ಸಿನ್ ನ ಮೊದಲ ಹಾಗೂ ಎರಡನೇ ಡೋಸ್ ಪಡೆದುಕೊಂಡಿರುವ ಬಗ್ಗೆ ಜಿಲ್ಲಾಧಿಕಾರಿಗಳ ಕಚೇರಿಗೆ ಕೂಡಲೇ ಮಾಹಿತಿ ಒದಗಿಸಬೇಕು, ಅದೇ ರೀತಿ ಸರ್ಕಾರಿ ಕಚೇರಿಗೆ ಆಗಮಿಸುವ ಸಾರ್ವಜನಿಕರು ಕೂಡ ಕೋವಿಡ್ ವ್ಯಾಕ್ಸಿನ್ ಪಡೆದಿರಬೇಕು, ಪಡೆಯದವರ ಅನುಕೂಲಕ್ಕಾಗಿ ಸಮೀಪದಲ್ಲಿಯೇ ವ್ಯಾಕ್ಸಿನ್ ನೀಡುವ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು ಎಂದು ತಿಳಿಸಿದರು.
ಮಂಗಳೂರು ಮಹಾನಗರ ಪಾಲಿಕೆಗೆ ಆಗಮಿಸುವ ಸಾರ್ವಜನಿಕರು ಕೋವಿಡ್ ನ ಮೊದಲ ಹಾಗೂ ಎರಡನೇ ಡೋಸ್ ಪಡೆದಿರುವ ಬಗ್ಗೆ ಮಾಹಿತಿ ನೀಡಬೇಕು, ಆರ್ ಟಿ ಒ ಕಚೇರಿಗೆ ಸಾಕಷ್ಟು ಜನರು ಪ್ರತಿನಿತ್ಯ ಬರುತ್ತಾರೆ ಅವರು ಕೂಡ ವ್ಯಾಕ್ಸಿನ್ ಪಡೆದಿರುವ ಮಾಹಿತಿ ನೀಡಬೇಕು, ಕೇರಳ ಹಾಗೂ ಮಹಾರಾಷ್ಟ್ರದಿಂದ ಜಿಲ್ಲೆಗೆ ಆಗಮಿಸುವ ಪ್ರಯಾಣಿಕರ ವಾಹನಗಳನ್ನು ತಪಾಸಣೆ ಮಾಡಬೇಕು, ವಾಹನಗಳಲ್ಲಿರುವ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿ ಪಿ ಸಿ ಆರ್ ವರದಿ ಇಟ್ಟುಕೊಂಡಿರಬೇಕು, ರಾಂಡಮ್ ಆಗಿ ಪರಿಶೀಲಿಸುವ ಸಂದರ್ಭದಲ್ಲಿ ಈ ವರದಿ ನೀಡದಿದ್ದರೆ ಅಂತರಾಜ್ಯ ಸಾರಿಗೆಯನ್ನು ನಿರ್ಬಂಧಿಸುವ ಕ್ರಮವಹಿಸಲಾಗುವುದು ಎಂದು ಜಿಲ್ಲಾಧಿಕಾರಿಯವರು ಹೇಳಿದರು.
ಮುಖ್ಯವಾಗಿ ಕೇರಳದಿಂದ ಜಿಲ್ಲೆಗೆ ಆಗಮಿಸುವವರು ಆರ್ ಟಿ ಪಿ ಸಿ ಆರ್ ರಿಪೋರ್ಟ್ ಹೊಂದಿರಬೇಕು, ಕೋವಿಡ್ ನ ಎರಡು ಡೋಸ್ ಲಸಿಕೆ ಪಡೆದಿರಬೇಕು, ಪ್ರತಿನಿತ್ಯ ಕೇರಳದಿಂದ ಇಲ್ಲಿಗೆ ಆಗಮಿಸುವವರು 14 ದಿನಗಳಿಗೊಮ್ಮೆ ಕೋವಿಡ್ ತಪಾಸಣೆ ಮಾಡಿಸಿಕೊಂಡು, ವರದಿ ಇಟ್ಟುಕೊಂಡಿರಬೇಕು, ತಪಾಸಣೆ ವೇಳೆ ಅದನ್ನು ಹಾಜರು ಪಡಿಸಬೇಕು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಅಕ್ಷಯ್ ಶ್ರೀಧರ್, ಡಿಸಿಪಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ವರ್ಣೇಕರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಇದ್ದರು.
Click this button or press Ctrl+G to toggle between Kannada and English