ವಿದ್ಯಾರ್ಥಿ ದೆಸೆಯಲ್ಲೇ ಚಾರಿತ್ರಿಕ ಜೀವನಕ್ಕೆ ಬುನಾದಿ ರೂಪಿಸಿಕೊಳ್ಳಿ: ಡಾ. ಕುಮಾರ್

10:11 PM, Tuesday, November 30th, 2021
Share
1 Star2 Stars3 Stars4 Stars5 Stars
(No Ratings Yet)
Loading...

Alvas Nssಮೂಡುಬಿದಿರೆ: ಪೋಷಕರು, ಶಿಕ್ಷಕರು ವಿದ್ಯಾರ್ಥಿಗಳಿಗೆ ದಾರಿ ತೋರಿಸಬಹುದು ಆದರೆ ವಿದ್ಯಾರ್ಥಿಗಳೇ ತಮ್ಮ ಭವಿಷ್ಯದ ಶಿಲ್ಪಿಗಳು. ವಿದ್ಯಾರ್ಥಿ ದಿಸೆಯಿಂದಲೇ ತಮ್ಮ ಚಾರಿತ್ರಿಕ ಜೀವನಕ್ಕೆ ಬುನಾದಿ ರೂಪಿಸಿಕೊಳ್ಳಬೇಕು ಎಂದು ದ.ಕ. ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಹೇಳಿದರು.

ಆಳ್ವಾಸ್ ಕಾಲೇಜಿನ ಶಿವರಾಮ ಕಾರಂತ ಸಭಾಂಗಣದಲ್ಲಿ ಆಳ್ವಾಸ್  ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ 2021-22 ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಎನ್‌ಎಸ್‌ಎಸ್ ಧ್ಯೇಯಗಳನ್ನು ಅಳವಡಿಸಿಕೊಳ್ಳವ ಮೂಲಕ ಉತ್ತಮ ವೈಯಕ್ತಿಕ ಬದುಕನ್ನು ರೂಪಿಸಿಕೊಳ್ಳುವುದರೊಂದಿಗೆ ಸಾಮಾಜಿಕ ಜವಾಬ್ದಾರಿಯಿಂದ ಜೀವನದ ನಡೆಸಬಹುದು.  ಇದರಿಂದ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಸಹಾಯವಾಗಲಿದೆ. ಎನ್‌ಎಸ್‌ಎಸ್  ಸೂಕ್ತ ಪ್ರತಿಭೆಗಳನ್ನು ಗುರುತಿಸುವ ಉತ್ತಮ ವೇದಿಕೆಯಾಗಿದ್ದು ವಿದ್ಯಾರ್ಥಿ ಜೀವನದಲ್ಲಿ ಸಿಗುವ ಎಲ್ಲಾ ತರದ ಅವಕಾಶಗಳನ್ನು ಬಳಸಿಕೊಂಡು ದೇಶದ ಉತ್ತಮ ನಾಗರೀಕರಾಗಿ ಬೆಳೆಯಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಹಮ್ಮದ್ ಸದಾಕತ್ ಅವರು ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸ್ವಚ್ಛತೆ ಮತ್ತು ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಸ್ವಚ್ಛ ತರಗತಿಯಿಂದ ಸ್ವಚ್ಛ ಭಾರತದ ಕಲ್ಪನೆ ಸಾಕಾರಗೊಳ್ಳಲಿದೆ. ಎನ್‌ಎಸ್‌ಎಸ್‌ನ ಧ್ಯೇಯವಾದ ಸೇವಾ ಮನೋಭಾವನೆಗೆ ವಿದ್ಯಾರ್ಥಿಗಳು ಬದುಕಿನಲ್ಲಿ ಅಳವಡಿಸಿಕೊಂಡು ಸ್ವಾಸ್ಥ್ಯ ಸಮಾಜಕ್ಕೆ ಕಾರಣರಾಗಬೇಕು ಎಂದರು.

ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ ಅವರು ಮಾತನಾಡಿ,  ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಲ್ಲಿ ಶ್ರಮದಾನದ ಮೂಲಕ ಶ್ರಮಿಕವರ್ಗದ ಅನುಭವವನ್ನು ಪ್ರಾಯೋಗಿಕವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಉದ್ದೇಶ ಹೊಂದಿದ್ದು ಇದರಿಂತ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಲಿದೆ ಎಂದರು.

ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಲಾಗಿತ್ತು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅಂಬರೀಷ್ ಚಿಪ್ಳೂಂಕರ್, ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ದಾಮೋಧರ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋದಿಸಿದರು. ಸಿಂಚನಾ ಶೆಟ್ಟಿ ಸ್ವಾಗತಿಸಿದರು. ಸುಶಾಂತ್ ಆರ್ ಅಥಿತಿಗಳನ್ನು ಪರಿಚಯಿಸಿದರು. ಜ್ಯೋತಿ ವಂದಿಸಿದರು. ಆಶಿತಾ ಕಾರ್ಯಕ್ರಮ ನಿರ್ವಹಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English