ಗುರುವಾಯನಕೆರೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಚುನಾವಣಾ ಪ್ರಚಾರ

9:37 PM, Wednesday, December 1st, 2021
Share
1 Star2 Stars3 Stars4 Stars5 Stars
(No Ratings Yet)
Loading...

election campaignಮಂಗಳೂರು: ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲ ಇದರ ವತಿಯಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಕುವೆಟ್ಟು ಮತ್ತು ಕಣಿಯೂರು ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ಗುರುವಾಯನಕೆರೆಯ ನಮ್ಮ ಮನೆ ಹವ್ಯಕ ಸಭಾಭವನದಲ್ಲಿ ನೆರವೇರಿತು. ಸಭೆಯನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಬಳಿಕ ಮಾತಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು, “ಕೋಟ ಶ್ರೀನಿವಾಸ ಪೂಜಾರಿಯವರು ದಣಿವರಿಯದ ನಾಯಕ. ಮುಜರಾಯಿ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಇವರು ಈಗ ಸಮಾಜ ಕಲ್ಯಾಣ ಇಲಾಖೆ ಮೂಲಕ ಸಮಾಜದ ಅಭಿವೃದ್ಧಿಗೆ ಕಂಕಣ ಬದ್ಧರಾಗಿದ್ದಾರೆ. ಸಮಾಜದ ಕುಲಾಲ, ಬಿಲ್ಲವ, ಸವಿತಾ ಸಮಾಜ, ವಿಶ್ವಕರ್ಮ ಸಮಾಜಗಳಿಗೆ ಐದೂವರೆ ಕೋಟಿ ರೂ. ಗಳ ಅನುದಾನವನ್ನು ನೀಡಿದ್ದಾರೆ. ಬೆಳ್ತಂಗಡಿ ತಾಲೂಕಿಗೆ 1000 ಕೋಟಿ ರೂ. ಅನುದಾನ ನೀಡಿರುವ ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬಹುಮತ ಕೊಟ್ಟು ಗೆಲ್ಲಿಸಬೇಕಾದ್ದು ನಮ್ಮ ಅವಶ್ಯಕತೆಯಾಗಿದೆ. ಈ ಮೂಲಕ ಬೆಳ್ತಂಗಡಿ ತಾಲೂಕಿನ ಪ್ರತೀ ಹಳ್ಳಿಗಳು ಅಭಿವೃದ್ಧಿಯನ್ನು ಕಾಣುವಂತಾಗಬೇಕು. ಬೆಳ್ತಂಗಡಿ ತಾಲೂಕಿನಲ್ಲಿ 522 ಮತಗಳಿದ್ದು ಕನಿಷ್ಠ 100 ಮತಗಳಾದರೂ ಬೇರೆ ಪಕ್ಷಗಳಿಂದ ಚಲಾವಣೆ ಆಗುವಂತೆ ನೋಡಿಕೊಳ್ಳಬೇಕಿದೆ. ತಾಲೂಕಿನ ಬಿಜೆಪಿ ಪಂಚಾಯತ್ ಸದಸ್ಯರು ಬೇರೆ ಪಕ್ಷಗಳ ಸದಸ್ಯರನ್ನೂ ಮನವೊಲಿಸುವ ಕೆಲಸ ಮಾಡಬೇಕು.” ಎಂದರು.

ಬಳಿಕ ಮಾತಾಡಿದ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ, ಸುಳ್ಯ ಶಾಸಕ ಎಸ್. ಅಂಗಾರ ಅವರು, “ನಮಗೆ ಇರುವುದು ಒಂದೇ ವೋಟು. ಕೆಲವರು ಒಂದು ವೋಟು ಕೋಟಗೆ ಕೊಡಿ ಇನ್ನೊಂದು ವೋಟು ನಮಗೆ ಕೊಡಿ ಎಂದು ಹೇಳುತ್ತಾರೆ. ಇದು ವಿರೋಧಿಗಳ ಕುತಂತ್ರವಾಗಿದೆ. ಹೀಗೆ ಮಾಡಿದರೆ ಅಮೂಲ್ಯ ಮತ ಅಸಿಂಧುವಾಗುತ್ತದೆ. ಹಾಗಾಗದಂತೆ ಎಚ್ಚರಿಕೆ ವಹಿಸಿ ಒಂದೇ ಮತ ಅದು ಬಿಜೆಪಿ ಪಕ್ಷದ ಅಭ್ಯರ್ಥಿಗೆ ಎಂಬ ನಿಟ್ಟಿನಲ್ಲಿ ಮತ ಚಲಾಯಿಸಬೇಕು. ಕೋಟ ಶ್ರೀನಿವಾಸ ಪೂಜಾರಿಯವರಿಗೆ ಬಹುಮತ ಕೊಟ್ಟು ಗೆಲ್ಲಿಸಬೇಕು” ಎಂದರು.

ಸಭೆಯಲ್ಲಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಅಭ್ಯರ್ಥಿ, ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಮಾತಾಡುತ್ತ, “ಮತಗಳು ಅಸಿಂಧುವಾಗಬಾರದು ಎಂಬ ಕಾರಣಕ್ಕೆ ಅಲ್ಲಲ್ಲಿ ಚುನಾವಣೆ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಕಳೆದ ಬಾರಿ 250ರಷ್ಟು ಮತಗಳು ಅಸಿಂಧುವಾಗಿದ್ದು ಈ ಬಾರಿ ಹಾಗಾಗಬಾರದು. ಒಂದೇ ಮತವನ್ನು ಚಲಾವಣೆ ಮಾಡುವ ಅವಕಾಶವಿದ್ದು ಯಾವುದೇ ಗೊಂದಲಕ್ಕೆ ಒಳಗಾಗದೆ ಮತ ಚಲಾಯಿಸಬೇಕು. ಇದು ನಮ್ಮ ನಿಮ್ಮೆಲ್ಲರ ಸಂಘಟನಾತ್ಮಕ ಹೋರಾಟದಿಂದ ಸಾಧ್ಯವಾಗುತ್ತದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಕಾರಣ 200ರಷ್ಟಾದರೂ ಬೇರೆ ಪಕ್ಷಗಳ ಮತಗಳನ್ನು ಸೆಳೆಯಲು ಮುಂದಾಗಬೇಕು” ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತನಾಡುತ್ತ, “ಬದಲಾದ ಭಾರತದಲ್ಲಿ ನಾವು ಬದಲಾಗದ ಕಾರ್ಯಕರ್ತರು ದೇಶಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಓರ್ವ ಸಾಮಾನ್ಯ ಕಾರ್ಯಕರ್ತ ಪಂಚಾಯತ್ ಸದಸ್ಯನಾಗಿದ್ದು ಈಗ ಸದನದಲ್ಲಿ ರಾಜ್ಯದ ಜನರ ಪರವಾಗಿ ಧ್ವನಿ ಎತ್ತಿರುವವರು ಕೋಟ ಶ್ರೀನಿವಾಸ ಪೂಜಾರಿಯವರು. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಸುಳ್ಳು ಸುದ್ದಿ ಹರಿಯಬಿಟ್ಟಾಗ ತಾನೇ ಖುದ್ದಾಗಿ ಲೋಕಾಯುಕ್ತಕ್ಕೆ ಪತ್ರ ಬರೆದು ತನ್ನ ಆಸ್ತಿಯ ಬಗ್ಗೆ ಅನುಮಾನವಿದ್ದರೆ ತನಿಖೆ ಮಾಡಿ ಎಂದು ಒತ್ತಾಯಿಸಿದ ಮೊದಲ ಜನಪ್ರತಿನಿಧಿ ಇದ್ದರೆ ಅದು ಕೋಟ ಶ್ರೀನಿವಾಸ ಪೂಜಾರಿಯವರು. ಇಂತಹ ಸಾಮಾನ್ಯ ಮನುಷ್ಯ ಇಂದು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧೆ ಬಯಸಿದ್ದಾರೆ. ಇವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಬೇಕು. ನರೇಂದ್ರ ಮೋದಿ ಆಡಳಿತದಿಂದ ದೇಶದ ಗ್ರಾಮ ಪಂಚಾಯತ್ ಗಳಿಗೆ ಸಂಪೂರ್ಣ ಅಧಿಕಾರ ಸಿಕ್ಕಿದ್ದು ಪ್ರತೀ ಗ್ರಾಮ ಪಂಚಾಯತ್ ಸದಸ್ಯರು ಕೂಡ ಇಂದು ಗೌರವದಿಂದ ಬದುಕುವಂತಾಗಿದೆ. ಇಂತಹ ಕಾಲಘಟ್ಟದಲ್ಲಿ ವಿಧಾನ ಪರಿಷತ್ ಚುನಾವಣೆ ಸಮೀಪಿಸುತ್ತಿದ್ದು ಕೋಟ ಶ್ರೀನಿವಾಸ ಪೂಜಾರಿಯವರಿಗೆ ಸಂಪೂರ್ಣ ಬೆಂಬಲದ ಮೂಲಕ ಅವರಲ್ಲಿ ಶಕ್ತಿ ತುಂಬಬೇಕು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೆ ನಾವೆಲ್ಲರೂ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರಾಗಿದ್ದು ನಮ್ಮ ಮತಗಳು ಮಾರಾಟಕ್ಕಿಲ್ಲ. ರಾಜಕಾರಣವನ್ನು ವ್ಯವಹಾರಕ್ಕಾಗಿ ಬಳಸುವುದಿಲ್ಲ ಎಂಬ ಮನೋಭಾವನೆಯಿಂದ ಡಿ. 10ನೇ ತಾರೀಖಿನಂದು ಎಲ್ಲ ಮತಗಳನ್ನು ಕೋಟ ಶ್ರೀನಿವಾಸ ಪೂಜಾರಿಯವರಿಗೆ ನೀಡಬೇಕು” ಎಂದು ಕರೆ ನೀಡಿದರು.

ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಹರಿಕೃಷ್ಣ ಬಂಟ್ವಾಳ, ಮಂಡಲ ಅಧ್ಯಕ್ಷರು ಜಯಂತ್ ಕೋಟ್ಯಾನ್, ಬಿಜೆಪಿ ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಎಸ್.ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಸುಧೀರ್ ಶೆಟ್ಟಿ ಕಣ್ಣೂರು, ಜಿಲ್ಲಾ ಕಾರ್ಯದರ್ಶಿ ರಾಮದಾಸ್, ರಾಜೇಶ್ ಕಾವೇರಿ, ರಾಮದಾಸ್ ಬಂಟ್ವಾಳ, ಸಂತೋಷ್ ರೈ ಬೋಳಿಯಾರ್, ವೆಂಕಟ್ ದಂಬೆಕೋಡಿ, ಪೂಜಾ ಪೈ, ಮಾಧ್ಯಮ ಸಂಚಾಲಕ ರಣ್ ದೀಪ್ ಕಾಂಚನ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸಂತೋಷ್ ರೈ ಬೋಳಿಯಾರ್, ವೆಂಕಟ್ ಒಳಲಂಬೆ, ಸತೀಶ್ ಕುಂಪಲ, ದೇವದಾಸ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English