ಮಂಗಳೂರು: ವ್ಯಕ್ತಿ ಅಹಂಕಾರ, ಜಾತಿ, ಮತಗಳ ಅಹಂಕಾರವನ್ನು ಮೀರುವುದೇ ಸಾಮರಸ್ಯದ ಸಾಮಾಜಿಕ ವಾತಾವರಣ ಸೃಷ್ಟಿಗಿರುವ ದಾರಿ. ಕನಕ ಸಾಹಿತ್ಯ ಅಂತಹ ಸಾಮರಸ್ಯದ ಸಂದೇಶಗಳನ್ನು ಕೌಟುಂಬಿಕ, ಅಧ್ಯಾತ್ಮಿಕ ಮತ್ತು ಸಾಮಾಜಿಕ ನೆಲೆಗಳಲ್ಲಿ ಸಾರಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕ ಡಾ. ಧನಂಜಯ ಕುಂಬ್ಳೆ ಹೇಳಿದರು.
ಬುಧವಾರ ಹಂಪನಕಟ್ಟೆಯ ಮಿಲಾಗ್ರಿಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಏರ್ಪಡಿಸಿದ ಕನಕದಾಸ ಜಯಂತಿ ಪ್ರಯುಕ್ತ ಏರ್ಪಡಿಸಿದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಕನಕದಾಸರ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು ಎಂಬ ವಿಷಯದ ಕುರಿತು ಮಾತನಾಡಿದರು. ಬಹುತ್ವ ಇರುವಲ್ಲಿ ಸಂಘರ್ಷ ಇದ್ದೇ ಇರುತ್ತದೆ. ಆದರೆ ಸಂಘರ್ಷದ್ದು ಹಿಂಸೆಯ ದಾರಿ. ಆ ದಾರಿಯನ್ನು ಬಿಟ್ಟು ಸಾಮರಸ್ಯದ ನೆಮ್ಮದಿಯ ಬದುಕನ್ನು ಭಾರತೀಯ ಸಂತ ಪರಂಪರೆ ತೋರಿಸಿಕೊಟ್ಟಿದೆ. ಹೊಸ ತಲೆಮಾರು ಇದನ್ನು ಅರ್ಥಮಾಡಿಕೊಳ್ಳಬೇಕು. “ಕನಕದಾಸರ ಸಾಮಾಜಿಕ ಕಾಳಜಿಯ ಕೀರ್ತನೆಗಳು ಮತ್ತು ರಾಮಧಾನ್ಯ ಚರಿತೆ ಕಾವ್ಯ ವರ್ತಮಾನದ ಸಾಂಸ್ಕೃತಿಕ ಸಂದಿಗ್ಧವನ್ನು ಅನಾವರಣ ಮಾಡಿದೆ,” ಎಂದರು.
ಸಮಾರಂಭದಲ್ಲಿ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ವಂ. ಗುರು ಮೈಕಲ್ ಸಾಂತುಮಾಯೊರ್ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಸೌಮ್ಯ ಕೋಟ್ಯಾನ್ ಸ್ವಾಗತಿಸಿದರು. ವಿದ್ಯಾರ್ಥಿ ಫೆವಿಟ ಲೋಬೊ ನಿರೂಪಿಸಿದರು. ಜೆವಿಟ ವೇಗಸ್ ವಂದಿಸಿದರು.
Click this button or press Ctrl+G to toggle between Kannada and English