ಮಂಗಳೂರು : ಭಾರತೀಯ ಜನತಾ ಪಾರ್ಟಿ ಮೂಲ್ಕಿ ಮೂಡಬಿದ್ರೆ ಮಂಡಲ ಕಟೀಲು ಮತ್ತು ಬಜಪೆ ಮಹಾಶಕ್ತಿ ಕೇಂದ್ರದ ಆಶ್ರಯದಲ್ಲಿ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಇಲ್ಲಿನ ಎಕ್ಕಾರು ಬಂಟರ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು.
ಮೂಲ್ಕಿ ಮೂಡಬಿದ್ರೆ ಮಂಡಲ ಅಧ್ಯಕ್ಷ ಸುನಿಲ್ ಆಳ್ವ ಅವರು ಅತಿಥಿಗಳನ್ನು ಸ್ವಾಗತಿಸಿದರು.
ಬಳಿಕ ಮಾತಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರು, “ವಿಧಾನ ಪರಿಷತ್ ಚುನಾವಣೆಯಲ್ಲಿ ನೂರಕ್ಕೆ ನೂರರಷ್ಟು ನಾವು ಗೆಲ್ಲುತ್ತೇವೆ ನಿಜ. ಆದರೆ ಅತಿಯಾದ ವಿಶ್ವಾಸ ಕೂಡ ಒಳ್ಳೆಯದಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇರುವಷ್ಟು ಕಾರ್ಯಕರ್ತರಿಗೆ ಪಕ್ಷದ ಮೇಲಿನ ಪ್ರೀತಿ, ಕಾಳಜಿ ಬೇರೆಲ್ಲೂ ಇಲ್ಲ. ಕಳೆದ ತ್ರಿಪುರ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು ಕಾಂಗ್ರೆಸ್ ಮೂಲೆ ಸೇರಿದೆ. ಹೀಗಾಗಿ ಪಕ್ಷ ಮತ್ತು ಸಂಘಟನೆಯ ಭದ್ರಕೋಟೆಯಾದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 3700 ಮತಗಳು ಕೂಡಾ ಬಿಜೆಪಿ ಅಭ್ಯರ್ಥಿಗೆ ಚಲಾವಣೆಯಾಗಬೇಕು. ಒಂದೇ ಮತ ಅದು ನಮ್ಮ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೇ ಎಂಬ ಧ್ಯೇಯ ವಾಕ್ಯದಡಿಯಲ್ಲಿ ಮತ ಚಲಾಯಿಸಬೇಕು. ಓರ್ವ ಸಾಮಾನ್ಯ ಕಾರ್ಯಕರ್ತನಾಗಿದ್ದ ಕೋಟ ಅವರು ಇಂದು ರಾಜ್ಯದಲ್ಲಿ ಪ್ರಭಾವಿ ಖಾತೆಯನ್ನು ಹೊಂದಿರುವುದಕ್ಕೆ ಅವರ ಪಕ್ಷನಿಷ್ಠೆ ಮತ್ತು ಕಾರ್ಯಕರ್ತರ ಶ್ರಮವೇ ಕಾರಣ. ಇಲ್ಲಿ ಪ್ರಾಯೋಗಿಕವಾಗಿ ಮಾತದಾನ ನಡೆಯುವ ಕಾರಣ ಯಾವೊಂದು ಮತವೂ ಹಾಳಾಗಬಾರದು” ಎಂದು ಕರೆ ನೀಡಿದರು.
ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮಾತಾಡುತ್ತ, “ಒಬ್ಬನೇ ಅಭ್ಯರ್ಥಿ ಒಂದೇ ಮತ ಎನ್ನುವ ಮಾತನ್ನು ಯಾಕೆ ಒತ್ತು ಕೊಟ್ಟು ಹೇಳುತ್ತಿದ್ದೇವೆ ಎಂದರೆ ಕಳೆದ ಬಾರಿ 250ಕ್ಕೂ ಹೆಚ್ಚು ಮತಗಳು ಅಸಿಂಧುವಾಗಿದೆ. ಇಂತಹ ಬೆಳವಣಿಗೆ ರಾಜಕೀಯದಲ್ಲಿ ಭಾರೀ ಬದಲಾವಣೆ ತರಬಲ್ಲುದು. ಹೀಗಾಗಿ ಒಂದು ಮತವನ್ನು ಕೂಡ ಹಾಳಾಗಲು ನಾವು ಬಿಡಬಾರದು. ಈಗಿರುವ ಮತಗಳಿಗಿಂತ ಕನಿಷ್ಠ 100 ಮತಗಳನ್ನಾದರೂ ಹೆಚ್ಚು ಬೀಳುವಂತೆ ಮಾಡಲು ಪ್ರತಿಯೊಬ್ಬರೂ ಕೂಡ ಶ್ರಮ ವಹಿಸಬೇಕು. ನಾವೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ ಬಹುಮತ ಪಡೆಯುವುದು ಕಷ್ಟವಲ್ಲ. ನಾನು ಕಳೆದ 13 ವರ್ಷಗಳಿಂದ ಪಂಚಾಯತ್ ವ್ಯವಸ್ಥೆ ಮತ್ತು ಸದಸ್ಯರ ಪರವಾಗಿ ಅತ್ಯಂತ ಶ್ರದ್ಧೆಯಿಂದ ಕೆಲಸ ಮಾಡಿದ ಸಂತಸ ನನ್ನಲ್ಲಿದೆ. ಹಿಂದೆ 250 ರೂ. ಗೌರವ ಧನವನ್ನು ಪಂಚಾಯತ್ ಸದಸ್ಯರಿಗೆ ನೀಡುತ್ತಿದ್ದು ಅದು ಸದ್ಯ 1000 ರೂ. ಗೆ ಏರಿಕೆಯಾಗಿದೆ. ನಾನು ಸಭಾ ನಾಯಕನಾಗಿದ್ದಾಗ ಇದನ್ನು ಎರಡು ಸಾವಿರ ರೂ. ಏರಿಕೆಗೆ ಮನವಿ ಮಾಡಿದ್ದು ಸದ್ಯದಲ್ಲೇ ಅದು ಜಾರಿಗೆ ಬರಲಿದೆ. ಹೀಗೆ ಪಂಚಾಯತ್ ವ್ಯವಸ್ಥೆಯ ಬಗ್ಗೆ ಸಾಕಷ್ಟು ಹೋರಾಟ ಮಾಡಿರುವ ನಾನು ನಾಲ್ಕನೇ ಬಾರಿ ಕಣದಲ್ಲಿದ್ದು ಪ್ರಥಮ ಪ್ರಾಶಸ್ತ್ಯ ಮತವನ್ನು ನನಗೆ ನೀಡುವ ಮೂಲಕ ಅಭಿವೃದ್ಧಿಯಲ್ಲಿ ಕೈಜೋಡಿಸಿ. ಈಗಿರುವ ಒಟ್ಟು ಮತಗಳಿಗಿಂತ ಒಂದಷ್ಟು ಮತಗಳನ್ನಾದರೂ ಬೇರೆ ಪಕ್ಷಗಳಿಂದ ಸೆಳೆದು ಬಹುಮತ ಪಡೆಯಲು ಸಹಕರಿಸಿ” ಎಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ ಮಾತಾಡುತ್ತ, “ನಾಲ್ಕು ಗೋಡೆಗಳ ಮಧ್ಯೆ ಅಡುಗೆ ಕೋಣೆಗಷ್ಟೇ ಸೀಮಿತವಾಗಿದ್ದ ಮಹಿಳೆಯರನ್ನು ರಾಜಕೀಯ, ಸಮಾಜದ ಮುಖ್ಯವಾಹಿನಿಗೆ ಕರೆತಂದಿದ್ದು ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಅವರು. ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದ್ದು ನಮ್ಮ ಪಕ್ಷಕ್ಕೆ ಪ್ರತಿಯೊಂದು ಚುನಾವಣೆ ಕೂಡಾ ಮಹತ್ವದ್ದಾಗಿದೆ. ಹಿಂದೆ ನಮ್ಮ ಪಕ್ಷದಲ್ಲಿ ಚುನಾವಣೆ ನಿಲ್ಲಲು ಅಭ್ಯರ್ಥಿಗಳಿರಲಿಲ್ಲ. ಪಕ್ಷಕ್ಕಾಗಿ ದುಡಿಯಲು ಕಾರ್ಯಕರ್ತರು ಇರಲಿಲ್ಲ. ಆದರೆ ಈಗ ಅದರ ಕೊರತೆ ನಮ್ಮ ಪಕ್ಷದಲ್ಲಿಲ್ಲ. ಮಹಾತ್ಮ ಗಾಂಧೀಜಿ ಕಂಡಿದ್ದ ರಾಮರಾಜ್ಯದ ಕನಸು ಗ್ರಾಮಗಳ ಅಭಿವೃದ್ಧಿಯಿಂದಲೇ ಆರಂಭವಾಗಬೇಕು. ಪ್ರಧಾನಿ ಮೋದಿಯವರ ಆಡಳಿತದಲ್ಲಿ ಗ್ರಾಮ ಪಂಚಾಯತ್ ಸದಸ್ಯರ ಅನುದಾನ ಇಂದು ನೇರವಾಗಿ ಬಿಡುಗಡೆಯಾಗುತ್ತಿದೆ. ಇದರಿಂದ ಸದಸ್ಯರ ಗೌರವವೂ ಹೆಚ್ಚಿದೆ. ಹೀಗಾಗಿ ಪಂಚಾಯತ್ ಸದಸ್ಯರು ಗೆಲುವಿನಲ್ಲಿ ಶ್ರಮವಹಿಸಿ ದುಡಿಯಬೇಕು.” ಎಂದರು.
“ಈ ರಾಜ್ಯದಲ್ಲಿ ಒಂದು ಅಪವಾದ ಇತ್ತು. ಇಲ್ಲಿ ಯಾರು ಧಾರ್ಮಿಕ ದತ್ತಿ ಇಲಾಖೆ ಸಚಿವರು ಆಗ್ತಾರೋ ಅವರ ರಾಜಕೀಯ ಭವಿಷ್ಯ ಮುಗಿಯಿತು ಎಂದು ಹೇಳಲಾಗುತ್ತಿತ್ತು. ಆದರೆ ಯಶಸ್ವಿಯಾಗಿ ಧಾರ್ಮಿಕ ದತ್ತಿ ಖಾತೆಯನ್ನು ನಿರ್ವಹಿಸಿ ಈಗ ಪ್ರಭಾವಿ ಖಾತೆಯಾದ ಸಮಾಜ ಕಲ್ಯಾಣ, ಹಿಂದುಳಿದ ಖಾತೆಯನ್ನು ನಿರ್ವಹಿಸುತ್ತಿರುವುದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಹಿಂದುಳಿದ ವರ್ಗದ ಕಟ್ಟಕಡೆಯ ವ್ಯಕ್ತಿಗೂ ಇಲಾಖೆಯ ಯೋಜನೆಗಳು ಸಿಗಬೇಕು ಎಂಬ ನಿಟ್ಟಿನಲ್ಲಿ ಅಹರ್ನಿಷಿ ದುಡಿಯುತ್ತಿರುವ ಕೋಟ ಶ್ರೀನಿವಾಸ್ ಪೂಜಾರಿ ಪ್ರಾಮಾಣಿಕರಾಗಿದ್ದಾರೆ. ತನ್ನ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆದಾಗ ತಾನೇ ಲೋಕಾಯುಕ್ತಕ್ಕೆ ಪತ್ರ ಬರೆದು ತನಿಖೆ ನಡೆಸಿ ಎನ್ನುವ ಮೂಲಕ ದೇಶದ ಅಪರೂಪದ ರಾಜಕಾರಣಿ ಎಂದು ಕರೆಯಲ್ಪಟ್ಟರು. ಪಕ್ಷ ನಾಲ್ಕನೇ ಬಾರಿ ಕೋಟ ಶ್ರೀನಿವಾಸ್ ಪೂಜಾರಿಯವರನ್ನು ಕಣಕ್ಕೆ ಇಳಿಸಿದ್ದು ಅಭಿನಂದನಾರ್ಹ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿ ಮತದಾನದ ಗೊಂದಲ ನಿವಾರಣೆಗೆ ಪ್ರಾತ್ಯಕ್ಷಿಕೆ ನಡೆಸಲಾಗುತ್ತಿದೆ. ಕಳೆದ ಬಾರಿ ಮತಗಳು ಹಾಳಾದಂತೆ ಈ ಬಾರಿ ನಡೆಯಬಾರದು. ಒಂದೇ ಮತವನ್ನು ಚಲಾಯಿಸಬೇಕಿದ್ದು ಅದು ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಚಲಾಯಿಸಬೇಕು” ಎಂದು ಹೇಳಿದರು.
ವಿಧಾನ ಪರಿಷತ್ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಜಿಲ್ಲಾ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ರಾಜೇಶ್ ಕಾವೇರಿ, ಸುಧೀರ್ ಶೆಟ್ಟಿ ಕಣ್ಣೂರು ಕಸ್ತೂರಿ ಪಂಜ, ಹರಿಕೃಷ್ಣ ಬಂಟ್ವಾಳ, ಸಂತೋಷ್ ರೈ ಬೋಳಿಯಾರ್, ದೇವದಾಸ್ ಶೆಟ್ಟಿ, ಸತೀಶ್ ಕುಂಪಲ, ಪ್ರಸಾದ್ ಕುಮಾರ್, ಈಶ್ವರ್ ಕಟೀಲ್, ಮಾಧ್ಯಮ ಪ್ರಮುಖ್ ರಣ್ ದೀಪ್ ಕಾಂಚನ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English