ಮಂಗಳೂರು: ನಾವು ಒತ್ತಡವನ್ನು ನಿರ್ವಹಿಸುವ ಬದಲು ನಮ್ಮನ್ನು ನಾವು ಚೆನ್ನಾಗಿ ನಿರ್ವಹಿಸಿಕೊಂಡರೆ ಒತ್ತಡದ ಸಮಸ್ಯೆಯೇ ಉದ್ಭವವಾಗುವುದಿಲ್ಲ, ಎಂದು ಖ್ಯಾತ ಆಪ್ತ ಸಮಾಲೋಚಕಿ ಶ್ರೀಮತಿ ಮಮತಾ ಆಚಾರ್ ಅಭಿಪ್ರಾಯಪಟ್ಟರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಇತ್ತೀಚೆಗೆ ಪ್ರಥಮ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಶುದ್ಧ ಗಾಳಿ, ಉತ್ತಮ ಆಹಾರ, ಸಾಕಷ್ಟು ನೀರು, ಧ್ಯಾನ, ವ್ಯಾಯಾಮ, ಸಮಯ ನಿರ್ವಹಣೆ ನಮ್ಮನ್ನು ಒತ್ತಡದಿಂದ ದೂರವಿಡಬಲ್ಲವು. ಮುಕ್ತವಾಗಿ ಮಾತನಾಡಬಹುದಾದ ಹಳೆಯ ಸ್ನೇಹಿತರು, ಹವ್ಯಾಸಗಳೂ ನಮಗೆ ನೆರವಾಗಬಲ್ಲವು. “ಮನಸ್ಸು ಹರಿಯುವ ನೀರಿನಂತೆ ಸ್ವಚ್ಛವಾಗಿರಲಿ. ನಕಾರಾತ್ಮಕತೆಗೆ ಜಾಗ ಕೊಡದೆ ಯಾವತ್ತೂ ಆತ್ಮವಿಶ್ವಾಸದಿಂದಿರಿ. ದೂರುವ ಪ್ರವೃತ್ತಿ ಬೇಡ. ಪ್ರತಿ ದಿನವೂ ನಿಮಗೆ ದೊರೆತ ಉಡುಗೊರೆ ಎಂಬಂತೆ ಸಂತೋಷವಾಗಿರಿ,” ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕೌನ್ಸಿಲಿಂಗ್ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಆದರೆ ಇದು ಮಾತಿನ ಚಿಕಿತ್ಸೆಯಷ್ಟೇ. ಆಪ್ತವಾಗಿ ಮನಸ್ಸಲ್ಲಿರುವ ದುಗುಡಗಳನ್ನು ಅರಿತು ಸಾಧ್ಯವಾಗುವ ಪರಿಹಾರ ನೀಡುವುದೇ ಕೌನ್ಸಿಲಿಂಗ್. ಇದು ವೈದ್ಯಕೀಯ ಚಿಕಿತ್ಸೆಗೆ ಪರ್ಯಾಯವಲ್ಲ, ಎಂದರು. ಪ್ರಾಂಶುಪಾಲೆ ಡಾ. ಅನಸೂಯ ರೈ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಲತಾ ಎ. ಪಂಡಿತ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿನಿ ಪವಿತ್ರಾ ಧನ್ಯವಾದ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ, ಹೆಲಿಕಾಪ್ಟರ್ ದುರಂತದಲ್ಲಿ ಮಡಿದ ಭಾರತೀಯ ರಕ್ಷಣಾ ಪಡೆಗಳ ಮುಖ್ಯಸ್ಥ ಜ| ಬಿಪಿನ್ ರಾವತ್ ಸೇರಿ 13 ಮಂದಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Click this button or press Ctrl+G to toggle between Kannada and English