ಸುಳ್ಯ : ಅವಿನಾಶ್ ಮೋಟಾರ್ಸ್ ಮಾಲೀಕ ಸುಳ್ಯದ ನಾರಾಯಣ ರೈ(73) ಸೋಮವಾರ ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಸೌಖ್ಯದ ಹಿನ್ನೆಲೆಯಲ್ಲಿ ತನಗೆ ಬದುಕಲು ಕಷ್ಟವಾಗುತ್ತಿದೆ. ಮನೆಯವರಿಗೂ ಕಷ್ಟ ಕೊಡಲು ಮನಸ್ಸಿಲ್ಲ, ಹೀಗಾಗಿ ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ನನ್ನ ಮರಣದ ಕಾರಣದಿಂದ ಬಸ್ಗಳ ಓಡಾಟ ನಿಲ್ಲಿಸಬಾರದು. ಕಪ್ಪು ಫ್ಲ್ಯಾಗ್ ಹಾಕಿ ಬಸ್ ಓಡಿಸಬೇಕು’ ಎಂದು ಡೆತ್ ನೋಟ್ ಬರೆದಿದ್ದರು.
ಸಾವಿಗೂ ಮೊದಲು ತನ್ನ ತಂಗಿಗೆ ಧ್ವನಿ ಸಂದೇಶ ಕಳುಹಿಸಿದ್ದರು. ಮೃತದೇಹದ ಪಕ್ಕದಲ್ಲಿ ಡೆತ್ನೋಟ್ ಪತ್ತೆಯಾಗಿದೆ.
ಕೆಲವು ತಿಂಗಳ ಹಿಂದೆ ಅವರು ಪಾರ್ಶ್ವವಾಯು ಕಾಯಿಲೆಗೆ ಒಳಗಾಗಿದ್ದರು. ಸಾದಾರಣ ಚೇತರಿಸಿಕೊಂಡ ಅವರು ಕಾರಿನಲ್ಲಿ ಸುಳ್ಯಕ್ಕೆ ಬಂದು ಹೋಗುತ್ತಿದ್ದರು.
ಪೇರಾಲು ಪೂಜಾರಿಮೂಲೆ ರಾಮಣ್ಣ ರೈ ಮತ್ತು ಸೀತಮ್ಮ ರೈ ದಂಪತಿ ಪುತ್ರ ನಾರಾಯಣ ರೈ ಪ್ರೌಢ ಶಿಕ್ಷಣ ಬಳಿಕ ಮಂಗಳೂರಿನಲ್ಲಿ ಖಾಸಗಿ ಉದ್ಯೋಗ, ಬಳಿಕ ಕೆಲಕಾಲ ಕೆಎಸ್ಆರ್ಟಿಸಿ ಚಾಲಕರಾಗಿದ್ದರು. ಸ್ವಯಂ ನಿವೃತ್ತಿ ಪಡೆದು ಬಸ್ ಖರೀದಿಸಿ ಗ್ರಾಮೀಣ ಭಾಗಗಳಿಗೆ ಸಂಚಾರ ಆರಂಭಿಸಿದರು. ಇದು ಗ್ರಾಮೀಣ ಪ್ರದೇಶದ ಜನರಿಗೆ ಮತ್ತು ವಿದ್ಯಾರ್ಥಿಗಳಿಗೆ ತುಂಬಾ ಸಹಕಾರಿಯಾಯಿತು.
ಉದ್ಯಮದಲ್ಲಿ ಬೆಳೆದ ಅವರು 18 ಬಸ್ಗಳ ಒಡೆಯರಾಗಿದ್ದು, ಬೆಂಗಳೂರು, ಮಂಗಳೂರಿಗೂ ಬಸ್ ಓಡಿಸುತ್ತಿದ್ದರು. ವರ್ಷ ಕಳೆದಂತೆ ಉದ್ಯಮ ಅಷ್ಟು ಲಾಭದಾಯಕವಾಗಿಲ್ಲದ ಕಾರಣ ಬಸ್ ಸಂಚಾರ ಗ್ರಾಮೀಣ ಪ್ರದೇಶಗಳಿಗೆ ಸೀಮಿತಗೊಂಡಿತು.
ಅವರು ಪತ್ನಿ ವಿಜಯಾ ರೈ, ಪುತ್ರರಾದ ಅವಿನಾಶ್ ರೈ, ಅಭಿಲಾಷ್ ರೈಯನ್ನು ಅಗಲಿದ್ದಾರೆ.
Click this button or press Ctrl+G to toggle between Kannada and English