ಬೆಳ್ತಂಗಡಿ ತಾಲೂಕುಗಳಲ್ಲಿ ಡಿ.17ರ ಮಧ್ಯರಾತ್ರಿ 12ರ ತನಕ ಸೆಕ್ಷನ್ 144ರಡಿ ನಿಷೇಧಾಜ್ಞೆ

5:58 PM, Thursday, December 16th, 2021
Share
1 Star2 Stars3 Stars4 Stars5 Stars
(5 rating, 1 votes)
Loading...

pfi-protestಮಂಗಳೂರು: ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳುವ ಸನ್ನಿವೇಶ ನಿರ್ಮಾಣ ಮಾಡಿರುವುದರಿಂದ  ಪುತ್ತೂರು ಉಪವಿಭಾಗವಾದ ಪುತ್ತೂರು, ಸುಳ್ಯ, ಕಡಬ, ಬೆಳ್ತಂಗಡಿ ತಾಲೂಕುಗಳಲ್ಲಿ ಡಿ.17ರ ಮಧ್ಯರಾತ್ರಿ 12ರ ತನಕ ಸೆಕ್ಷನ್ 144ರಡಿ ನಿಷೇಧಾಜ್ಞೆ ವಿಧಿಸಿ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ಆದೇಶ ಹೊರಡಿಸಿದ್ದಾರೆ.

ಪುತ್ತೂರು, ಕಡಬ, ಬೆಳ್ಳಾರೆ, ಸವಣೂರು, ಬೆಳ್ತಂಗಡಿ, ಸುಳ್ಯ, ಬಂಟ್ವಾಳ ಕಡೆಯಿಂದ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ಉಪ್ಪಿನಂಗಡಿಗೆ ಆಗಮಿಸಿ ಕಾನೂನು ಕೈಗೆತ್ತಿಕೊಳ್ಳುವ ಸನ್ನಿವೇಶ ನಿರ್ಮಾಣ ಮಾಡಿದ್ದು, ಮುಂದುವರಿದು ಉಪವಿಭಾಗ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವ ಸಾಧ್ಯತೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಅವಧಿಯಲ್ಲಿ ಸಾರ್ವಜನಿಕ ಸಭೆ, ಸಮಾರಂಭ, ಮೆರವಣಿಗೆ ನಡೆಸುವಂತಿಲ್ಲ, ಗುಂಪು ಸೇರುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಹಿಂಸಾಚಾರ ಹಿನ್ನೆಲೆಯಲ್ಲಿ ಉಪ್ಪಿನಂಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ 3 ಪ್ಲಟೂನ್‌ಗಳನ್ನು ಪೇಟೆಯ ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿದೆ. ಜಿಲ್ಲೆಯ ಇತರ ಪೊಲೀಸ್ ಠಾಣೆಗಳ ಅಧಿಕಾರಿಗಳು ಮೊಕ್ಕಾಂ ಹೂಡಿದ್ದು, ಮಂಗಳೂರು, ಸುಳ್ಯ, ಕಡಬ, ಬಂಟ್ವಾಳದ ಪೊಲೀಸರನ್ನೂ ಉಪ್ಪಿನಂಗಡಿ ಸುತ್ತಮುತ್ತ ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಪಶ್ವಿಮ ವಲಯ ಐಜಿಪಿ ದೇವಜ್ಯೋತಿ ರೇ, ಎಸ್.ಪಿ ಹೃಷಿಕೇಶ್ ಸೋನಾವಣೆ, ಅಡಿಷನಲ್ ಎಸ್ಪಿ. ಶಿವಕುಮಾರ್ ಗುನಾರೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಪರಾಮರ್ಶೆ ನಡೆಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಹೃಷಿಕೇಶ್ ಸೋನಾವಣೆ, ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡೂ ತಲವಾರು ದಾಳಿಯ ತನಿಖೆ ನಡೆಯುತ್ತಿದೆ. ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಇಲಾಖೆ ಶ್ರಮಿಸುತ್ತಿದೆ. ಖಚಿತ ಮಾಹಿತಿ ಆಧಾರದಲ್ಲಿ ಮೂವರು ಪಿಎಫ್‌ಐ ಕಾರ್ಯಕರ್ತರನ್ನು ವಿಚಾರಣೆಗಾಗಿ ಕರೆಸಲಾಗಿತ್ತು. ಅದನ್ನು ಆಕ್ಷೇಪಿಸಿ ಪ್ರತಿಭಟನೆ ನಡೆಸಿದ ಗುಂಪೊಂದು ಠಾಣೆಗೆ ನುಗ್ಗಲೆತ್ನಿಸಿ ಹಿಂಸಾತ್ಮಕವಾಗಿ ವರ್ತಿಸಿದಾಗ ಪೊಲೀಸ್ ಲಾಠಿಚಾರ್ಜ್ ಮಾಡಬೇಕಾಯಿತು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು. ಬೆದರಿಕೆಯಿಂದ ಇಲಾಖೆಯನ್ನು ಮಣಿಸುವ ಭ್ರಮೆ ಯಾರಿಗೂ ಬೇಡ. ಪ್ರಕರಣದಲ್ಲಿ ಅಮಾಯಕರು ಸಿಲುಕದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.

ಪಿಎಫ್‌ಐ ಕಾರ್ಯಕರ್ತರು ಮಂಗಳವಾರ ರಾತ್ರಿ ನಡೆಸಿದ ಪ್ರತಿಭಟನೆ ಹಿಂಸಾರೂಪ ತಾಳಿ ಲಾಠಿಚಾರ್ಜ್ ನಡೆದು ಏಳು ಮಂದಿ ಪೊಲೀಸರ ಸಹಿತ 20ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಳೆಗೇಟ್‌ನ ಸುಬ್ರಹ್ಮಣ್ಯ ಕ್ರಾಸ್ ಬಳಿಯ ಮೀನಿನ ಅಂಗಡಿಯೊಂದಕ್ಕೆ ತಲವಾರು ದಾಳಿ ನಡೆಸಿ ಮೂವರನ್ನು ಕಡಿದು ಗಾಯಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ಮೂವರು ಪಿಎಫ್‌ಐ ಮುಖಂಡರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದನ್ನು ಖಂಡಿಸಿ ಬೆಳಗ್ಗಿನಿಂದ ರಾತ್ರಿವರೆಗೆ ನಡೆದ ಪ್ರತಿಭಟನೆ ನಂತರ ಹಿಂಸಾರೂಪ ಪಡೆದಿತ್ತು.

ನಮ್ಮ ನಾಯಕರನ್ನು ಬಿಡುಗಡೆಗೊಳಿಸದೆ ನಿರ್ಗಮಿಸುವುದಿಲ್ಲ ಎಂದು ಘೋಷಣೆ ಕೂಗಿದ ಪ್ರತಿಭಟನಾಕಾರರು, ಪೊಲೀಸ್ ಜೀಪು ಹಾಗೂ ಪೊಲೀಸ್ ಕೌಂಟರಿನ ಗಾಜುಗಳಿಗೆ ಕಲ್ಲೆಸೆದು ಹಾನಿಗೊಳಿಸಿದ್ದು, ಅಧಿಕಾರಿಗಳ ಮೇಲೂ ಮುಗಿಬಿದ್ದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುವುದನ್ನು ಅರಿತ ಪೊಲೀಸರು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.

ಈ ವೇಳೆ ಡಿವೈಎಸ್ಪಿ ಗಾನಾ ಪಿ. ಕುಮಾರ್, ಎಸ್‌ಐ ಪ್ರಸನ್ನ, ಮಹಿಳಾ ಎಸ್‌ಐ ಓಮನಾ, ಸಿಬ್ಬಂದಿ ರೇಣುಕಾ, ಶರೀಫ್ ನದಾಪ್, ಶೇಷಾದ್ರಿ, ಹರೀಶ್ ಹಾಗೂ ಕಿರಣ್ ಕುಮಾರ್ ಗಾಯಗೊಂಡರು. 144 ಸೆಕ್ಷನ್ ಉಲ್ಲಂಘನೆ ಹಾಗೂ ಹಿಂಸಾತ್ಮಕ ಪ್ರತಿಭಟನೆ ನಡೆಸಿದ ಆರೋಪದನ್ವಯ ಮೂರು ಪ್ರಕರಣಗಳು ದಾಖಲಾಗಿವೆ. ಸ್ಥಳದಲ್ಲಿ ಭಾರಿ ಸಂಖ್ಯೆಯ ಚಪ್ಪಲಿಗಳು, ಜಲ್ಲಿ ಕಲ್ಲುಗಳು ಕಂಡುಬಂದಿವೆ.

ಲಾಠಿಚಾರ್ಜ್‌ಗೂ ಮುನ್ನ ಉಪ್ಪಿನಂಗಡಿಯ ಕಾಳಿಕಾಂಬಾ ಭಜನಾ ಮಂಡಳಿಯ ಏಕಾದಶಿ ಭಜನಾ ಪ್ರಯುಕ್ತ ನಡೆದ ಉಲ್ಪೆ ಮೆರವಣಿಗೆ ಸುಸೂತ್ರವಾಗಿ ಇದೇ ಬೀದಿಯಲ್ಲಿ ಹಾದು ಹೋಗಿತ್ತು.

ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗುತ್ತ ನಡೆಸಿದ ಪ್ರತಿಭಟನೆಯಲ್ಲಿ ಸ್ಥಳೀಯರಿಗಿಂತ ಹೆಚ್ಚಾಗಿ ಹೊರಗಿನ ಯುವಕರೇ ಹೆಚ್ಚು ಕಾಣಿಸಿಕೊಂಡಿದ್ದರು. ಹಿರಿಯರ ಮಾತನ್ನೂ ಕೇಳದೆ ಪ್ರತಿಭಟನೆ ಮುಂದುವರಿಸಿದಾಗ ಸಮೀಪದ ಮಸೀದಿ ಪ್ರಾಂಗಣ ಪ್ರವೇಶಿಸದಂತೆ ಪ್ರಧಾನ ಗೇಟು ಹಾಕಲಾಗಿತ್ತು. ಲಾಠಿ ಚಾರ್ಜ್ ನಡೆದಾಗ ಪ್ರತಿಭಟನಾಕಾರರು ಮಸೀದಿಯ ಆವರಣಗೋಡೆ ಜಿಗಿದು ಬಂದಿದ್ದು, ಬೆನ್ನಟ್ಟಿ ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದರು.

ನಾವು ಅಮಾಯಕರು. ದೂರದ ಊರಿನಿಂದ ಸಂಬಂಧಿಕರ ಮನೆಗೆ ಹೋಗಲೆಂದು ಉಪ್ಪಿನಂಗಡಿಗೆ ಬಂದು ನಮಾಜು ಸಲ್ಲಿಸಲು ಮಸೀದಿಗೆ ಹೋಗಿ ಹಿಂತಿರುಗುವಾಗ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ಲಾಠಿಯೇಟು ತಿಂದು ಗಾಯಗೊಂಡವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆದರೆ ಇವರು ಪ್ರತಿಭಟನೆ ಸ್ಥಳದಲ್ಲಿ ಪೊಲೀಸರ ವಿರುದ್ಧ ಘೋಷಣೆ ಕೂಗುತ್ತಿರುವ ವಿಡಿಯೋ ಕ್ಲಿಪಿಂಗ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English