ಮಂಗಳೂರು : ಮೀನುಗಾರನೋರ್ವನನ್ನು ಪರಿಚಯಸ್ಥರೇ ಮೊಬೈಲ್ ಕಳ್ಳತನ ಮಾಡಿರುವ ಆರೋಪ ಹೊರಿಸಿ ತಲೆಕೆಳಗೆ ಮಾಡಿ ನೇತು ಹಾಕಿದ್ದಲ್ಲದೆ ಗಂಭೀರವಾಗಿ ಹಲ್ಲೆ ನಡೆಸಿರುವ ಅಮಾನವೀಯ ಕೃತ್ಯ ಎಸಗಿದ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೌರ್ಜನ್ಯಕ್ಕೊಳಗಾದ ಮೀನುಗಾರನ ವೀಡಿಯೋವೊಂದು ವೈರಲ್ ಆದ ಹಿನ್ನೆಲೆಯಲ್ಲಿ ವಿಚಾರಣೆ ಆರಂಭಿಸಿದ್ದ ಮಂಗಳೂರು ಪೊಲೀಸರು, ಆಂಧ್ರ ಪ್ರದೇಶ ಮೂಲದ ವೈಲ ಶೀನು (32) ಎಂಬಾತ ನೀಡಿದ ದೂರಿನ ಮೇರೆಗೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಂಡೂರು ಪೋಲಯ್ಯ(23), ಅವುಲು ರಾಜ್ ಕುಮಾರ್(26), ಕಾಟಂಗರಿ ಮನೋಹರ್(21), ವೂಟುಕೋರಿ ಜಾಲಯ್ಯ(30), ಕರಪಿಂಗಾರ ರವಿ(27) ಹಾಗೂ ಪ್ರಲಯಕಾವೇರಿ ಗೋವಿಂದಯ್ಯ(47) ಬಂಧಿತ ಆರೋಪಿಗಳಾಗಿದ್ದು, ಬಂಧಿತರೆಲ್ಲ ಆಂಧ್ರಪ್ರದೇಶದವರಾಗಿದ್ದು, ಅಕ್ಕಪಕ್ಕದ ಜಿಲ್ಲೆಯವರಾಗಿದ್ದಾರೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಎನ್. ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಆಂಧ್ರದ ಪ್ರಕಾಶಂ ಜಿಲ್ಲೆಯ ಕಾಟಮ್ವಾರಿ ಪಾಲಂ ನಿವಾಸಿ ವೈಲ ಶೀನು ಕೆಲವು ಸಮಯದಿಂದ ಮಂಗಳೂರು ದಕ್ಕೆಯಲ್ಲಿ ಮೀನುಗಾರಿಕಾ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದು, ಡಿ.14ರಂದು ಜಾನ್ ಶೈಲೇಶ್-2 ಹೆಸರಿನ ಬೋಟಿನಲ್ಲಿ ಆರೋಪಿಗಳು ಜತೆಯಾಗಿ ಊಟದ ವ್ಯವಸ್ಥೆ ಮಾಡಿಕೊಂಡಿದ್ದರು. ಆ ದಿನ ವೈಲ ಶೀನು ಕೂಡಾ ಅಲ್ಲಿ ಹೋಗಿ ವಾಪಾಸು ತಾನು ಕೆಲಸ ಮಾಡುವ ಬೋಟ್‌ಗೆ ಹಿಂತಿರುಗಿ ಬಂದು ಮಲಗಿದ್ದನು. ಮರುದಿನ ಬೆಳಗ್ಗೆ ಸಮಾರು 11 ಗಂಟೆಯ ವೇಳೆಗೆ ವೈಲ ಶೀನು ಬಳಿ ಬಂದ ಆರೋಪಿಗಳು, ಮೊಬೈಲ್ ಕದ್ದಿರುವುದಾಗಿ ಆರೋಪಿಸಿದ್ದಾರೆ ವೈಲ ಶೀನು ನಿರಾಕರಿಸಿದಾಗ, ಆತನ ಕೈಕಾಲುಗಳನು ಹಿಡಿದು, ಬೊಬ್ಬೆ ಹಾಕದಂತೆ ಬಾಯಿ ಮುಚ್ಚಿಸಿ ಎರಡೂ ಕಾಲುಗಳನ್ನು ಜೋಡಿಸಿ ಹಗ್ಗದಿಂದ ಕಟ್ಟಿ ಕಾಲಿಗೆ ಗಟ್ಟಿದ ಹಗ್ಗವನು ಬೋಟ್‌ನಲ್ಲಿರುವ ಆರಿಯ ಕೊಕ್ಕಗೆ ಸಿಕ್ಕಿಸಿ ತಲೆಕೆಳಗೆ ಮಾಡಿ ನೇತಾಡಿಸಿ ಕೈಗಳಿಂದ, ಕಬ್ಬಿಣದ ಸಪಳಿಯಿಂದ ಹಲ್ಲೆ ನಡೆಸಿರುವುದೂ ವೀಡಿಯೋದಲ್ಲಿ ದಾಖಲಾಗಿದೆ. ಆರೋಪಿಗಳನ್ನು ಬುಧವಾರ ಪೊಲೀಸರು ಬಂಧಿಸಿದ್ದು, ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ತನ್ನನ್ನು ಕೊಲೆ ಮಾಡಿ ಸಮುದ್ರಕ್ಕೆ ಎಸೆಯುವ ಪ್ರಯತ್ನವೂ ನಡೆದಿರುವ ಬಗ್ಗೆ ಸಂತ್ರಸ್ತ ದೂರಿದ್ದು, ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ ಎಂದು ಶಶಿಕುಮಾರ್ ತಿಳಿಸಿದರು.
ಅತ್ಯಂತ ಅಮಾನವೀಯವಾಗಿ ಹಲ್ಲೆ ನಡೆಸುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್ ಆಗಿತ್ತು. ಆರಂಭದಲ್ಲಿ ಪೊಲೀಸರು ಇದು ಆಂಧ್ರದಲ್ಲಿ ನಡೆದ ಘಟನೆ ನಡೆದಿರಬಹುದು ಎಂದು ಶಂಕಿಸಿದ್ದರು. ಬಳಿಕ ಮಂಗಳೂರಿನಲ್ಲಿ ನಡೆದಿರುವುದು ಎಂದು ಗೊತ್ತಾಗಿತ್ತು. ನಂತರ ವಿಡಿಯೋ ಜಾಡು ಹಿಡಿದು ವೈಲ ಶೀನುವನ್ನು ಪತ್ತೆ ಮಾಡಿ ಆತನಿಂದ ದೂರು ದಾಖಲಿಸಿದ್ದರು. ಬಳಿಕ ಆರೋಪಿಗಳನ್ನು ಬಂಧಿಸಲಾಯಿತು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದರು.
ತಾನು ಮೊಬೈಲ್ ಕದ್ದಿಲ್ಲವೆಂದು ಹೇಳಿಕೊಂಡರೂ ಮಾತು ಕೇಳದೆ ಆರು ಮಂದಿ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ಆ ಸಂದರ್ಭ ಇನ್ನೊಂದು ಬೋಟ್‌ನ ಕೆಲವರು ಕಂಡು ನನ್ನನ್ನು ರಕ್ಷಿಸಿದ್ದಾರೆ. ನಾನು ಅಲ್ಲಿಂದ ಪ್ರಾಣಭಯದಿಂದ ಇನ್ನೊಂದು ಬೋಟ್‌ನಲ್ಲಿ ಕಾರವಾರಕ್ಕೆ ತೆರಳಿದ್ದೆ ಎಂದು ವೈಲ ಶೀನು ಹೇಳಿಕೊಂಡಿದ್ದಾನೆ.
ಘಟನೆ ಕುರಿತು ಮಂಗಳೂರು ದಕ್ಷಿಣ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಪೊಲೀಸ್ ಕಾಯ್ದೆಯ ಕಲಂ 143, 147, 148, 323, 324, 307, 364, 342, 506 ಹಾಗೂ 149 ಸೆಕ್ಷನ್‌ಗಳಡಿ ಅಪಹರಣ, ಕೊಲೆ ಯತ್ನ, ದೌರ್ಜನ್ಯ ದೂರು ದಾಖಲಿಸಲಾಗಿದೆ.
Click this button or press Ctrl+G to toggle between Kannada and English