600ಕ್ಕೂ ಹೆಚ್ಚು ಕುಟುಂಬಗಳಿಗೆ 1.5 ಕೋಟಿ ರೂ. ನೆರವು ವಿತರಿಸಿದ ಕೆ. ಪ್ರಕಾಶ್ ಶೆಟ್ಟಿ

3:11 PM, Saturday, January 1st, 2022
Share
1 Star2 Stars3 Stars4 Stars5 Stars
(No Ratings Yet)
Loading...

Prakash Shetty ಮಂಗಳೂರು  : “ನಿಮ್ಮೊಂದಿಗೆ ಎಂ.ಆರ್. ಜಿ. ಗ್ರೂಪ್” ಕಾರ್ಯಕ್ರಮದ ಅಂಗವಾಗಿ ಕೆ.ಪ್ರಕಾಶ್ ಶೆಟ್ಟಿ ಅವರು ಒಂದೂವರೆ ಕೋಟಿ ರೂ. ಮೊತ್ತದ ಆರ್ಥಿಕ ನೆರವು ವಿತರಿಸುವ ಕಾರ್ಯಕ್ರಮ ಗುರುವಾರ ನಗರದ ಹೊರವಲಯದ ಕೂಳೂರು ಗೋಲ್ಡ್ ಫಿಂಚ್ ಸಿಟಿಯಲ್ಲಿ ಜರುಗಿತು. ಅರೋಗ್ಯ ಸಮಸ್ಯೆ ಇರುವವರು ಮತ್ತು ಆರ್ಥಿಕವಾಗಿ ಹಿಂದುಳಿದವರು ಸೇರಿದಂತೆ ಒಟ್ಟು 635ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವು ವಿತರಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಬಳಿಕ ಮಾತಾಡಿದ ಕೆ. ಪ್ರಕಾಶ್ ಶೆಟ್ಟಿ ಅವರು, “ನನಗೆ ಪ್ರಕಾಶಾಭಿನಂದನ ಹೆಸರಿನ ಕಾರ್ಯಕ್ರಮ ಮಾಡಿ ನನ್ನ ಗೆಳೆಯರು ಹಿತೈಷಿಗಳು ಹರಸಿದ್ರು. ಅದರ ನೆನಪಿಗಾಗಿ ನನ್ನ ಸಮಾಜಕ್ಕೆ ನನ್ನಿಂದಾದ ಸಹಾಯ ಸಲ್ಲಿಸಲು ನಿರ್ಧರಿಸಿದೆ. ಕಳೆದ ಬಾರಿ ಕೊರೋನಾ ಹಿನ್ನೆಲೆಯಲ್ಲಿ 2 ಕೋಟಿ ರೂ. ಗೂ ಅಧಿಕ ಮೊತ್ತದ ಕಿಟ್ ಗಳನ್ನು ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಬಡಜನರಿಗೆ ವಿತರಿಸಲಾಗಿದೆ. ಈ ಬಾರಿ 1.5 ಕೋಟಿ ರೂ. ಗೂ ಅಧಿಕ ಮೊತ್ತದ ಆರ್ಥಿಕ ಸಹಾಯ ಸಲ್ಲಿಸಲು ನಿರ್ಧರಿಸಿ ಅದರಂತೆ ಸಮಾಜದ ನೊಂದವರ ಕಣ್ಣೀರು ಒರೆಸಲು ಮುಂದಾಗಿದ್ದೇವೆ. ಇದು ಪ್ರಚಾರಕ್ಕಾಗಿ ಮಾಡುತ್ತಿರುವ ಕಾರ್ಯವಲ್ಲ, ಆತ್ಮತೃಪ್ತಿಗಾಗಿ ಮಾಡುತ್ತಿರುವ ಅಳಿಲು ಸೇವೆ. ಇದರಿಂದ ನಿಮಗೆ ಎಷ್ಟು ಸಹಾಯ ಆಗುತ್ತದೆಯೋ ತಿಳಿದಿಲ್ಲ, ಆದರೆ ನನಗೆ ನಿಮ್ಮ ನೋವಿನಲ್ಲಿ ಭಾಗಿಯಾದ ನೆಮ್ಮದಿ ಇದೆ. ಈ ವರ್ಷ 635 ಕುಟುಂಬಗಳಿಗೆ 10000, 25000, 50000, 1 ಲಕ್ಷ ಮೊತ್ತದ ಸಹಾಯ ಸಲ್ಲಿಸಲಾಗಿದೆ” ಎಂದರು.
Prakash Shetty
ಕಾರ್ಯಕ್ರಮದಲ್ಲಿ ಮಾತಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು, “ವಿವೇಕಾನಂದರು ಹೇಳಿದಂತೆ ಜನರ ಕಣ್ಣೀರು ಒರೆಸುವುದೇ ಭಗವಂತನ ಸೇವೆಯಾಗಿದೆ. ಅದನ್ನು ಪ್ರಕಾಶ್ ಶೆಟ್ಟಿ ಮಾಡುತ್ತಿದ್ದಾರೆ. ಕಷ್ಟದಲ್ಲಿ ಬೆಳೆದು ಮೇಲೆ ಬಂದವರಿಗೆ ಮಾತ್ರ ಜನರ ಕಷ್ಟದ ಅರಿವಿರುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾನಶೂರ ಕರ್ಣನನ್ನು ಹೋಲುವ ಪ್ರಕಾಶ್ ಶೆಟ್ಟಿಯವರು ಜನರ ಕಷ್ಟಕ್ಕೆ ನೆರವಾಗುವ ಮೂಲಕ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದ್ದಾರೆ. ಅವರ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ” ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಂ.ಆರ್.ಜಿ. ಗ್ರೂಪ್ ನ ಕೆ. ಪ್ರಕಾಶ್ ಶೆಟ್ಟಿ, ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಗುರ್ಮೆ ಸುರೇಶ್ ಶೆಟ್ಟಿ, ಆಳ್ವಾಸ್ ಪ್ರತಿಷ್ಠಾನದ ಮೋಹನ್ ಆಳ್ವ, ಎಜೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎಜೆ ಶೆಟ್ಟಿ, ಮಾಜಿ ಶಾಸಕ ಅಭಯಚಂದ್ರ ಜೈನ್, ಪುರುಷೋತ್ತಮ್ ಶೆಟ್ಟಿ, ಸುರೇಶ್ ಶೆಟ್ಟಿ, ಚಿತ್ರನಟ ಅರುಣ್ ಸಾಗರ್, ಎ. ಸದಾನಂದ ಶೆಟ್ಟಿ, ಜಯರಾಜ್ ಶೆಟ್ಟಿ, ಜಯಕರ್ ಶೆಟ್ಟಿ ಇಂದ್ರಾಳಿ, ಐವನ್ ಡಿಸೋಜ, ಉಪಮೇಯರ್ ಸುಮಂಗಲ ರಾವ್, ಕಮಿಷನರ್ ಎನ್. ಶಶಿಕುಮಾರ್, ಎಸಿಪಿ ಮಹೇಶ್ ಕುಮಾರ್, ಮತ್ತಿತರರು ಉಪಸ್ಥಿತರಿದ್ದರು.ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.

Prakash Shetty

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English