ರಾಮನಗರ: ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ ಡಿ.ಕೆ. ಸುರೇಶ್ ಹೊಡೆದಾಟಕ್ಕೆ ಮುಂದಾದ ಘಟನೆ ರಾಮನಗರದಲ್ಲಿ ನಡೆಯಿತು.
ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ವೇಳೆ ವೇದಿಕೆಯಲ್ಲಿ ಅಶ್ವತ್ಥನಾರಾಯಣರ ಮಾತಿನಿಂದ ಕೆರಳಿದ ಸುರೇಶ್ ಅವರತ್ತ ನುಗ್ಗಿದರು. ಅತ್ತ ಅಶ್ವತ್ಥನಾರಾಯಣ ಸಹ ಕೆರಳಿದರು. ನಂತರ ಇಬ್ಬರು ಕೈ ಕೈ ಮಿಲಾಯಿಸಲು ಮುಂದಾದರು. ವಿಧಾನ ಪರಿಷತ್ ಸದಸ್ಯ ಎಸ್. ರವಿ ಮೈಕ್ ನಲ್ಲಿ ಮಾತನಾಡಲು ಮುಂದಾದರು. ಇದಕ್ಕೆ ಸಚಿವ ಅಶ್ವತ್ಥನಾರಾಯಣ ಅವಕಾಶ ನೀಡದಿದ್ದಾಗ ರವಿ ಕೋಪದಿಂದ ಮೈಕ್ ಕಿತ್ತೆಸೆದರು. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಕೋಪಕ್ಕೆ ಹೋಯಿತು.
ಸಂಸದ ಡಿ.ಕೆ. ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು. ವೇದಿಕೆಯ ಕೆಳಗೂ ಗದ್ದಲ ಏರ್ಪಟ್ಟಿತು. ಮುಖ್ಯಮಂತ್ರಿ ಬೊಮ್ಮಾಯಿ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು. ‘ರಾಜಕೀಯ ಇದ್ದದ್ದೇ. ಆದರೆ ನಾವು ಜನಪರವಾಗಿ ಕೆಲಸ ಮಾಡಬೇಕೇ ಹೊರತು ಭಿನ್ನಾಭಿಪ್ರಾಯವನ್ನೇ ದೊಡ್ಡದು ಮಾಡಬಾರದು’ ಎಂದು ಇಬ್ಬರಿಗೂ ಕಿವಿಮಾತು ಹೇಳಿದರು. ಆಗಿದ್ದನ್ನು ಮರೆತು ಎಲ್ಲರೂ ಒಂದೇ ಮನಸ್ಸಿನಿಂದ ಮುಂದೆ ಹೋಗೋಣ ಎಂದರು.
ಯಾರು ಏನು ಹೇಳಿದರು?: ಕಾರ್ಯಕ್ರಮಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಅಡ್ಡಿಪಡಿಸಿದ್ದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಸಚಿವ ಅಶ್ವತ್ಥನಾರಾಯಣ ‘ಇವತ್ತು ಏನು ತಪ್ಪಾಗಿದೆ ಎಂದು ನಾಲ್ಕು ಜನರನ್ನು ಸೇರಿಸಿ ಘೋಷಣೆ ಕೂಗುತ್ತೀರಿ. ನಾನೇನು ಯಾರ ಜಮೀನಿಗೂ ಕೈ ಹಾಕಿಲ್ಲ. ಯಾವನೋ ಅವನು ಗಂಡಸು ಅನ್ನೋನು’ ಎಂದು ಪ್ರಚೋದಿಸಿದರು.
ಇದರಿಂದ ಕುಪಿತಗೊಂಡ ಸುರೇಶ್ ‘ನನ್ನ ಗಂಡಸುತನ ತೋರಿಸಲಾ’ ಎಂದು ಅಶ್ವತ್ಥನಾರಾಯಣರತ್ತ ನುಗ್ಗಿದರು. ಇದರಿಂದ ಗಲಾಟೆ ಜೋರಾಯಿತು. ಬಳಿಕ ಸುರೇಶ್ ವೇದಿಕೆಯಲ್ಲೇ ಧರಣಿ ಕುಳಿತರು.
Click this button or press Ctrl+G to toggle between Kannada and English