ವಿವೇಕಾನಂದರು ಯುವಜನತೆಗೆ ನಂದಾದೀಪವಿದ್ದಂತೆ: ಎಸ್. ಮಹೇಶ್ ಕುಮಾರ್

10:34 AM, Thursday, January 13th, 2022
Share
1 Star2 Stars3 Stars4 Stars5 Stars
(No Ratings Yet)
Loading...

Vivekananda-Jayanthiಮಂಗಳೂರು: ಸ್ವಾಮಿ ವಿವೇಕಾನಂದರು ಭಾರತೀಯರ ಆತ್ಮಾಭಿಮಾನವನ್ನು ಬಡಿದೆಬ್ಬಿಸದ ಸಂತ. ಅವರ ಜೀವನ, ತತ್ವಗಳು ಯುವಜನತೆಗೆ ನಂದಾದೀಪದಂತೆ, ಎಂದು ಮಂಗಳೂರು ನಗರ ಉತ್ತರ ಸಹಾಯಕ ಪೊಲೀಸ್ ಆಯುಕ್ತ ಎಸ್. ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು.

ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ಯುವ ರೆಡ್ ಕ್ರಾಸ್, ಮಂಗಳೂರು ವಿಶ್ವವಿದ್ಯಾನಿಲಯ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಬುಧವಾರ ತಣ್ಣೀರುಬಾವಿಯ ವೃಕ್ಷ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನಾಚರಣೆ- ʼರಾಷ್ಟ್ರೀಯ ಯುವ ದಿನಾಚರಣೆʼ ಹಾಗೂ ಯುವ ಜಾಗೃತಿ ಚೇತನ- ವ್ಯಕ್ತಿತ್ವ ವಿಕಸನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಯುವಜನತೆ ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಆಯ್ಕೆಯಲ್ಲಿ ಸೋತು ತಪ್ಪು ಹಾದಿ ಹಿಡಿಯುತ್ತಿದ್ದಾರೆ. “ಭಾರತ ವಿಶ್ವಗುರುವಾಗಲು ಸಾತ್ವಿಕ ಶಿಕ್ಷಣದ ಅಗತ್ಯವಿದೆ. ಯುವಜನರು ತಮ್ಮೊಳಗಿನ ಸಾಮರ್ಥ್ಯವನ್ನು ಅರಿಯುವ ಜೊತೆಗೆ ಹಿರಿಯರು, ಸಮಾಜಕ್ಕೆ ಪ್ರಾಮುಖ್ಯತೆ ನೀಡಬೇಕಿದೆ,” ಎಂದರು.

ಮುಖ್ಯ ಅತಿಥಿ, ಉಪ ವಲಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ ಮಾತನಾಡಿ, ವಿದ್ಯಾರ್ಥಿಗಳು ಕೊಬ್ಬಿ ಬೆಳೆದು ಬೇಗ ಬೀಳುವ ಬಾದಾಮಿ ಮರದಂತಾಗದೆ, ಬಾಗಿ ನಿಧಾನವಾಗಿ ಬೆಳೆದರೂ ಬಲಿಷ್ಠವಾಗಿರುವ ಹೊಂಗೆ ಮರದಂತಾಗಬೇಕು, ಎಂದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ರಾಜ್ಯ ಪ್ರತಿನಿಧಿ ಯತೀಶ್ ಬೈಕಂಪಾಡಿ ವಿದ್ಯಾರ್ಥಿಗಳು ಯಾರನ್ನೂ ಕುರುಡಾಗಿ ನಂಬದೆ ಸ್ವಂತಿಕೆ ಉಳಿಸಿಕೊಳ್ಳಬೇಕು, ಎಂದು ಕರೆ ನೀಡಿದರು. ʼವಿಜಯ ಕರ್ನಾಟಕʼ ದಿನ ಪತ್ರಿಕೆಯ ಸಹಾಯಕ ಸಂಪಾದಕ ರವೀಂದ್ರ ಶೆಟ್ಟಿ, ಭಾರತ ದೇಶ, ಸಂಸ್ಕೃತಿಯ ಬಗ್ಗೆ ನಮಗೆ ಹೆಮ್ಮೆಯಿರಬೇಕು, ಎಂದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಸಭಾಪತಿ ಸಿ ಎ ಶಾಂತಾರಾಮ ಶೆಟ್ಟಿ, ಕೇವಲ 39 ವರ್ಷ ಬದುಕಿದ್ದ ವಿವೇಕಾನಂದರು ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೇ ಪರಿಚಯಿಸಿದರು. ಹಣವಿಲ್ಲದವನು ಬಡವನಲ್ಲ, ಗುರಿ, ಕನಸಿಲ್ಲದವನು ನಿಜವಾದ ಬಡವ ಎಂದರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆಯ ಉಪಸಭಾಪತಿ ನಿತ್ಯಾನಂದ ಶೆಟ್ಟಿ, ಕಾರ್ಯದರ್ಶಿ ಬಿ ಕೆ ಕುಸುಮಾಧರ್, ಜಿಲ್ಲಾ ರೆಡ್ ಕ್ರಾಸ್ ಉಪ ಸಮಿತಿಯ ನಿರ್ದೇಶಕ ಸಚೇತ್ ಸುವರ್ಣ, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಣಪತಿ ಗೌಡ, ಮೊದಲಾದವರು ಉಪಸ್ಥಿತರಿದ್ದರು.

ಶ್ರೀ ಧವಳಾ ಕಾಲೇಜಿನ ನಿವೃತ್ತ ಉಪ ಪ್ರಾಂಶುಪಾಲ ಪ್ರೊ. ಅಜಿತ್ ಪ್ರಸಾದ್, ಗುರುವಾಯನಕೆರೆ ಸರ್ಕಾರಿ ಹಿರಿಯ ಪ್ರೌಢ ಶಾಲೆಯ ಕಲಾ ಶಿಕ್ಷಕ ವಿ ಕೆ ವಿಟ್ಲ ಹಾಗೂ ಖ್ಯಾತ ಮರಳು ಶಿಲ್ಪಿ ಹರೀಶ್ ಆಚಾರ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರ ನಡೆಸಿಕೊಟ್ಟರು. ವಿವಿಧ ಕಾಲೇಜಿನ ರೆಡ್ ಕ್ರಾಸ್ ವಿದ್ಯಾರ್ಥಿಗಳು ಮತ್ತು ಕಾರ್ಯಕ್ರಮ ಅಧಿಕಾರಿಗಳು ಸಕ್ರಿಯವಾಗಿ ಭಾಗವಹಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English