ವಿಟ್ಲ : ಚನ್ನರಾಯಪಟ್ಟಣ ಬೈಪಾಸ್ ರಸ್ತೆಯಲ್ಲಿ ಲಾರಿ ಕಾರಿಗೆ ಡಿಕ್ಕಿಯಾಗಿ ವಿಟ್ಲದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಓರ್ವ ಗಾಯಗೊಂಡಿದ್ದಾರೆ.
ಕಾರು ಚಲಾಯಿಸುತ್ತಿದ್ದ ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೆಳಗಿನ ಬಾರೆಬೆಟ್ಟು ನಿವಾಸಿ ಸುದರ್ಶನ್(32), ಪುತ್ತೂರು ತಾಲೂಕು ಈಶ್ವರಮಂಗಲ ಸಮೀಪದ ಬಂಟಕಲ್ಲು ನಿವಾಸಿ ದೇವಿಪ್ರಸಾದ್(30) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪುತ್ತೂರು ನಿವಾಸಿ ಪ್ರಮೋದ್ ಕುಮಾರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂರು ಮಂದಿ ಬೆಂಗಳೂರಿನಿಂದ ಬೆಳಗ್ಗೆ 6.30ಕ್ಕೆ ಊರಿಗೆ ಬರುವ ನಿಟ್ಟಿನಲ್ಲಿ ಕಾರ್ನಲ್ಲಿ ಹೊರಟಿದ್ದು, 10 ಗಂಟೆ ಸುಮಾರಿಗೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬೈಪಾಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ಹಾಸನ ಪೇಟೆಯ ಕಡೆಯಿಂದ ಬಂದ ಟಿಪ್ಪರ್ ಲಾರಿ ಕಾರಿಗೆ ಡಿಕ್ಕಿಯಾಗಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದೆ.
ಕಾರನ್ನು ಸುದರ್ಶನ್ ಚಲಾಯಿಸುತ್ತಿದ್ದು, ಪಕ್ಕದಲ್ಲಿ ದೇವಿಪ್ರಸಾದ್ ಶೆಟ್ಟಿ ಕುಳಿತಿದ್ದರೆನ್ನಲಾಗಿದೆ. ಹಿಂಬದಿಯಲ್ಲಿ ಕುಳಿತ ಪ್ರಮೋದ್ ಕುಮಾರ್ ತಲೆ ಹಾಗೂ ಕಾಲಿಗೆ ಗಂಭೀರ ಗಾಯವಾಗಿದೆ. ಇವರನ್ನು ಚನ್ನರಾಯಪಟ್ಟಣ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಿದ್ದು, ಮನೆಯವರು ಸ್ಥಳಕ್ಕಾಗಮಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ವರ್ಗಾಯಿಸುತ್ತಿದ್ದಾರೆ. ಇನ್ಫೋಸಿಸ್ ಸಂಸ್ಥೆಯಲ್ಲಿ ಉದ್ಯೋಗಿಗಳಾಗಿದ್ದರೆಂದು ತಿಳಿದು ಬಂದಿದೆ. ಚನ್ನರಾಯಪಟ್ಟಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
Click this button or press Ctrl+G to toggle between Kannada and English