ಮಂಗಳೂರು: ಅವಿಭಜಿತ ದ.ಕ. ಜಿಲ್ಲೆಯ ಬಿಲ್ಲವ ಸಂಘಗಳು, ಸಂಘಟನೆಗಳು ಹಾಗೂ ಬಿಲ್ಲವ ಸಮಾಜದ ವತಿಯಿಂದ ‘ಗುರಿ ತೋರಿದ ಗುರುವಿನ ಕಡೆಗೆ ಸ್ವಾಭಿಮಾನದ ಜಾಥಾ’ ಬುಧವಾರ ಬೆಳಗ್ಗೆ ಪ್ರಾರಂಭವಾಗಿದೆ.
ಕಂಕನಾಡಿ ಗರೋಡಿ ಕ್ಷೇತ್ರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಗೆ ಕ್ಷೇತ್ರದ ಅರ್ಚಕರು ಪೂಜೆ ಸಲ್ಲಿಸುವ ಮೂಲಕ ಸ್ವಾಭಿಮಾನ ನಡಿಗೆಗೆ ಚಾಲನೆ ನೀಡಲಾಯಿತು. ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಉಪಸ್ಥಿತಿಯಲ್ಲಿ ವಾಹನ ಜಾಥಾಕ್ಕೆ ಚಾಲನೆ ನೀಡಲಾಯಿತು.
‘ಇದು ರಾಜಕೀಯ ಪ್ರೇರಿತ ನಡಿಗೆ ಅಲ್ಲ, ಇದು ಸ್ವಾಭಿಮಾನದ ನಡಿಗೆ’ ಗಣರಾಜ್ಯೋತ್ಸವ ಪರೇಡ್‌ಗೆ ಕೇರಳ ಸರಕಾರ ಕಳುಹಿಸಿದ್ದ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರ ನಿರಾಕರಣೆ ಖಂಡಿಸಿ ಈ ಜಾಥಾ ಮಾಡಲಾಗಿದೆ. ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ನಡೆಯುವ ಈ ನಡಿಗೆ ಇದು ರಾಜಕೀಯ ಪ್ರೇರಿತವಾದ ಹೋರಾಟ ಅಲ್ಲ ಸ್ವಾಭಿಮಾನದ ನಡಿಗೆ. ಇಲ್ಲಿ ಪಕ್ಷ, ಧರ್ಮ ಜಾತಿ ಬೇಧ ಮರೆತು ಹಳದಿ ಶಾಲಿನ ಗೌರವದೊಂದಿಗೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಹೇಳಿದರು.
ಕೇಂದ್ರ ಸರಕಾರದ ಸುತ್ತೋಲೆ ಪ್ರಕಾರ ಕೇರಳ ರಾಜ್ಯ ಸರಕಾರ ಕಳುಹಿಸಿದ್ದ ಸ್ತಬ್ಧಚಿತ್ರಗಳಲ್ಲಿ ಆಯ್ಕೆ ಸಮಿತಿಯು ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಿ ನಾರಾಯಣಗುರುಗಳ ಪ್ರತಿಮೆಯಿದ್ದ ಸ್ತಬ್ಧಚಿತ್ರಕ್ಕೆ ಮೆಚ್ಚುಗೆ ಸೂಚಿಸಿತ್ತು. ಆದರೆ, ನಾರಾಯಣಗುರುಗಳ ಪ್ರತಿಮೆ ತೆಗೆದು, ಶಂಕರಾಚಾರ್ಯರ ಪ್ರತಿಮೆ ಹಾಕುವಂತೆ ಸೂಚನೆ ನೀಡಿತ್ತು. ಇದು ನಾರಾಯಣಗುರುಗಳ ಅನುಯಾಯಿಗಳಿಗೆ ನೋವು ತಂದಿದೆ ಎಂದು ಸಂಘಟಕರು ವಿವರಿಸಿದ್ದಾರೆ.
ಬ್ರಹ್ಮಶ್ರೀ ನಾರಾಯಣ ಗುರುಗಳು ಮಾಡಿರುವ ಕ್ರಾಂತಿ, ಶಾಂತಿಯುತ ಸಂಘರ್ಷ ರಹಿತ ಕ್ರಾಂತಿಗಳು. ಆ ಪ್ರಕಾರ ಗಣರಾಜ್ಯೋತ್ಸವದಂದು ಕರಾವಳಿ ಜಿಲ್ಲೆಗಳಲ್ಲಿ ನಾರಾಯಣಗುರು ಸ್ವಾಭಿಮಾನ ಜಾಥಾ ನಡಿಗೆ ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ನಾರಾಯಣಗುರುಗಳ ಟ್ಯಾಬ್ಲೋ ಹಾಗೂ ಭಜನಾ ತಂಡಗಳು ಆಯ್ದ ಸ್ಥಳಗಳಲ್ಲಿ ಸಂಚರಿಸಿ ಸಂಜೆ 6ಕ್ಕೆ ಗೋಕರ್ಣನಾಥ ಕ್ಷೇತ್ರ ತಲುಪಲಿವೆ.
ಮಂಗಳೂರಿನಿಂದ ಬಿಲ್ಲವ ಸಮುದಾಯದ ವತಿಯಿಂದ ಹೊರಡುವ ಸ್ತಬ್ಧಚಿತ್ರ ಗರೋಡಿ ಕ್ಷೇತ್ರದಿಂದ ಹೊರತಿದ್ದು ಪಂಪ್‌ವೆಲ್ ಸರ್ಕಲ್, ಕರಾವಳಿ ಜಂಕ್ಷನ್, ಅಂಬೇಡ್ಕರ್ ವೃತ್ತ ಹಾಗೂ ಹಂಪನ ಕಟ್ಟ ಸಿಗ್ನಲ್‌ನಿಂದ ಕೆ.ಎಸ್.ರಾವ್ ರೋಡ್, ನವಭಾರತ್ ಸರ್ಕಲ್, ಪಿವಿಎಸ್‌ಜಂಕ್ಷನ್, ಎಂಜಿ.ರಸ್ತೆ, ಲಾಲ್‌ಬಾಗ್, ಲೇಡಿಹಿಲ್ ಸರ್ಕಲ್ ಆಗಿ ಕ್ಷೇತ್ರಕ್ಕೆ ತಲುಪಲಿದೆ. ಬೈಂದೂರು, ಕಾರ್ಕಳ, ಉಡುಪಿ, ಮುಲ್ಕಿ, ಪುತ್ತೂರು, ಬಂಟ್ವಾಳದಿಂದ ಸಮಯ ಹೊಂದಾಣಿಕೆ ಮಾಡಿಕೊಂಡು ಒಟ್ಟು ಸೇರಿಕೊಂಡು ಕ್ಷೇತ್ರಕ್ಕೆ ತಲುಪಲಿದೆ.
ಐವನ್ ಡಿಸೋಜಾ, ಜೆ. ಆರ್. ಲೋಬೋ ಮೊದಲಾದವರು ಉಪಸ್ಥಿತರಿದ್ದಾರೆ.
Click this button or press Ctrl+G to toggle between Kannada and English