ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ ನಿಧನ

6:09 PM, Thursday, January 27th, 2022
Share
1 Star2 Stars3 Stars4 Stars5 Stars
(No Ratings Yet)
Loading...

Narendranatha-Swamijiಮಂಗಳೂರು : ಮರಕಡ ಶ್ರೀ ಗುರು ಪರಾಶಕ್ತಿ ಕ್ಷೇತ್ರದ ಸ್ಥಾಪಕ ಶ್ರೀ ನರೇಂದ್ರನಾಥ ಯೋಗೇಶ್ವರೇಶ್ವರ ಸ್ವಾಮೀಜಿ(76) ಬುಧವಾರ ರಾತ್ರಿ 10:40ಕ್ಕೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ನರೇಂದ್ರ ನಾಥ ಸ್ವಾಮೀಜಿ ಅವರು ಮರಕಡದಲ್ಲಿ ಪರಾಶಕ್ತಿ ಕ್ಷೇತ್ರದ ಸ್ಥಾಪಕರು ಆಗಿದ್ದಾರೆ. ಮರಕಡ ಮಠ ಸ್ಥಾಪಿಸಿ ಅದರ ಅಭಿವೃದ್ಧಿ ಮಾಡಿದ ನರೇಂದ್ರನಾಥ ಸ್ವಾಮೀಜಿ ಅವರಿಗೆ ಅಪಾರ ಸಂಖ್ಯೆಯ ಭಕ್ತರಿದ್ದಾರೆ.

ಇವರು ಮೂಲತಃ ಕೋಟೆಕಾರ್ ಸಮೀಪದ ಮಡ್ಯಾರ್ ನಿವಾಸಿಯಾಗಿದ್ದರು. ಅವರು ಮಡ್ಯಾರ್ ನಲ್ಲಿ ಪರಾಶಕ್ತಿ ಕ್ಷೇತ್ರವನ್ನೂ ಸ್ಥಾಪಿಸಿದ್ದರು.

ಕಳೆದ 28 ವರ್ಷಗಳಿಂದ ಮರಕಡದಲ್ಲಿ ತನ್ನ ಕುಟುಂಬಿಕರಾದ ಶ್ರೀ ರವೀಂದ್ರ ಕೋಟೆಕಾರ್ ಇವರ ಮನೆಯನ್ನೇ ಶ್ರೀ ಗುರು ಪರಾಶಕ್ತಿ ಮಠವನ್ನಾಗಿಸಿಕೊಂಡು ನೋವಿನ ನೋವನ್ನೇ ಉಣ್ಣುತ್ತಿರುವ ಜನಮಾನಸಕ್ಕೆ ಸಾಂತ್ವನವನ್ನು ಕೊಡುತ್ತಾ ಬಂದವರು ಪೂಜ್ಯ ಸ್ವಾಮಿಯವರು. ಜೀವಿತದಲ್ಲಿ ನೊಂದು ಬೆಂದವರಿಗೆ ಪ್ರಾಯಶ್ಚಿತ್ತಪೂರ್ವಕವಾದ ‘ಕಣ್ಣೀರ ತರ್ಪಣ’ದೊಂದಿಗೆ ಕ್ಷಮಾಯಾಚನೆಯ ಪ್ರಾರ್ಥನೆಯ ಮೂಲಕ ಸರಳವೂ ಸುಲಭವೂ ಆದ ಪರಿಹಾರದ ಮಾರ್ಗವನ್ನು ತೋರಿಸಿ ಕೊಟ್ಟವರು ಪೂಜ್ಯರು.

ರಾಮಕ್ಷತ್ರಿಯ ಮನೆತನದ ಶ್ರೀ ಗಣಪತಿ ಮತ್ತು ಶ್ರೀಮತಿ ಸಾವಿತ್ರಿ ದಂಪತಿಗಳ ಕಿರಿಯ ಪುತ್ರನಾಗಿ ಜನಿಸಿದ ಇವರು, ಪೂರ್ವಾಶ್ರಮದಲ್ಲಿ ಇಂಜಿನಿಯರಿಂಗ್ ವೃತ್ತಿಯನ್ನು ಕೈಗೊಂಡು ನಂತರ ಸಾಂಸಾರಿಕ ಜೀವಿತದಲ್ಲಿದ್ದವರು ದೈವಿಕತೆಯತ್ತ ಪರಿವರ್ತನಗೊಂಡರು. ಶ್ರೀ ಕ್ಷೇತ್ರ ಮರಕಡದಲ್ಲಿ ದೈವಿಕ, ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದರು.
ಕಾಲಗರ್ಭದಲ್ಲಿ ಸಿಲುಕಿ ನಾಶವೇ ಆಗಿದ್ದ ಅದೆಷ್ಟೋ ದೇಗುಲಗಳು, ಆರಾಧನಾಲಯಗಳು, ನಾಗಾಲಯಗಳು, ಪುಣ್ಯತೀರ್ಥಗಳು ಪೂಜ್ಯ ಸ್ವಾಮಿಯವರಿಂದ ನಾಡಿನಾದ್ಯಂತ ಪುನರುಜ್ಜೀವನಗೊಂಡಿವೆ. ಆಯಾ ಪರಿಸರದ ಜನರನ್ನೇ ಒಟ್ಟು ಸೇರಿಸಿ ಈ ಕಾರ್ಯವನ್ನು ಆಗಿಸಿದ್ದಾರೆ. ‘ಕರಸೇವೆ’ಯಲ್ಲಿ ಸಾಮೂಹಿಕವಾಗಿ ತೊಡಗಿಸಿಕೊಂಡ ಅಪಾರ ಭಕ್ತ ಸಂದೋಹದ ‘ಬೆವರ ತರ್ಪಣ’ವೇ ಇಲ್ಲಿ ಕಾರ್ಯಪ್ರವೃತ್ತವಾಗಿರುವುದು.

ಮಡ್ಯಾರಿನಲ್ಲಿ ನಿರ್ಮಾಣವಾಗಿರುವ ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯ, ಕೋಟೆಕಾರಿನಲ್ಲಿ ದೇವರ ಅರಮನೆ, ಕಡೆಕಾರಿನಲ್ಲಿ ಗುರುವನ ಶ್ರೀ ದುರ್ಗಾ ಕ್ಷೇತ್ರ, ಮರಕಡದಲ್ಲಿ ನಿರ್ಮಾಣವಾಗಿರುವ ಶ್ರೀ ಗುರು ಪರಾಶಕ್ತಿ ಮಠ ಮತ್ತು ದೇಗುಲ ಸಮುಚ್ಚಯ ಅವರ ಕಾಯಕ ಯೋಗದ ಮಹತ್ವವನ್ನು ಸಾರುತ್ತಿವೆ. ನಿರಂತರ ಅನ್ನದಾನವೂ ಶ್ರೀ ಕ್ಷೇತ್ರಗಳಲ್ಲಿ ನಡೆದುಕೊಂಡು ಬಂದಿದೆ. ನಾಡಿನಾದ್ಯಂತ ಅಪಾರ ಭಕ್ತ ಸಮೂಹವನ್ನು ಹೊಂದಿರುತ್ತಾರೆ.

ಪೂಜ್ಯ ಸ್ವಾಮಿಯವರು ತಮ್ಮ ಸಹಧರ್ಮಿಣಿಯಾದ ಮಾತೆ ಶ್ರೀಮತಿ ಶಕುಂತಲಾ ಅಮ್ಮನವರು, ಪುತ್ರ ನಿತಿನ್ ಕೋಟೆಕಾರ್, ಪುತ್ರಿಯರಾದ ಶೀತಲ್ ಕೋಟೆಕಾರ್, ಕಾವ್ಯಶ್ರೀ ಕೋಟೆಕಾರ್, ಸೊಸೆ, ಅಳಿಯಂದಿರು, ಮೊಮ್ಮಕ್ಕಳು, ಅಪಾರ ಬಂಧುಗಳು ಹಾಗೂ ಅಸಂಖ್ಯ ಭಕ್ತಸಂದೋಹವನ್ನು ಅಗಲಿದ್ದಾರೆ.

ಇಂದು ಬೆಳಗ್ಗಿನಿಂದಲೂ ನಾಡಿನ ಗಣ್ಯರು ಹಾಗೂ ದುಃಖತಪ್ತ ಭಕ್ತಸಮೂಹ ಪೂಜ್ಯ ಗುರುಗಳ ದರ್ಶನವನ್ನು ಪಡೆಯುತ್ತಿದ್ದಾರೆ.

ಸ್ವಾಮೀಜಿಯ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಇಂದು ಅಪರಾಹ್ನ 2:30ರವರೆಗೆ ಮರಕಡದ ಅವರ ಸ್ವಗೃಹದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಳಿಕ 3 ಗಂಟೆಯಿಂದ ಸಂಜೆ 5ರ ತನಕ ಮಡ್ಯಾರ್ ನಲ್ಲಿ ಸಾರ್ವಜನಿಕ ದರ್ಶನಕ್ಕೆ ಅವಕಾಶವಿರುತ್ತದೆ. ಬಳಿಕ ಅಲ್ಲಿಯೇ ಸಂಜೆ 4 ಗಂಟೆಗೆ ಅಂತಿಮ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮರಕಡ ಗುರು ಪರಾಶಕ್ತಿ ಮಠ ಶ್ರೀ ಶ್ರೀ ನರೇಂದ್ರನಾಥ ಯೋಗೇಶ್ವರೇಶ ಸ್ವಾಮೀಜಿಯವರು ನಿಧನಕ್ಕೆ ಶಾಸಕ  ವಿಧಾನ ಪರಿಷತ್ ನ ಸದಸ್ಯರಾದ ಮಂಜುನಾಥ ಭಂಡಾರಿ ಅವರು ಸಂತಾಪ ಸೂಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English