ಸುಳ್ಯ: ಇಬ್ಬರು ಮಕ್ಕಳ ತಾಯಿ ಚೈನೀಸ್ ಕುಕ್ ಜೊತೆ ಪರಾರಿಯಾದ ಘಟನೆ ಇಲ್ಲಿನ ಸುಳ್ಯದ ಪೈಚಾರು ಎಂಬಲ್ಲಿ ನಡೆದಿದೆ.
ಅಸ್ಸಾಂ ಮೂಲದ ಕೋಗನ್ ತಾತಿ ಎಂಬಾತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಕಳೆದ ನಾಲ್ಕು ತಿಂಗಳಿಂದ ಸುಳ್ಯದ ಪೈಚಾರು ಸಂಸ್ಥೆಯೊಂದರಲ್ಲಿ ತೆಂಗಿನಕಾಯಿ ಸುಲಿಯುವ ಕೆಲಸವನ್ನು ಮಾಡುತ್ತಿದ್ದನು.
ಆದರೆ ಜ. 25 ರಂದು ಆತನ ಪತ್ನಿ ಮನೆಯಿಂದ ಏಕಾಏಕಿ ನಾಪತ್ತೆಯಾಗಿದ್ದಳು. ಈ ಬಗ್ಗೆ ಸುಳ್ಯ ಠಾಣೆಯಲ್ಲಿ ದೂರು ದಾಖಲಾಗಿತ್ತು.
ದೂರಿನನ್ವಯ ತನಿಖೆ ಆರಂಭಿಸಿದ ಸುಳ್ಯ ಪೊಲೀಸ್ ಠಾಣಾ ಉಪನಿರೀಕ್ಷಕ ದಿಲೀಪ್ ಮಹಿಳೆಯ ಬಳಿ ಇದ್ದ ಮೊಬೈಲ್ ಫೋನ್ ಲೊಕೇಶನ್ ಟ್ರೇಸ್ ಮಾಡಿದಾಗ ಆಕೆ ಕುಂದಾಪುರದಲ್ಲಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು.
ಈ ಬಗ್ಗೆ ಕುಂದಾಪುರ ಪೊಲೀಸರಿಗೆ ಮಾಹಿತಿ ರವಾನಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪೊಲೀಸರು ಮಹಿಳೆಯನ್ನು ಆಕೆಯ ಪ್ರಿಯಕರನ ಜೊತೆ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವೇಳೆ ಪತ್ನಿಯನ್ನು ತನ್ನ ಜೊತೆ ಕಳುಹಿಸಿ ಕೊಡುವಂತೆ ಪತಿ ಪೊಲೀಸರ ಬಳಿ ಹೇಳಿದಾಗ ಪತ್ನಿ ತಾನು ಪ್ರಿಯಕರನ ಜೊತೆ ಇರುವುದಾಗಿ ಹೇಳಿಕೊಂಡಿದ್ದಾಳೆ.
ಕೊನೆಗೂ ಬುದ್ಧಿವಾದ ಹೇಳಿದ ಕುಂದಾಪುರ ಪೊಲೀಸರು ಆಕೆಯ ಮನವೊಲಿಸಿ ಪತಿಯೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಗುರುವಾರ ಮತ್ತೆ ಸುಳ್ಯ ಪೊಲೀಸರು ಠಾಣೆಗೆ ಕರೆಸಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರಿಯಕರ ಚಂದನ್ ಸಹ ಅಸ್ಸಾಂ ಮೂಲದವನಾಗಿದ್ದು, ಮಂಗಳೂರು ಹೋಟೆಲ್ ಒಂದರಲ್ಲಿ ಚೈನೀಸ್ ಫುಡ್ ಮೇಕರ್ ಆಗಿ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
Click this button or press Ctrl+G to toggle between Kannada and English