ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಆಶ್ರಮಗಳ ಜಂಟಿ ಆಯೋಜನೆಯಲ್ಲಿ ಜನವರಿ 11 ಮತ್ತು 12 ರಂದು ಮಂಗಳೂರಿನ ಶ್ರೀರಾಮಕೃಷ್ಣ ಮಠದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ರಾಷ್ಟ್ರೀಯ ಯುವದಿನ ಮತ್ತು ಯುವಜನೋತ್ಸವ ಶಿಬಿರ ಆಯೋಜಿಸಲಾಗಿದೆ ಎಂದು ದ. ಕ. ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು. ಅವರು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವಾಗಿ ಮಾತನಾಡಿದರು.
ಜನವರಿ 11ರಂದು ಬೆಳಗ್ಗೆ 9ಗಂಟೆಗೆ ವಿವೇಕ ಚೇತನ ಮತ್ತು ವಿವೇಕ ಸಿಂಚನ ಕಾರ್ಯಕ್ರಮದ ಮೂಲಕ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಸಿ. ಟಿ. ರವಿ ಸೇರಿದಂತೆ ಜನಪ್ರತಿನಿಧಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ವಿವೇಕ ಸಂಚಲನ ಎಂಬ ಯುವ ಜಾಥಾ ಮತ್ತು ಸಮಾವೇಶವು ಜನವರಿ 12 ರಂದು ನಡೆಯಲಿದ್ದು ಸುಮಾರು ಐದು ಸಾವಿರ ಮಂದಿ ನಗರದ ನೆಹರೂ ಮೈದಾನದಿಂದ ಕಾರ್ಪೊರೇಶನ್ ಬ್ಯಾಂಕ್ ಪ್ರಧಾನ ಕಚೇರಿ ಮುಂಭಾಗದ ಮೂಲಕ ರಾಮಕೃಷ್ಣ ಮಠದವರೆಗೆ ಬೃಹತ್ ಜಾಥಾ ನಡೆಯಲಿದೆ. ಯುವ ಜಾಥವನ್ನು ಡಾ. ಎನ್. ವಿನಯ್ ಹೆಗ್ಡೆ ಉದ್ಘಾಟಿಸುವರು. ಅಂದು ಸಂಜೆ ಸನಾತನ ನಾಟ್ಯಾಲಯದ ರಾಷ್ಟ್ರ ದೇವೋಭವ ನೃತ್ಯ ಕಾರ್ಯಕ್ರಮ ಮತ್ತು ಸ್ವಾಮಿ ವಿವೇಕಾನಂದರ ಕುರಿತು ಚಿತ್ರಗಳ ಪ್ರದರ್ಶನ, ಪುಸ್ತಕ ಪ್ರದರ್ಶನ, ಸಿ.ಡಿ, ಭಾವಚಿತ್ರ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಮಕೃಷ್ಣ ಮಠದ ಆತ್ಮರೂಪಾನಂದ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಪ್ರಕಾಶ್, ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಕೆ. ಎ. ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English