ಕಾರ್ಕಳ: ಕಾರ್ಕಳದ ಕಾಲೇಜೊಂದರಲ್ಲಿ ನಡೆದ ಗಲಾಟೆಯ ವಿಡಿಯೋ ಇದೀಗ ವೈರಲ್ ಆಗಿದ್ದು ಹಿಜಾಬ್ ಹಾಕಿದ ವಿದ್ಯಾರ್ಥಿನಿಯೊಬ್ಬಳು ಶಿಕ್ಷಕಿಯನ್ನು ಅವಮಾನಿಸಿರುವುದು ಬಯಲಾಗಿದೆ.
ಮಂಗಳವಾರ (ಫೆ.8) ಎಂಜಿಎಂ ಕಾಲೇಜಿನಲ್ಲಿ ನಡೆದ ಘಟನೆಯ ವಿಡಿಯೋ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಈ ವಿಡಿಯೋದಲ್ಲಿ, ಹಿಜಾಬ್, ಬುರ್ಖಾ ಹಾಕಿಕೊಂಡು ಬಂದ ಕೆಲ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಗಲಾಟೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದ ನಯನಾ ಎಂಬ ಶಿಕ್ಷಕಿ ಮಕ್ಕಳನ್ನು ತಣ್ಣಗಾಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರೂ ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಅಲ್ಲಿಯೇ ಕೂಗಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಮುಟ್ಟಿ ಗಲಾಟೆ ಮಾಡಬೇಡಿ ಎಂದಿದ್ದಾರೆ. ಆಗ ಆ ವಿದ್ಯಾರ್ಥಿನಿ, ‘ಬುಲ್ ಶಿಟ್’ ಎಂದು ಶಬ್ದ ಪ್ರಯೋಗ ಮಾಡಿದ್ದೂ ಅಲ್ಲದೇ, ‘ಡೋಂಟ್ ಟಚ್’ ಎಂದು ಶಿಕ್ಷಕಿಗೆ ಹೇಳಿದ್ದಾಳೆ. ತಾವು ಶಿಕ್ಷಣ ನೀಡುತ್ತಿರುವ ವಿದ್ಯಾರ್ಥಿನಿ ಈ ರೀತಿಯ ಕೆಟ್ಟ ಪ್ರಯೋಗ ಉಪಯೋಗಿಸಿದ್ದು, ಒಂದು ಕ್ಷಣ ಶಿಕ್ಷಕಿಯನ್ನು ವಿಚಲಿತರನ್ನಾಗಿ ಮಾಡಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ವಿದ್ಯಾರ್ಥಿನಿಯ ಈ ನಡೆಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಶಿಕ್ಷಣ ನೀಡುವ ಗುರುಗಳಿಗೆ ಗೌರವ ಕೊಡದ ನಿಮ್ಮದ್ದೇನು ಸಂಸ್ಕಾರ ಎಂದು ಹಲವರು ತರಾಟೆ ತೆಗೆದುಕೊಂಡಿದ್ದರೆ, ಹೀಗೆ ಹೇಳಲು ಹೇಳಿಕೊಟ್ಟವರಾರು ಎಂದು ಇನ್ನು ಹಲವರು ಅಸಮಾಧಾನ ಹೊರಹಾಕಿದ್ದಾರೆ. ಹಿಜಾಬ್ ವಿವಾದದಿಂದಾಗಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳ ಸಂಬಂಧ ಹದಗೆಡುತ್ತಿದೆ.
Click this button or press Ctrl+G to toggle between Kannada and English