ಮಂಗಳೂರು: ತುಳು ಭಾಷೆಯ ಸೊಗಡು ಅರಿಯಬೇಕಾದರೆ ಇತರ ಭಾಷೆಗಳನ್ನೂ ತಿಳಿದುಕೊಳ್ಳಬೇಕು. ಯುವ ಜನತೆ ತುಳು ಮಾತನಾಡದಿದ್ದರೆ ಭಾಷೆಯ ಉಳಿವಿನ ಮಾತು ಭಾಷಣಗಳಿಗೆ ಸೀಮಿತವಾಗುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ (ಪರೀಕ್ಷಾಂಗ) ಪ್ರೊ. ಪಿ ಎಲ್ ಧರ್ಮ ಅಭಿಪ್ರಾಯಪಟ್ಟರು.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾಕೋತ್ತರ ಅಧ್ಯಯನ ವಿಭಾಗಗಳು ಜಂಟಿಯಾಗಿ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಗುರುವಾರ ʼಕೆಡ್ಡಸ ಮಿನದನʼ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಅವರು ತುಳು ಬಾಷೆಯೊಂದಿಗಿನ ತಮ್ಮ ಭಾವನಾತ್ಮಕ ಬಂಧವನ್ನು ವಿವರಿಸಿ, ತುಳು ಭಾಷೆಯ ರಕ್ಷಣೆಯೆಂದರೆ ಅದು ಒಂದು ಸಂಸ್ಕೃತಿಯ, ದೇಶದ ರಕ್ಷಣೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಭಾಷೆಯ ಮೇಲಿನ ಅಭಿಮಾನ ಎಲ್ಲಿ ಹೋದರು ಕಡಿಮೆಯಾಗುವುದಿಲ್ಲ, ಎಂದರು. ಅವರು ತಮ್ಮ ಹಾಸ್ಯಮಿಶ್ರಿತ ತುಳು ಹಾಡುಗಳ ಮೂಲಕ ಗಮನಸೆಳೆದರು. ʼತುಳುವ ಪಾರಂಪರಿಕ ಜ್ಞಾನʼ ಹಾಗೂ ʼಬೊಳ್ಳಿ ಸಂಭ್ರಮೊʼ ಎಂಬ ಎರಡು ಪುಸ್ತಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಹಿರಿಯ ಪತ್ರಕರ್ತ ಮನೋಹರ ಪ್ರಸಾದ್, ಬೇರೆ ಭಾಷೆಯ ಕೃತಿಗಳನ್ನು ತುಳುವಿಗೆ ಅನುವಾದ ಮಾಡುವ ಮೂಲಕ ಭಾಷೆಯ ಶಬ್ದಭಂಡಾರ ಜಾಸ್ತಿಯಾಗಬೇಕು, ಎಂದರಲ್ಲದೆ, ರಾಜ್ಯದ ಅತ್ಯಂತ ಕ್ರಿಯಾಶೀಲ ಅಧ್ಯಯನ ಪೀಠ ಎನಿಸಿಕೊಂಡಿರುವ ತುಳು ಪೀಠವನ್ನು ಅಭಿನಂದಿಸಿದರು.
ನ್ಯಾಯವಾದಿ ಎಂ ಕೆ ಸುವೃತ ಕುಮಾರ್, ತುಳುವಿಗೆ ಲಿಪಿಯಿಲ್ಲ ಎಂಬುದು ಸರಿಯಲ್ಲ ಮತ್ತು ಭಾಷೆಯನ್ನು ಸಂವಿಧಾನದ 8 ನೇ ಪರಿಚ್ಛೇದಕ್ಕೆ ಸೇರಿಸಲು ಅದೊಂದು ಅಡ್ಡಿಯೇ ಅಲ್ಲ. ಹಿಂದಿ, ಇಂಗ್ಲಿಷ್ನಂತಹ ಭಾಷೆಗಳೇ ಲಿಪಿಯಿಲ್ಲದ ಜನಪ್ರಿಯವಾಗಿವೆ, ಎಂದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯೆ ವಿಜಯಲಕ್ಷ್ಮೀ ಪ್ರಸಾದ್ ರೈ ಮಾತನಾಡಿ, ಕೆಡ್ಡಸ ಎಂಬುದು ಹೆಣ್ಣಿನ ಬದುಕಿನ ಹಂತಗಳನ್ನು ಭೂಮಿಗೆ ಅನ್ವಯಿಸುವ ಹಬ್ಬ. ಹೆಣ್ಣಿಗೆ ಕೊಡುವ ಗೌರವದ ಸೂಚಕವೂ ಹೌದು, ಎಂದರು.
ಮಂಗಳೂರು ವಿವಿ ಸಿಂಡಿಕೇಟ್ ಸದಸ್ಯಮೋಹನ್ ಪಡಿವಾಳ್, ತುಳು ಪೀಠದ ಸಲಹಾ ಮಂಡಳಿ ಸದಸ್ಯ ಪ್ರವೀಣ್ ಕುಮಾರ್ ಕೊಡಿಯಾಲ್ಬೈಲ್, ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಮೊದಲಾದ ಗಣ್ಯರು ಹಾಜರಿದ್ದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠದ ಸಂಯೋಜಕ ಡಾ. ಮಾಧವ ಎಂ ಕೆ ಪ್ರಾಸ್ತಾವಿಕವಾಗಿ ಮಾತನಾಡಿ ತುಳು ಉಪನ್ಯಾಸದ ವೆಬಿನಾರ್ 72 ವಾರ ಪೂರೈಸಿರುವ ಸಂತಸ ಹಂಚಿಕೊಂಡರು. ತುಳು ಎಂ ಎ ವಿದ್ಯಾರ್ಥಿನಿ ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸುಭಾಶ್ಚಂದ್ರ ಕಣ್ವತೀರ್ಥ ಧನ್ಯವಾದ ಸಮರ್ಪಿಸಿದರು.
ಮೊದಲ ವರ್ಷದ ತುಳು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಅತಿಥಿಗಳನ್ನು ವೀಳ್ಯದೆಲೆ- ಅಡಿಕೆ, ಶಾಲು ಕೊಟ್ಟು ಸನ್ಮಾನಿಸಿದ್ದು ಗಮನ ಸೆಳೆಯಿತು. ತುಳು ಭಾಷಣ, ಹಾಡು ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮದ ಬಳಕ ಸಾಂಸ್ಕೃತಿಕ ವೈವಿಧ್ಯಗಳು ನಡೆದವು.
Click this button or press Ctrl+G to toggle between Kannada and English