ಮಂಗಳೂರು : ವಿಧಾನ ಪರಿಷತ್ತಿನ ಶಾಸಕರಾದ ಮಂಜುನಾಥ ಭಂಡಾರಿಯವರು ಇಂದು ನಡೆದ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ನಿಯಮ 330ರ ಅಡಿಯಲ್ಲಿ ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಹೆಚ್ಚಿಸಬೇಕೆಂದು ಆಗ್ರಹಿಸಿರು. ಅಧಿವೇಶನದಲ್ಲಿ ಮಾತನಾಡಿದ ಅವರು ‘ಪ್ರಜಾ ಪ್ರಭುತ್ವದಲ್ಲಿ ಗ್ರಾಮ ಪಂಚಾಯತಿಯೇ ತಳಹದಿ. ಆ ತಳಹದಿಯನ್ನು ನಾವು ಬಲಿಷ್ಠವಾಗಿಸಿದರೆ ಮಾತ್ರ ಮಾಹಾತ್ಮ ಗಾಂಧೀಜಿಯವರು ಕಂಡ ಗ್ರಾಮ ಸ್ವರಾಜ್ಯದ ಕನಸು ನನಸಾಗುವುದು. ಆದರೆ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಮೀಸಲಾತಿ ಪ್ರಕಾರ ಶೇಕಡ 50 ರಷ್ಟು ಮಹಿಳೆಯರು ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಆರ್ಥಿಕವಾಗಿ ಹಿಂದುಳಿದವರು ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿ ಬರುವುದರಿಂದ ಗೌರವಾನ್ವಿತವಾಗಿ ಬದುಕಲು ಮತ್ತು ಬಡಜನರ ಕಷ್ಟ-ಸುಖಗಳಿಗೆ ಸ್ಪಂದಿಸಲು ಚುನಾಯಿತ ಪ್ರತಿನಿಧಿಗಳೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ.
ಚುನಾಯಿತ ಪ್ರತಿನಿಧಿಗಳ ಗೌರವಧನವನ್ನು ಕನಿಷ್ಠ ಪಕ್ಷ ಮಾಸಿಕ 10 ಸಾವಿರ ರೂಪಾಯಿಗಳವರೆಗೆ ಹೆಚ್ಚಿಸಬೇಕೆಂದು ಅಲ್ಲದೇ ಚುನಾಯಿತ ಪ್ರತಿನಿಧಿಗಳಿಗೆ ವೈದ್ಯಕೀಯ ಸೌಲಭ್ಯ ಮತ್ತು ಆ ಜಿಲ್ಲೆಗಳಲ್ಲಿ ಓಡಾಡಲು ಉಚಿತ ಬಸ್ ಸೌಕರ್ಯವನ್ನು ಹಾಗೂ 5 ವರ್ಷಗಳನ್ನು ಪೂರ್ಣ ಮಾಡಿದ ಚುನಾಯಿತ ಪ್ರತಿನಿಧಿಗಳಿಗೆ ಪಿಂಚಣಿಯನ್ನು ಕೊಡಬೇಕೆಂದು ಆಗ್ರಹಿಸಿದರು.
“ನಾನು ನನ್ನ ಡಾಕ್ಟರೇಟ್ ಪದವಿಯನ್ನು ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಅಭ್ಯಾಸ ಮಾಡಿರುತ್ತೇನೆ, ನನ್ನ ಡಾಕ್ಟರೇಟಿನ ಪ್ರಬಂಧ ಮಾಡಲು ಮಾಹಿತಿ ಕಲೆ ಹಾಕುವಾಗ ಸಾವಿರಾರು ಗ್ರಾಮ ಪಂಚಾಯತ್ ಸದಸ್ಯರುಗಳನ್ನು ವಯಕ್ತಿಕವಾಗಿ ಭೇಟಿ ಮಾಡಿ ಅವರು ಪಡುತ್ತಿರುವ ಕಷ್ಟಗಳನ್ನು ಕಣ್ಣಾರೆ ನೋಡಿರುತ್ತೇನೆ” ಎಂದು ಮಂಜುನಾಥ ಭಂಡಾರಿಯವರು ಹೇಳಿದರು. ಇದನ್ನು ಗೌರವಾನ್ವಿತ ಗ್ರಾಮಿಣಾಭಿವೃದ್ಧಿ ಸಚಿವರು ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ಅನುಷ್ಟಾನಗೊಳಿಸಬೇಕೆಂದು ಹಾಗೂ ಇದಕ್ಕೆ ಸ್ಥಳೀಯ ಸಂಸ್ಥೆಗಳಿಂದ ಚುನಾಯಿತರಾದ ಎಲ್ಲಾ 25 ಸದಸ್ಯರ ಒಕ್ಕೊರಳಿನ ಬೆಂಬಲ ಇದೆಯೆಂದು ತಿಳಿಸಿದರು.
Click this button or press Ctrl+G to toggle between Kannada and English