ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ 2021-22 ನೇ ಸಾಲಿನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ತೃತೀಯ ವಿಜ್ಞಾನ ಪದವಿಯ ವಿನ್ಯಾಸ್ ವಿ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಧೀರಜ್, ಸಹಕಾರ್ಯದರ್ಶಿಯಾಗಿ ತೃತೀಯ ವಾಣಿಜ್ಯ ಪದವಿಯ ಅಂಕಿತಾ ಎಸ್, ಲಲಿತ ಕಲಾ ಸಂಘದ ಕಾರ್ಯದರ್ಶಿಯಾಗಿ ತೃತೀಯ ವಿಜ್ಞಾನ ಪದವಿಯ ಅಪರ್ಣಾ ಶೆಟ್ಟಿ ಹಾಗೂ ಲಲಿತಾ ಕಲಾ ಸಂಘದ ಸಹಕಾರ್ಯದರ್ಶಿಯಾಗಿ ತೃತಿಯ ಕಲಾ ಪದವಿಯ ಕಾವ್ಯ ಎನ್ ಕೆ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಬಿ ಎಂ ರಾಮಕೃಷ್ಣ ಅವರ ನೇತೃತ್ವದಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ 20 ತರಗತಿಗಳಿಗೆ ಮತದಾನದ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿನಿಧಿಗಳನ್ನು ಆರಿಸಿದರು. ಉಳಿದ ತರಗತಿ ಪ್ರತಿನಿಧಿಗಳು ಅವಿರೋಧವಾಗಿ ಆಯ್ಕೆಯಾದರು. ಮತಎಣಿಕೆ ಅಧಿಕಾರಿ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಅವರ ಉಸ್ತುವಾರಿಯಲ್ಲಿ ಮತಎಣಿಕೆ ನಡೆಯಿತು. ಪ್ರಾಂಶುಪಾಲೆ ಡಾ. ಅನಸೂಯ ರೈ ವಿಜೇತ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದರು.
ತರಗತಿ ಪ್ರತಿನಿಧಿಗಳ ಮೂಲಕ ಸಂಘದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪದಾಧಿಕಾರಿಗಳು ತಮ್ಮ ಖುಷಿಯನ್ನು ಹಂಚಿಕೊಳ್ಳುವುದರ ಜೊತೆಗೆ ಭವಿಷ್ಯದ ಯೋಜನೆಗಳಿಗೆ ಬೆಂಬಲ ಕೋರಿದರು. ಪೂರ್ವತನ ಪ್ರಾಂಶುಪಾಲರುಗಳಾದ ಭೌತಶಾಸ್ತ್ರ ವಿಭಾಗ ಮುಖ್ಯಸ್ಥ ಡಾ. ಹರೀಶ್ ಎ ಹಾಗೂ ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ. ಉದಯ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು.
ಚುನಾವಣಾ ಪ್ರಕ್ರಿಯೆ:
ಹಿರಿಯ ಪ್ರಾಧ್ಯಾಪಕರ ನೇತೃತ್ವದಲ್ಲಿ ಪ್ರತಿ ತರಗತಿಗೂ (ಮತದಾನ ಕೇಂದ್ರ) ಮೂವರು ಉಪನ್ಯಾಸಕರು ಹಾಗೂ ಒಬ್ಬರು ಬೋಧಕೇತರ ಸಿಬ್ಬಂದಿಯನ್ನು ಆಯೋಜಿಸಲಾಗಿತ್ತು. ಅಭ್ಯರ್ಥಿಗಳ ಎದುರಿಗೇ ಇಡೀ ಮತದಾನ ಪ್ರಕ್ರಿಯ ನಡೆಸಿ ಮತಪೆಟ್ಟಿಗೆಗಳನ್ನು ಸೀಲ್ ಮಾಡಲಾಯಿತು. ಅವರ ಎದುರಿಗೇ ಪೆಟ್ಟಿಗೆಗಳನ್ನು ತೆರೆದು ಮತೆಎಣಿಕೆ ನಡೆಸಲಾಯಿತು. ಮತ ಚಲಾಯಿಸಲು ವಿದ್ಯಾರ್ಥಿಗಳು ಕಾಲೇಜು ಐಡಿ ಹಾಗೂ ಶುಲ್ಕ ಭರಿಸಿದ ರಶೀದಿ ತರುವುದು ಕಡ್ಡಾಯವಾಗಿತ್ತು. ಮುಂಜಾನೆ 10 ಗಂಟೆಯಿಂದ 11.30 ತನಕ ಮತದಾನದಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
ಸಂಭ್ರಮಾಚರಣೆ:
ವಿಜೇತ ಅಭ್ಯರ್ಥಿಗಳು ಕಾಲೇಜು ಆವರಣದಲ್ಲಿ ಕುಣಿದು ಕುಪ್ಪಳಿಸಿ ಸಂಭ್ರಮ ಆಚರಿಸಿದರು. ವಿವಿಧ ಘೋಷಣೆಗಳು, ಡೋಲಿಗೆ ಹೆಜ್ಜೆಹಾಕಿದ ವಿಜೇತರು ಹಾಗೂ ಅವರ ಬೆಂಬಲಿಗ ವಿದ್ಯಾರ್ಥಿಗಳಿಂದಾಗಿ ಸಂಭ್ರಮದ ವಾತಾವರಣ ಮನೆಮಾಡಿತ್ತು. ಹೂವಿನ ದಳಗಳು, ಹೂಮಾಲೆಗಳು ಎಲ್ಲೆಲ್ಲಿಯೂ ಕಂಡುಬಂದವು. ವಿದ್ಯಾರ್ಥಿ ಸಂಘದ ಚುನಾವಣೆ ಶಾಂತಿಯುತವಾಗಿ ನಡೆಯಲು ಸಹಕರಿಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.
Click this button or press Ctrl+G to toggle between Kannada and English