ಮಂಗಳೂರು : ವಿಶ್ವಕ್ಕೆ ಶಾಂತಿ ಹಾಗೂ ಅಹಿಂಸೆಯ ಸಂದೇಶ ಸಾರಿದ ಭಾರತದ ಕೀರ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವಂತೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದರು.
ಅವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ಪಟ್ಟಣದ 18 ಜೈನ ದೇವಾಲಯಗಳಲ್ಲಿ ಪ್ರಮುಖವಾದ ಸಾವಿರ ಕಂಬಗಳ ಬಸದಿಯಾದ ತ್ರಿಭುವನ ತಿಲಕ ಚೂಡಾಮಣಿ ದೇವಾಲಯಕ್ಕೆ ಮಾ.14ರ ಸೋಮವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿದ ಅವರು, ನಮ್ಮ ದೇಶ ಮಾನವೀಯ ಮೌಲ್ಯಗಳು, ಶಾಂತಿ, ಅಹಿಂಸೆಯ ಮಹತ್ವ ಮತ್ತು ಸಹೋದರತ್ವವನ್ನು ಇಡೀ ಜಗತ್ತಿಗೆ ತೋರಿಸಿದೆ. ಭಾರತದ ಸಂಸ್ಕøತಿ ವಿಶ್ವಕ್ಕೆ ಪ್ರೇರಣೆ ನೀಡಿದೆ. ಭಾರತ ಜಗತ್ತಿಗೆ ಶಾಂತಿ, ಅಹಿಂಸೆ ಮತ್ತು ಸೇವೆಗೆ ಸ್ಫೂರ್ತಿಯನ್ನು ನಿರಂತರವಾಗಿ ನೀಡಲಿದೆ ಎಂಬ ಭರವಸೆ ಇದೆ ಎಂದರು.
ಅದಕ್ಕೂ ಮೊದಲು ಮಂಗಳೂರಿನಲ್ಲಿ ಕುದ್ರೋಳಿ ದೇವಸ್ಥಾನಕ್ಕೆ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಮಾ.14ರ ಸೋಮವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮೀಜಾರು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಪೋಲಿಸ್ ಆಯುಕ್ತ ಶಶಿಕುಮಾರ್, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್ ಮೋಹನ್, ಡಿಸಿಪಿ ಹರಿರಾಂ ಶಂಕರ್ ಸೇರಿದಂತೆ ಇತರೆ ಅಧಿಕಾರಿಗಳು, ಶ್ರೀಕ್ಷೇತ್ರ ಕುದ್ರೋಳಿಯ ಗೋಕರ್ಣನಾಥೇಶ್ವರ ದೇವಸ್ಥಾನದ ಅಧ್ಯಕ್ಷ ಸಾಯಿರಾಂ, ದೇವಸ್ಥಾನದ ಕಾರ್ಯದರ್ಶಿ ಮಾಧವ ಸುವರ್ಣ ಸೇರಿದಂತೆ ಹಲವು ಗಣ್ಯರು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English