ಮಂಗಳೂರು : ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಕಾಲೇಜಿನ ಇಂಗ್ಲಿಷ್ ವಿಭಾಗ ವತಿಯಿಂದ ನಡೆದ ‘ಕಲೆ-ಹಿಂಸೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಹಿಂಸೆ ಎನ್ನುವುದು ವಿವಿಧ ಆಯಾಮಗಳಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಫಲಿಸಿದರೆ, ಕಲೆ ಮಾನವನ ಜೀವನದಲ್ಲಿ ಅನನ್ಯ ಭಾವರೂಪಿಯಾಗಿ ಹೊಸತನವನ್ನು ಪ್ರಜ್ವಲಿಸುತ್ತದೆ. ಕಲೆಯ ಮೂಲಕ ಹಿಂಸೆಯನ್ನು ತಡೆಗಟ್ಟಿ, ಅದನ್ನು ಮಟ್ಟಹಾಕಲು ಸಾಧ್ಯ ಎಂದವರು ಹೇಳಿದರು.
ಈ ವಿಚಾರ ಸಂಕೀರ್ಣದಲ್ಲಿ ಪಾಲ್ಗೊಳ್ಳಬೇಕಿದ್ದ ಸಾಹಿತಿ ಡಾ| ಯು.ಆರ್. ಅನಂತಮೂರ್ತಿ ಅನಾರೋಗ್ಯದ ಸಮಸ್ಯೆಯಿಂದ ಪಾಲ್ಗೊಳ್ಳಲು ಸಾಧ್ಯವಾಗದ ಕಾರಣದಿಂದ ಅವರ ದಿಕ್ಸೂಚಿ ಭಾಷಣವನ್ನು ವೀಡಿಯೋ ಮೂಲಕ ಭಿತ್ತರಿಸಲಾಯಿತು. ಮಹಾಭಾರತ ಯುದ್ಧದ ಸಂದರ್ಭದಲ್ಲಿ ಶ್ರೀಕೃಷ್ಣ ತನ್ನ ವಿಶ್ವರೂಪ ದರ್ಶನವನ್ನು ತೋರಿದ ಅನಂತರವೂ ಮಹಾಭಾರತ ಯುದ್ಧ ಮತ್ತೆ ಮುಂದುವರಿದಿದೆ. ಹೀಗಾಗಿ ಘಟನೆಯೊಂದು ನಡೆಯಕೂಡದು ಅಂದರೂ ಆ ಘಟನೆ ನಡೆಯುತ್ತದೆ ಎಂದು ತಿಳಿಸಿದ ಅವರು, ಹಿಂಸೆ ಅನ್ನುವುದು ಭಗ್ನಗೊಂಡ ವ್ಯಕ್ತಿಯ ಮನಸ್ಥಿತಿ ಎಂದು ಅಭಿಪ್ರಾಯಪಟ್ಟರು. ಸಾಹಿತ್ಯ ಕೇವಲ ಹಿಂಸೆಯನ್ನು ಮಾತ್ರ ಚಿತ್ರಿಸುವುದಲ್ಲ. ಬದಲಾಗಿ ಯಾವ ರೀತಿಯಿಂದ ಹಿಂಸೆಯನ್ನು ತಡೆಗಟ್ಟಬಹುದು ಎಂಬ ವಿಷಯದಲ್ಲೂ ಸಾಹಿತ್ಯ ಕಾರ್ಯನಿರ್ವಹಿಸುತ್ತದೆ ಎಂದು ವಿಶ್ಲೇಷಿಸಿದರು.
ಈ ಸಂದರ್ಭದಲ್ಲಿ ಇಂಗ್ಲಿಷ್ ಶಿಕ್ಷಕರ ಸಂಘದ ಅಧ್ಯಕ್ಷ ವಿನ್ಸೆಂಟ್ ಆಳ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಎಚ್.ಆರ್. ಲಕ್ಷ್ಮೀನಾರಾಯಣ ಭಟ್ಟ, ಕಾರ್ಯಕ್ರಮ ಆಯೋಜನಾ ಸಮಿತಿ ಕಾರ್ಯದರ್ಶಿ ಡಾ| ಅಮ್ಮಾಳ್ ಕುಟ್ಟಿ, ಲೀಲಾ ನಾಯರ್ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English