ಮಂಗಳೂರು ವಿವಿ ಗಣೇಶೋತ್ಸದಲ್ಲಿ ವಿವಾದ, ಕಾಂಗ್ರೆಸ್ ನಾಯಕರು ಉತ್ತರಿಸಬೇಕು : ವೇದವ್ಯಾಸ ಕಾಮತ್

10:28 PM, Sunday, September 10th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಂಗಳೂರು ವಿವಿ ಯಲ್ಲಿ ಸುಮಾರು 40 ವರ್ಷಗಳಿಂದ ಶ್ರದ್ಧೆ ಮತ್ತು ಭಕ್ತಿಯಿಂದ ಗಣೇಶೋತ್ಸವ ನಡೆಯುತ್ತಾ ಬಂದಿದೆ. ಇಷ್ಟು ಸುದೀರ್ಘ ವರ್ಷಗಳ ಕಾಲ ನಿರ್ವಿಘ್ನವಾಗಿ ನಡೆದುಕೊಂಡು ಬರುತ್ತಿದ್ದ ಗಣೇಶೋತ್ಸವಕ್ಕೆ ಇಲ್ಲದಿದ್ದ ವಿರೋಧ ಇದ್ದಕ್ಕಿದ್ದ ಹಾಗೆ ಉಂಟಾಗಿದ್ದು ಹೇಗೆ ಎಂದು ಶಾಸಕ ವೇದವ್ಯಾಸ ಕಾಮತ್ ಪ್ರಶ್ನಿಸಿದ್ದಾರೆ.

ಈ ಬಾರಿ ಗಣೇಶೋತ್ಸವ ನಿಲ್ಲಲಿದೆ ಎಂಬ ಮಾಹಿತಿ ಸಿಕ್ಕ ಕೂಡಲೇ ಶಾಸಕ ವೇದವ್ಯಾಸ ಕಾಮತ್ ಅವರು ವಿಶ್ವವಿದ್ಯಾನಿಲಯದ ಕುಲಪತಿಯವರ ಬಳಿ ಗಣೇಶೋತ್ಸವದ ಆಚರಣೆಗೆ ಯಾವುದೇ ಅಡ್ಡಿ ಆತಂಕ ಆಗದಂತೆ ಮನವಿ ಮಾಡಿದ್ದರು. ಆದರೆ ಶಾಸಕರ ಭೇಟಿಯ ನಂತರ ಕಾಂಗ್ರೆಸ್ ಮುಖಂಡರು ಕುಲಪತಿ ಜಯರಾಜ್ ಅಮೀನ್ ಅವರನ್ನು ಎರಡೆರಡು ಬಾರಿ ಭೇಟಿ ಮಾಡಿ “ಮಂಗಳ ಆಡಿಟೋರಿಯಂನಲ್ಲಿ ಗಣಪತಿ ಪೂಜೆಗೆ ಅವಕಾಶ ಕೊಟ್ಟರೆ ನಾವು ಸೋತ ಹಾಗೆ, ಅಲ್ಲಿ ಯಾವುದೇ ಕಾರಣಕ್ಕೂ ಈ ಬಾರಿ ಗಣಪತಿ ಪೂಜೆಗೆ ಅವಕಾಶ ಕೊಡಲೇಬಾರದು” ಎಂದು ಒತ್ತಡ ಹಾಕಿರುವುದು ಈಗ ಗುಟ್ಟಾಗಿ ಉಳಿದಿಲ್ಲ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ .

ದೇಶದ ಏಕತೆಯ ಸಂಕೇತವಾಗಿ ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಬಾಲ ಗಂಗಾಧರ ತಿಲಕರು ಆರಂಭಿಸಿದ ಸಾರ್ವಜನಿಕ ಗಣೇಶೋತ್ಸವಕ್ಕೆ ವಿಶ್ವವಿದ್ಯಾನಿಲಯದಲ್ಲಿ ಈ ಬಾರಿ ಅವಕಾಶ ಕೊಡುವುದಿಲ್ಲ ಎಂದು ಹೇಳಿದಾಗ ಕಾಂಗ್ರೆಸ್ ನಾಯಕರು ಕುಲಪತಿಯವರಿಗೆ ಅವಕಾಶ ಕೊಡುವಂತೆ ಒತ್ತಾಯ ಮಾಡಬೇಕಿತ್ತು. ಅಷ್ಟಕ್ಕೂ ಇದೇನು ಹೊಸತಾಗಿ ಆರಂಭಿಸಿರುವ ಗಣೇಶೋತ್ಸವ ಅಲ್ಲ, ಸತತ 40 ವರ್ಷಗಳಿಂದ ನಡೆದುಕೊಂಡು ಬಂದಿರುವ ರಾಷ್ಟ್ರೀಯ ಉತ್ಸವ. ಈ ನಿಟ್ಟಿನಲ್ಲಿ ಕಾಂಗೆಸ್ಸಿನ ಗಟ್ಟಿ ನಿಲುವು ಏನು? ಕಮ್ಯುನಿಸ್ಟರು ಬಿಡಿ, ಅವರದ್ದು ಎಂದಿಗೂ ಹಿಂದೂ ವಿರೋಧಿ ಸಿದ್ಧಾಂತ. ಹಿಂದೂಗಳ ಶ್ರದ್ಧಾಭಕ್ತಿಯ ಆಚರಣೆಯ ಹಿನ್ನೆಲೆಯೇ ಗೊತ್ತಿಲ್ಲದ ಅವರಿಂದ ಯಾವ ನಿರೀಕ್ಷೆಯೂ ಸಮಾಜಕ್ಕಿಲ್ಲ. ಹಾಗಾಗಿ ಕಾಂಗ್ರೆಸ್ ನಾಯಕರು, ಗಣಪತಿ ಹಬ್ಬವನ್ನು ಪ್ರತಿ ವರ್ಷದಂತೆ ನಡೆಸಬೇಕೋ? ಅಥವಾ ಈ ಬಾರಿಯಿಂದ ನಿಲ್ಲಿಸಬೇಕೋ? ಎಂಬುದನ್ನು ಮಾಧ್ಯಮದ ಮೂಲಕ ಸ್ಪಷ್ಟಪಡಿಸಲಿ ಎಂದಿದ್ದಾರೆ.

ವಿಶ್ವವಿದ್ಯಾನಿಲಯ ವಿದ್ಯಾದೇಗುಲ, ಅಲ್ಲಿ ಧಾರ್ಮಿಕ ಆಚರಣೆಗೆ ಅವಕಾಶ ನೀಡಬಾರದೆಂದು ಹೇಳುವ ಕಾಂಗ್ರೆಸ್ ನಾಯಕರು ಕಳೆದ 40 ವರ್ಷಗಳಿಂದ ವಿಶ್ವವಿದ್ಯಾನಿಲಯದಲ್ಲಿ ಗಣೇಶ ಹಬ್ಬವನ್ನು ಆಚರಿಸಿದವರು ತಪ್ಪು ಮಾಡಿದ್ದಾರೆ ಎಂದು ಹೇಳುತ್ತಾರಾ? ವಿಶ್ವ ವಿದ್ಯಾನಿಲಯದಲ್ಲಿ ಹಣ ಇಲ್ಲ, ಧಾರ್ಮಿಕ ಆಚರಣೆಗೆ ಅವಕಾಶ ಇಲ್ಲ, ಎಂದು ನೂರೆಂಟು ಕಾರಣಗಳನ್ನು ಹೇಳುವವರು, ಸದಾ ದೇಶದ ವಿರುದ್ಧ ದ್ವೇಷಕಾರುವ ಎಡಪಂಥೀಯ ಪ್ರೇರಿತ ಡಾ.ಶಂಸುಲ್ ರಂತಹ ಉಪನ್ಯಾಸ ಕಾರ್ಯಕ್ರಮಗಳಿಗೆ, ಕಾಂಗ್ರೆಸ್ ಪ್ರೇರಿತ ಕಾರ್ಯಕ್ರಮಗಳಿಗೆ ಹೇಗೆ ಅನುಮತಿ ಕೊಡುತ್ತಾರೆ? ಇದಕ್ಕೆ ಏಕೆ ಯಾವ ಅಡ್ಡಿಯೂ ಇರುವುದಿಲ್ಲ? ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ವೇದವ್ಯಾಸ ಕಾಮತ್ ಅವರನ್ನು ವಿರೋಧಿಸುವ ಭರದಲ್ಲಿ ಹಿಂದೂ ದೇವರು-ಹಬ್ಬ-ಆಚರಣೆಗಳನ್ನು ವಿರೋಧಿಸುವ ಮಟ್ಟಕ್ಕೆ ಇಳಿದಿರುವುದು ದುರಂತ ಎಂದಿದ್ದಾರೆ.

ವಿಶ್ವವಿದ್ಯಾನಿಲಯದಲ್ಲಿ ಗಣೇಶೋತ್ಸಕ್ಕೆ ಹಣ ಇಲ್ಲ ಎಂಬ ಕುಲಪತಿಯವರ ಹೇಳಿಕೆಯನ್ನೇ ಪದೇಪದೇ ಸಮರ್ಥನೆ ಮಾಡಿಕೊಳ್ಳುವುದರ ಜೊತೆಗೆ ಹಿಂದೂ ಧಾರ್ಮಿಕ ಆಚರಣೆಗಳ ಬಗ್ಗೆ ತಾತ್ಸಾರ ಭಾವನೆ, ವಿಶ್ವವಿದ್ಯಾನಿಲಯದಲ್ಲಿ ಅವೆಲ್ಲ ಬೇಕೇ, ಎಂದೆಲ್ಲಾ ವಿತಂಡವಾದ ಮಾಡುವ ಬದಲು ನಿಮ್ಮದೇ ಕಾಂಗ್ರೆಸ್ ಸರ್ಕಾರಕ್ಕೆ ವಿವಿ ಕುಲಪತಿ ಜಯರಾಜ್ ಅಮೀನ್ ಅವರು ಬರೆದ ಪತ್ರಕ್ಕೆ “ಪ್ರತಿ ವರ್ಷದಂತೆ ವಿಶ್ವವಿದ್ಯಾನಿಲಯದ ಮಂಗಳಾ ಆಡಿಟೋರಿಯಂನಲ್ಲೇ ಗಣಪತಿ ಹಬ್ಬ ಆಚರಿಸುವುದಕ್ಕೆ” ಸರ್ಕಾರದಿಂದಲೇ ಕುಲಪತಿಗಳಿಗೆ ಆದೇಶ ಕೊಡಿಸಿ ಗಣಪತಿಯ ಮೇಲಿರುವ ನಿಮ್ಮ ಭಕ್ತಿಯನ್ನು ತೋರಿಸಿ. ಆಗ ನಿಮ್ಮ ನಡೆಯನ್ನು ನಾವೆಲ್ಲರೂ ಸ್ವಾಗತಿಸುತ್ತೇವೆ. ಇಲ್ಲವಾದಲ್ಲಿ ನಿಮ್ಮನ್ನು ಹಾಗೂ ನಿಮ್ಮ ಕಾಂಗ್ರೆಸ್ ಸರ್ಕಾರವನ್ನು ಹಿಂದೂ ವಿರೋಧಿ ಅನ್ನದೇ ಮತ್ತೇನು ಹೇಳಲು ಸಾಧ್ಯ ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English