ಮಂಗಳೂರು : ನಗರದ ಸಂದೇಶ ಫೌಂಡೇಶನ್ ವತಿಯಿಂದ ನೀಡಲಾಗುವ ಸಂದೇಶ ಪ್ರಶಸ್ತಿಗೆ 2013ನೇ ಸಾಲಿನಲ್ಲಿ ಒಟ್ಟು 9 ಮಂದಿ ಆಯ್ಕೆಯಾಗಿದ್ದಾರೆ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಸಂದೇಶ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜಾ ತಿಳಿಸಿದರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಕಳೆದ 22 ವರ್ಷ ಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು ತಲಾ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ ಒಳಗೊಂಡಿದೆ. ಪ್ರಶಸ್ತಿ ಪ್ರಧಾನ ಸಮಾರಂಭವು ಜನವರಿ 27ರಂದು ಸಂಜೆ 5.30ಕ್ಕೆ ಬಜೊಡಿ ಪ್ರೇಮನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಲಿದ್ದು, ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಹಾಗೂ ಸಂದೇಶದ ಅಧ್ಯಕ್ಷ ಡಾ| ಹೆನ್ರಿ ಡಿ’ಸೋಜ ಅವರು ಪ್ರಶಸ್ತಿ ವಿಜೇತರನ್ನು ಸಮ್ಮಾನಿಸಲಿದ್ದಾರೆ ಎಂದು ಅವರು ತಿಳಿಸಿದರು.
ಈ ಸಾಲಿನ ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಸಾಹಿತಿ ಕುಂಬಾರ ವೀರಭದ್ರಪ್ಪ, ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಕೊಂಕಣಿ ಸಾಹಿತಿ ಲಿಯೊ ಡಿಸೋಜಾ, ಸಂದೇಶ ತುಳು ಸಾಹಿತ್ಯ ಪ್ರಶಸ್ತಿಗೆ ತುಳು ರಂಗಭೂಮಿಕಲಾವಿದ ವಿಜಯಕುಮಾರ್ ಕೊಡಿಯಾಲ್‌ಬೈಲ್, ಸಂದೇಶ ಕಲಾ ಪ್ರಶಸ್ತಿಗೆ ನಾಟ್ಯ ಕಲಾವಿದೆ ಜಯಲಕ್ಷ್ಮಿ ಆಳ್ವ, ಸಂದೇಶ ಪತ್ರಿಕೋದ್ಯಮ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಎನ್. ಅರ್ಜುನದೇವ, ಸಂದೇಶ ಸಿನೆಮಾ/ಟಿವಿ ಪ್ರಶಸ್ತಿಗೆ ಸಂಗೀತ ನಿದೇಶಕ ಹಂಸಲೇಖ, ಸಂದೇಶ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಣ ತಜ್ಞ ಡಾ| ಕೆ.ಈ. ರಾಧಾಕೃಷ್ಣ, ಸಂದೇಶ ವಿಶೇಷ ಗೌರವ ಪ್ರಶಸ್ತಿಗೆ ಸಮಾಜಸೇವಕ ಯು.ಸಿ. ಪೌಲೋಸ್ ಹಾಗೂ ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿಗೆ ಸಂಗೀತಕಾರ ವಂ| ವಲೇರಿಯನ್ ಮೆಂಡೊನ್ಸಾ ಅವರನ್ನು ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.
Click this button or press Ctrl+G to toggle between Kannada and English