ಮಂಗಳೂರು : “ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದನ್ನು ಇಂದಿನ ಯುವ ಸಮಾಜ ಅರಿತುಕೊಳ್ಳಬೇಕಾಗಿದೆ. ಯುವಕರೆಂದರೆ ಒಂದಷ್ಟು ಜನಾಂಗ ಅಥವಾ ವ್ಯಕ್ತಿಗಳಲ್ಲ. ಪ್ರತಿಯೊಂದು ವ್ಯಕ್ತಿ, ಸಂಸ್ಥೆ ಮತ್ತು ವಿಷಯಗಳಿಂದ ನಾವು ಸ್ಪೂರ್ತಿಗೊಳ್ಳಬೇಕು. ಸಮಾಜದ ಪ್ರಸಿದ್ಧ ವ್ಯಕ್ತಿಗಳಿಂದ ನಾವು ಸ್ಫೂರ್ತಿಗೊಳ್ಳಬೇಕು. ಸ್ಪೂರ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವಿಶ್ವಸ್ಥರಾದ ವಿವೇಕ್ ಆಳ್ವ ಅಭಿಪ್ರಾಯಪಟ್ಟರು
ಮಂಗಳೂರು ರಾಮಕೃಷ್ಣ ಮಿಷನ್ ಆಯೋಜಿಸಿದ ಸ್ಪೂರ್ತಿ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾರ್ಯಕ್ರಮವು “ಭಾರತ 2047- ಭಾರತದ ಪುನರ್ ನಿರ್ಮಾಣಕ್ಕಾಗಿ ಯುವಕರಿಗೆ ಮಾರ್ಗ” ಎಂಬ ಪರಿಕಲ್ಪನೆಯ ಆಧಾರದಲ್ಲಿ ನಡೆಯಿತು.
ಉದ್ಘಾಟನಾ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದಜಿ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕೋಝೀಕೋಡ್ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ನರಸಿಂಹಾನಂದಜಿ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೂಡಬಿದ್ರೆಯ ಎಸ್. ಕೆ. ಎಫ್. ಎಲಿಕ್ಸರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಚೇರ್ಮನ್ ಡಾ. ಜಿ ರಾಮಕೃಷ್ಣ ಆಚಾರ್ ಆಗಮಿಸಿದ್ದರು. ಬೆಂಗಳೂರಿನ ಖ್ಯಾತ ವಾಗ್ಮಿ ಲೇಖಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಶ್ರಮದ ವತಿಯಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು.
ಮೊದಲ ಅವಧಿಯಲ್ಲಿ ಕೋಝೀಕೋಡ್ ರಾಮಕೃಷ್ಣ ಮಿಷನ್ ಮುಖ್ಯಸ್ಥರಾದ ಸ್ವಾಮಿ ನರಸಿಂಹಾನAದಜಿ “ರಾಷ್ಟ್ರ ನಿರ್ಮಾಣಕ್ಕಾಗಿ ವ್ಯಕ್ತಿ ನಿರ್ಮಾಣ” ಎಂಬ ವಿಷಯದ ಬಗ್ಗೆ ಮಾತನಾಡಿದರು. ಎರಡನೇ ಅವಧಿಯಲ್ಲಿ ಬೆಂಗಳೂರಿನ ಖ್ಯಾತ ಲೇಖಕ ಹಾಗೂ ವಾಗ್ಮಿ ಚಕ್ರವರ್ತಿ ಸೂಲಿಬೆಲೆಯವರು “ಭಾರತ 2047- ವಿವೇಕ ಪಥ” ಎಂಬ ವಿಷಯದ ಬಗ್ಗೆ ಮಾತನಾಡಿದರು. ಮೂರನೇ ಅವಧಿಯಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಂಗಳೂರಿನ ಆದಾಯ ತೆರಿಗೆ ಇಲಾಖೆಯ ಉಪ ಆಯುಕ್ತರಾದ ರಮೇತ್ ಚೆನ್ನಿತ್ತಲ, ಮಂಗಳೂರಿನ ದಿಶಾ-ಕಾರಿಯಾರ್ ಟವರ್ಡ್ಸ್ ಎಕ್ಸಲೆನ್ಸ್ ಇದರ ನಿರ್ದೇಶಕರಾದ ರಾಜೇಶ್ವರಿ ಡಿ ಶೆಟ್ಟಿ ಹಾಗೂ ಮಂಗಳೂರಿನ ಪೇಪರ್ ಸೀಡ್ ಕಂಪನಿ ಇದರ ಸಂಸ್ಥಾಪಕರಾದ ನಿತಿನ್ ವಾಸ್ ಅವರು ಭಾಗವಹಿಸಿದರು. ಈ ಸಂವಾದವನ್ನು ಪುತ್ತೂರಿನ ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ಆಡಳಿತ ನಿರ್ದೇಶಕರಾದ ಡಾ. ಶ್ರೀಶಾ ಭಟ್ ನಡೆಸಿಕೊಟ್ಟರು.
ಕಾರ್ಯಕ್ರಮವನ್ನು ನಿವೃತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಮಂಗಳೂರು ಇದರ ಮುಖ್ಯ ಸಂಯೋಜಕರಾದ ರಂಜನ್ ಬೆಳ್ಳರ್ಪ್ಪಾಡಿ ವಂದಿಸಿ, ಉಜಿರೆಯ ಎಸ್.ಡಿ. ಎಮ್. ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಸಂತೋಷ್ ಆಳ್ವ ಕಾರ್ಯಕ್ರಮವನ್ನು ನಿರ್ವಹಿಸಿದರು.ಈ ಕಾರ್ಯಕ್ರಮದಲ್ಲಿ 15ಕ್ಕೂ ಹೆಚ್ಚು ಕಾಲೇಜಿನ 600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದರು.
Click this button or press Ctrl+G to toggle between Kannada and English