ಬೆಳಗಾವಿ: ಸ್ವಾರ್ಥಕ್ಕಾಗಿ, ಸ್ವಹಿತಕ್ಕಾಗಿ ಕೆಲಸ ಮಾಡಿದವರನ್ನು ಸಮಾಜ ಬಹುಬೇಗ ಮರೆಯುತ್ತದೆ. ಸಮಾಜಕ್ಕಾಗಿ, ಪ್ರಜೆಗಳ ಒಳಿತಿಗಾಗಿ ಕೆಲಸ ಮಾಡಿದವರು ಇತಿಹಾಸದಲ್ಲಿ ಅಜರಾಮರರಾಗಿ ಉಳಿಯುತ್ತಾರೆ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿಯಲ್ಲಿ ಶುಕ್ರವಾರ ಸಂಜೆ ಇನ್ ಸ್ಟಿಟ್ಯೂಟ್ ಆಫ್ ಎಂಜಿನಿಯರ್ಸ್ ಅಸೋಸಿಯೇಶನ್ ಆಯೋಜಿಸಿದ್ದ ಎಂಜಿನಿಯರ್ಸ್ ಡೇ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಶ್ರಮ ಜೀವಿಗಳಿಗೆ ಸಾಧಿಸುವ ಛಲ ಇರುತ್ತದೆ. ಚಂದ್ರಯಾನ ಯಶಸ್ವಿ ಮಾಡುವಲ್ಲಿ ಶೇ.30ಕ್ಕಿಂತ ಹೆಚ್ಚು ಮಹಿಳೆಯರ, ಅದರಲ್ಲೂ ಗ್ರಾಮೀಣ ಮಹಿಳೆಯರ ಕೊಡುಗೆ ಇದೆ ಎನ್ನುವುದು ನಮಗೆ ಹೆಮ್ಮೆಯ ಸಂಗತಿ ಎಂದು ಅವರು ಹೇಳಿದರು.
ಎಂಜಿನಿಯರ್ಸ್ ಇಲ್ಲದ ದೇಶವನ್ನು, ನಾಡನ್ನು ನಾವು ಊಹಿಸಿಕೊಳ್ಳಲೂ ಸಾಧ್ಯವಾಗುವುದಿಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಸಂದರ್ಭದಲ್ಲಿ ಅತ್ಯಂತ ಸಂಕಷ್ಟದಲ್ಲಿದ್ದ ಈ ನಾಡನ್ನು ಅತ್ಯದ್ಭುತವಾಗಿ ಕಟ್ಟಿ ನಿಲ್ಲಿಸಿದ ಕೀರ್ತಿ ಎಂಜಿನಿಯರ್ ಗಳಿಗೆ ಸಲ್ಲುತ್ತದೆ. ಸರಕಾರ ಕೆಲಸ ಮಾಡಲು ಆದೇಶಿಸಬಹುದು, ಹಣ ಕೊಡಬಹುದು, ಆದರೆ ಆ ಕೆಲಸವನ್ನು ಜಾರಿಗೊಳಿಸಬೇಕಾದವರು ಎಂಜಿನಿಯರ್ ಗಳು. ಶೃದ್ಧೆ, ನಿಷ್ಠೆಯಿಂದ ಎಂಜಿನಿಯರ್ ಗಳು ಆ ಕೆಲಸವನ್ನು ಪೂರೈಸುತ್ತಾರೆ. ಆಗ ಅದ್ಭುತವಾದ ಕಟ್ಟಡವೋ, ಸೇತುವೆಯೋ, ರಸ್ತೆಯೋ ನಿರ್ಮಾಣವಾಗುತ್ತದೆ. ಜನರು ಅದನ್ನು ಕಂಡು ವಾವ್ ಎನ್ನುತ್ತಾರೆ. ಇದು ಎಂಜಿನಿಯಿರ್ ಗಳ ಶಕ್ತಿ, ಇದು ದೇಶ ಕಟ್ಟುವ ಕೆಲಸ ಎಂದು ಹೆಬ್ಬಾಳಕರ್ ಹೇಳಿದರು.
ಪ್ರಾಮಾಣಿಕತೆ, ಶ್ರಮ, ದೂರದರ್ಶಿತ್ವದಿಂದ ದೇಶದ ಅಭಿವೃದ್ಧಿಗೆ ಕೊಡುಗೆ ನೀಡುವವರು ಇಂಜಿನಿಯರ್‌ಗಳು. ಒಂದು ಕೆಲಸ ಯಶಸ್ವಿಯಾಗಬೇಕಾದರೆ ಆ ಕೆಲಸ ಮಾಡುವವರು ಮೊದಲು ಅದನ್ನು ಪ್ರೀತಿಸಬೇಕು ಎಂದು ವಿಶ್ವೇಶ್ವರಯ್ಯ ಹೇಳಿದ್ದಾರೆ. ಶೃದ್ಧೆ ಇಲ್ಲದಿದ್ದರೆ, ಕೆಲಸದಲ್ಲಿ ಪ್ರೀತಿ ಇಲ್ಲದಿದ್ದರೆ ಅದರಲ್ಲಿ ಜೀವಂತಿಕೆಯನ್ನು ಕಾಣಲು ಸಾಧ್ಯವಿಲ್ಲ. ಕೇವಲ ಕಾಟಾಚಾರದ ಕೆಲಸವಾಗುತ್ತದೆ.
ಹೆಚ್ಚಿನ ಜ್ಞಾನ, ಕೌಶಲ್ಯ, ಸಾಮರ್ಥ್ಯ ಅಥವಾ ಮಹತ್ವಾಕಾಂಕ್ಷೆಯೊಂದಿಗೆ ಮಾಡುವ ಎಲ್ಲಾ ಕೆಲಸವೂ ಹೆಚ್ಚಿನ ಪ್ರತಿಫಲವನ್ನು ನೀಡುತ್ತದೆ. ಹಾಗಾಗಿ ನಾವು ಏನನ್ನು ಮಾಡುತ್ತೇವೋ ಅದರಲ್ಲಿ ನಮ್ಮನ್ನು ಸಂಪೂರ್ಣ ತೊಡಗಿಸಿಕೊಳ್ಳಬೇಕು. ಎಂಜಿನಿಯರ್ ಗಳು ಹಗಲು, ರಾತ್ರಿ ಎನ್ನದೆ, ಬಿಸಿಲು, ಮಳೆ, ಚಳಿ ಎನ್ನದೆ ತಮ್ಮನ್ನು ತೊಡಗಿಸಿಕೊಂಡು ಕೆಲಸ ಮಾಡಿದ್ದರಿಂದ ಇಂತಹ ಅದ್ಭುತ ನಾಡು ನಿರ್ಮಾಣವಾಗಿದೆ ಎಂದು ಅವರು ಪ್ರಶಂಸಿಸಿದರು.
ಭಾರತದಲ್ಲಿ ತಯಾರಾದಷ್ಟು ಎಂಜಿನಿಯರ್ ಗಳು ವಿಶ್ವದ ಬೇರೆಲ್ಲೂ ತಯಾರಾಗುವುದಿಲ್ಲ. ಅತ್ಯಂತ ಶ್ರೇಷ್ಠ ಎಂಜಿನಿಯರ್ ಗಳನ್ನು ತಯಾರಿಸುವ ದೇಶ ನಮ್ಮದು ಎಂದು ಅವರು ಹೇಳಿದರು.
ಸಾಧಕ ಎಂಜಿನಿಯರ್ ಗಳನ್ನು ಈ ಸಂದರ್ಭದಲ್ಲಿ ಸಚಿವರು ಸನ್ಮಾನಿಸಿದರು.
ಎಂಜಿನಿಯರ್ಸ್ ಅಸೋಸಿಯೇಶನ್ ಚೇರಮನ್ ರಮೇಶ ಜಂಗಲ್ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಎಂಜಿನಿಯರ್ ವಿ.ಬಿ.ಜಾವೂರ್, ಸಂಘದ ಗೌರವ ಕಾರ್ಯದರ್ಶಿ ವೀರಣ್ಣ, ಇಸ್ರೋದ ಹಿರಿಯ ವಿಜ್ಞಾನಿಗಳಾದ ರಾಮನಗೌಡ ನಾಡಗೌಡ, ಶ್ರೀನಿವಾಸ ವೇದಿಕೆಯಲ್ಲಿದ್ದರು.
Click this button or press Ctrl+G to toggle between Kannada and English