ಮಂಗಳೂರು ಕಲ್ಲಿದ್ದಲು ಲಾರಿ ಮುಷ್ಕರ : ಲಾರಿ ಮಾಲಕರ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ ಸಚಿವ ದಿನೇಶ್ ಗುಂಡೂರಾವ್

8:53 PM, Sunday, September 24th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ನವಮಂಗಳೂರು ಕೋಲ್ ಟರ್ಮಿನಲ್ (JSW) ದಿಂದ ದಿನಂಪ್ರತಿ ಸಾವಿರಾರು ‌ಮೆಟ್ರಿಕ್ ಟನ್ ಕಲ್ಲಿದ್ದಲು ಸಾಗಾಟ ಮಾಡಲಾಗುತ್ತಿದ್ದು ಲಾರಿ ಮಾಲಕರಿಗೆ ಸರಕಾರ ನಿಗದಿ ಪಡಿಸಿದ ಕನಿಷ್ಟ ಬಾಡಿಗೆ ದರವನ್ನು ನೀಡುತ್ತಿಲ್ಲ, ಇದರಿಂದಾಗಿ ಲಾರಿ ಮಾಲಕರು ಸಂಕಷ್ಟದಲ್ಲಿದ್ದು ಈ ಬಗ್ಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರು ಡಾಲರ್ಸ್ ಕಾಲನಿಯಲ್ಲಿರುವ ಸಚಿವರ ನಿವಾಸದಲ್ಲಿ ಭೇಟಿಯಾದ ಮಂಗಳೂರು ಲಾರಿ ಯೂನಿಯನ್ ಪದಾಧಿಕಾರಿಗಳು ಈ ಬಗ್ಗೆ ಸೆ.25 ಸೋಮವಾರದಿಂದ ಲಾರಿ ಮಾಲಕರು ಸ್ವಯಂಪ್ರೇರಿತರಾಗಿ ಅನಿರ್ಧಿಷ್ಟ ಅವಧಿಗೆ ಕಲ್ಲಿದ್ದಲು ಲಾರಿ ಮುಷ್ಕರ ನಡೆಸುವ ಬಗ್ಗೆ ಸಚಿವರ ಗಮನ ಸೆಳೆದರು.

ಸರಕಾರ ನಿಗದಿಪಡಿಸಿದ ಲಾರಿ ಬಾಡಿಗೆ ದರಕ್ಕಿಂತ ಕಡಿಮೆ ಬಾಡಿಗೆ ನೀಡಲಾಗುತ್ತಿದೆ. ವಾಹನ ನಿರ್ವಹಣಾ ವೆಚ್ಚ ಅಧಿಕಗೊಂಡಿದ್ದು, ಕಳೆದ 10 ವರ್ಷಗಳಿಂದ ಒಂದೇ ಬಾಡಿಗೆದರ ನೀಡಲಾಗುತ್ತಿದೆ ಎಂದು ಸಚಿವರಿಗೆ ವಿವರ ನೀಡಿದರು.

ಇದರ ಜೊತೆಗೆ ಬಳ್ಳಾರಿ ಜಿಲ್ಲೆ ಕುಡಿತಿನಿಯಲ್ಲಿರುವ ಅದಾನಿ ಎಸಿಸಿಯು ಸಿಮೆಂಟ್ ಘಟಕವು ಮಂಗಳೂರು ಹಾಗೂ ಉತ್ತರ ಕೇರಳ ಭಾಗಕ್ಕೆ ಸರಕು ಸಾಗಾಟ ಮಾಡುವ ಲಾರಿಗಳಿಗೆ ನಿಯಮಾನುಸಾರ ಬಾಡಿಗೆ ನೀಡದೆ ಮಾಲಕರನ್ನು ವಂಚಿಸುತ್ತಿದೆ. ಒಂದು ಲಾರಿಗೆ 2 ಬಿಲ್ ನೀಡುವ ಮೂಲಕ ಓವರ್ಲೋಡ್ ನೀಡಿ ಸರಕಾರಿ ನಿಯಮಗಳನ್ನು ಗಾಳಿಗೆ ತೂರಿ ಸಾರಿಗೆ ಅಧಿಕಾರಿಗಳ ಕಣ್ತಪ್ಪಿಸಿ ವಂಚನೆ ಎಸಗುತ್ತಿದೆ ಎಂದು ಯೂನಿಯನ್ ಸುಶಾಂತ್ ಶೆಟ್ಟಿ ದೂರಿದರು.

ಈ ಬಗ್ಗೆ ಕುಡಿತಿನಿ ಸಿಮೆಂಟ್ ಘಟಕಕ್ಕೆ ಲಾರಿಗಳನ್ನು ಕಳುಹಿಸಿದೆ ಕಳೆದ 13 ದಿನಗಳಿಂದ ಲಾರಿ ಮಾಲಕರು ಮುಷ್ಕರ ನಿರತರಾಗಿರುವ ಬಗ್ಗೆ ಸಚಿವರಿಗೆ ವಿವರಿಸಿದರು.

ನವಮಂಗಳೂರು ಪ್ರದೇಶದಲ್ಲಿ ಬಹುಕಾಲದ ಬೇಡಿಕೆಯಾಗಿರುವ ಟ್ರಕ್ ಟರ್ಮಿನಲ್ ನಿರ್ಮಾಣದ ಬಗ್ಗೆಯೂ ಸಚಿವರಿಗೆ ಮನವಿ ನೀಡಲಾಯಿತು.

ಮನವಿ ಸ್ವೀಕರಿಸಿದ ಸಚಿವರು ಸೆ.25 ಸೋಮವಾರ ಮಂಗಳೂರು ಆಗಮಿಸಿ ಜನತಾದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧಿಕಾರಿಗಳ ಜೊತೆ ಮಾತನಾಡಿ ಪರಿಹಾರ ಒದಗಿಸುವ ಭರವಸೆ ನೀಡಿದರು.

ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಶಾಂತ್ ಶೆಟ್ಟಿ, ಬೆಂಗಳೂರಿನ ಸಾರಿಗೆ ಉದ್ಯಮಿ ಕಶ್ಯಪ್ ನಂದನ್, ಯೂನಿಯನ್ ಜೊತೆ ಕಾರ್ಯದರ್ಶಿ ನಯನ್ ಕುಮಾರ್, ಸದಸ್ಯರಾದ ಝಕರಿಯ್ಯಾ ಹಾಜಿ ಆತೂರು, ಖಾಸಿಮ್ ಜಾಸ್ಮಿನ್ ಹೊಸ್ಮಾರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English