ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು, ಆಗ ಮುಸ್ಲಿಮರಿಗೆ ಯಾವುದಾದರೂ ಸಮಸ್ಯೆಗಳು ಆಗಿತ್ತಾ?’ : ಬಿ.ಎಂ.ಫಾರೂಕ್

11:10 PM, Sunday, October 1st, 2023
Share
1 Star2 Stars3 Stars4 Stars5 Stars
(No Ratings Yet)
Loading...

ಬೆಂಗಳೂರು : ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಬಿಜೆಪಿ ಜೊತೆ 20 ತಿಂಗಳು ಉತ್ತಮ ಸರಕಾರ ನೀಡಿದೆ. ಆಗ ರಾಜ್ಯದಲ್ಲಿರುವ ಮುಸ್ಲಿಮರಿಗೆ ಯಾವುದಾದರೂ ಸಮಸ್ಯೆಗಳು ಆಗಿತ್ತಾ?’ ಎಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಪ್ರಶ್ನಿಸಿದ್ದಾರೆ.

ರಾಮನಗರ ಜಿಲ್ಲೆಯ ಬಿಡದಿ ಬಳಿಯಿರುವ ಕುಮಾರಸ್ವಾಮಿಯವರ ತೋಟದ ಮನೆಯಲ್ಲಿ ಆಯೋಜಿಸಿದ್ದ ಜೆಡಿಎಸ್ ನಾಯಕರ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ ‘ಜೆಡಿಎಸ್ ಪಕ್ಷವು ಈ ಹಿಂದೆಯೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿತ್ತು ಎಂದಿದ್ದಾರೆ.

ಈಗ ಕಾಂಗ್ರೆಸ್ ಸರಕಾರದಲ್ಲಿ ಸಚಿವರಾಗಿರುವ ಝಮೀರ್ ಅಹ್ಮದ್ ಖಾನ್, ಜೆಡಿಎಸ್-ಬಿಜೆಪಿ ಸಮ್ಮಿಶ್ರ ಸರಕಾರದಲ್ಲಿ ಸಚಿವರಾಗಿರಲಿಲ್ಲವೇ? ಮುಸ್ಲಿಮರಿಗೆ ಈ ಮೈತ್ರಿಯಿಂದ ಯಾವುದೇ ಸಮಸ್ಯೆಯಾಗುವುದಿಲ್ಲ.
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಕುರಿತು ಕಾಂಗ್ರೆಸ್ ನಾಯಕರು ಹಲವು ಬಗೆಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ ಎಂದು ಅವರು ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹೀಂ ಅವರ ಜೊತೆ ಪ್ರತಿಯೊಂದು ಹಂತದಲ್ಲೂ ಚರ್ಚೆ ಮಾಡಿ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡೆ ಎಚ್.ಡಿ.ದೇವೇಗೌಡ, ಕುಮಾರಸ್ವಾಮಿಯವರು ಬಿಜೆಪಿ ಜೊತೆ ಮೈತ್ರಿ ಮಾತುಕತೆ ಮುಂದುವರೆಸಿದ್ದು ಎಂದು ಫಾರೂಕ್ ಹೇಳಿದರು.

ಜೆಡಿಎಸ್ ಪಕ್ಷದಿಂದ ಮುಸ್ಲಿಮರು ದೂರವಾಗುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದದ್ದು. ಅಲ್ಪಸಂಖ್ಯಾತರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷ ಜೆಡಿಎಸ್. ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡರೂ ಅಲ್ಪಸಂಖ್ಯಾತರ ಹಿತರಕ್ಷಣೆಗೆ ಧಕ್ಕೆಯಾಗಲು ಅವಕಾಶ ನೀಡುವುದಿಲ್ಲ. ಸಮಾಜದಲ್ಲಿ ಸೌಹಾರ್ದಯುತ ವಾತಾವರಣ ಇರಬೇಕು ಎಂಬುದು ನಮ್ಮ ಬಯಕೆ ಎಂದು ಫಾರೂಕ್ ಹೇಳಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English