ಮಳಲಿಯಲ್ಲಿ ಲಿಂಗಾಯತ ಮಠ ಇತ್ತು, ಟಿಪ್ಪು ಸಹಚರರು ಗುರುಮಠ ನಾಶಮಾಡಿದ್ದಾರೆ – ರುದ್ರಮುನಿ ಸ್ವಾಮೀಜಿ

5:36 PM, Friday, May 27th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಮಳಲಿಯ ಜುಮ್ಮಾ ಮಸೀದಿ ಇರುವ ಜಾಗ ಈ ಹಿಂದೆ ಗುರುಮಠಕ್ಕೆ ಸೇರಿತ್ತು. ಶಿವನ ಆರಾಧನೆ ಇತ್ತು ಟಿಪ್ಪು ಕಾಲದಲ್ಲಿ ನಾಶ ಆಗಿರುವ ಬಗ್ಗೆ ಶಂಕೆಯಿದೆ ಎಂದು ಹೇಳಿದ್ದಾರೆ.

ತಾಂಬೂಲ ಪ್ರಶ್ನೆಯಲ್ಲಿ ತಿಳಿದುಬಂದ ಬೆನ್ನಲ್ಲೇ ಗುರುಪುರದ ಜಂಗಮ ಮಠದ ರುದ್ರಮುನಿ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಭಾಗದಲ್ಲಿ ಹಿಂದಿನ ಕಾಲದಲ್ಲಿ 64 ಮಠಗಳಿದ್ದವು. ಆ ಪೈಕಿ ಈಗ ಉಳಿದುಕೊಂಡಿರುವುದು 21 ಮಾತ್ರ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಲಿಂಗಾಯತರು ಉಳಿದುಕೊಂಡಿದ್ದಾರೆ. ಮಠದಲ್ಲಿರುವ ನೀಲಕಂಠ ವೈಭವ ಎನ್ನುವ ಪುಸ್ತಕದಲ್ಲಿ ಎಲ್ಲೆಲ್ಲಿ 64 ಮಠಗಳಿದ್ದವು ಅನ್ನುವುದರ ಬಗ್ಗೆ ಮಾಹಿತಿಗಳಿವೆ. ಅದರಲ್ಲಿ ಮಳಲಿಯಲ್ಲಿ ಗುರುಮಠ ಇತ್ತೆನ್ನುವ ಬಗ್ಗೆಯೂ ಉಲ್ಲೇಖ ಇದೆ ಎಂದು ಹೇಳಿದ್ದಾರೆ.

ಮಳಲಿಯಲ್ಲಿ ಗುರುಮಠ ಇದ್ದುದರ ಬಗ್ಗೆ ನಮಗೆ ಮೊದಲೇ ಮಾಹಿತಿಗಳಿದ್ದವು. ಆದರೆ, ಈಗಿನ ಪರಿಸ್ಥಿತಿಯಲ್ಲಿ ಯಾರಲ್ಲಿ ಕೇಳಿ ತಿಳಿದು ಕೊಳ್ಳುವುದು ಎನ್ನುವ ಜಿಜ್ಞಾಸೆ ಇತ್ತು. ಈಗ ತಾಂಬೂಲ ಪ್ರಶ್ನೆಯಲ್ಲಿ ಕಂಡುಬಂದಿರುವ ಅಂಶಗಳು ನೂರಕ್ಕೆ ನೂರು ಸತ್ಯ. ಶೈವ ಸಂಪ್ರದಾಯದ ಗುರುಮಠಕ್ಕೆ ಸೇರಿದ ಜಾಗ ಅನ್ನುವುದನ್ನು ಜ್ಯೋತಿಷಿಗಳು ತಿಳಿಸಿದ್ದಾರೆ. ಸ್ಥಳೀಯರು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧ ಎಂದು ರುದ್ರಮುನಿ ಸ್ವಾಮೀಜಿ ಹೇಳಿದ್ದಾರೆ.

1770ರ ವರೆಗೆ ಈ ಭಾಗದಲ್ಲಿ ಕೆಳದಿ ರಾಜರ ಆಡಳಿತ ಇತ್ತು. ಆನಂತರ ಹೈದರಾಲಿ, ಟಿಪ್ಪು ಆಳ್ವಿಕೆ ಬಂದಿತ್ತು. ಟಿಪ್ಪು ಆಳ್ವಿಕೆಯ ಕಾಲದಲ್ಲಿ ಆತನ ಸಹಚರರು ದಾಳಿ ನಡೆಸಿ ಹಲವಾರು ಮಠಗಳನ್ನು ನಾಶ ಮಾಡಿದ್ದಾರೆ ಎನ್ನಲಾಗುತ್ತಿದೆ. ಆತನ ಕಾಲಾನಂತರ ಈ ಭಾಗದ ಭೂಮಿಯನ್ನು ನೋಡಿಕೊಳ್ಳಲು ಕಟ್ಟೆಮಾರ್ ಜೈನ ವಂಶಸ್ಥರಿಗೆ ನೀಡಲಾಗಿತ್ತು. ಕಟ್ಟೆಮಾರ್ ಕುಟುಂಬಸ್ಥರು 1970ರಲ್ಲಿ ಭೂಮಸೂದೆ ಕಾಯ್ದೆ ಬರುವ ವರೆಗೂ ಲೀಸಿನಂತೆ ಮಠಕ್ಕೆ ಹಣ ನೀಡುತ್ತಿದ್ದರು. ಮಳಲಿಯ ಜಾಗದಲ್ಲಿ ಲಿಂಗಾಯತ ಸಂಪ್ರದಾಯ ಇತ್ತು. ಗುರುಮಠಕ್ಕೆ ಸೇರಿದ ಭೂಮಿಯಾಗಿತ್ತು ಅನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ ಎಂದು ಸ್ವಾಮೀಜಿ ತಿಳಿಸಿದ್ದಾರೆ.

ಎರಡು ದಿನಗಳ ಹಿಂದೆ ಮಳಲಿ ಮಸೀದಿಯ ಬಗ್ಗೆ ತಾಂಬೂಲ ಪ್ರಶ್ನೆ ಇಡಲಾಗಿತ್ತು. ಅದರಲ್ಲಿ ಗುರುಮಠಕ್ಕೆ ಸೇರಿದ ಜಾಗ, ಅಲ್ಲಿ ಶಿವನ ಆರಾಧನೆ ಇತ್ತು. ಅದು ದೇವ ಸಾನ್ನಿಧ್ಯ ಭೂಮಿ ಎನ್ನುವ ಅಂಶವನ್ನು ಜ್ಯೋತಿಷಿಗಳು ತಿಳಿಸಿದ್ದರು. ಅದರಂತೆ ಹಿಂದು ಸಂಘಟನೆಗಳು ಪೂರಕ ದಾಖಲೆಯನ್ನು ಸಂಗ್ರಹಿಸಲು ತೊಡಗಿವೆ. ಅಲ್ಲದೆ, ಈ ಬಗ್ಗೆ ಕೋರ್ಟಿಗೆ ದಾಖಲೆಗಳನ್ನು ಸಲ್ಲಿಸುವುದಕ್ಕೂ ತಯಾರಿ ನಡೆಸಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English