ಮಂಗಳೂರು : ಜನವರಿ 10 ಗುರುವಾರ ರಾತ್ರಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಎಂಬ ಸಂಸ್ಥೆಗೆ ಸೇರಿದ ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಾರ್ಖಾನೆ ಬಹುತೇಕ ಬೆಂಕಿಗಾಹುತಿಯಾಗಿದೆ.
ಘಟನೆಯಿಂದ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಯಂತ್ರಗಳು, 15 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಹಾಗೂ ಕಚ್ಛಾ ಸಾಮಗ್ರಿ ಸಹಿತ ಪ್ರಾಥಮಿಕ ಮಾಹಿತಿ ಪ್ರಕಾರ ನಷ್ಟದ ಪ್ರಮಾಣ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ.
ಕಾರ್ಖಾನೆಯ ಸಮೀಪದಲ್ಲಿದ್ದ ಮಸೀದಿಯೊಂದರಲ್ಲಿ ಸ್ಥಳೀಯರು ಪ್ರಾರ್ಥನೆ ಸಲ್ಲಿಸಿ ಹಿಂದಿರುಗುತ್ತಿದ್ದ ವೇಳೆ ಕಾರ್ಖಾನೆಯ ಕಿಟಕಿಯ ಮೂಲಕ ಬೆಂಕಿ ಉರಿಯುವುದನ್ನು ಕಂಡು ಕಾರ್ಖಾನೆ ಭದ್ರತಾ ಸಿಬ್ಬಂದಿಗಳಿಗೆ ತಿಳಿಸಿದ್ದು ಆ ಕೂಡಲೇ ಕಾರ್ಯ ಪ್ರವೃತ್ತರಾದ ಭದ್ರತಾ ಸಿಬ್ಬಂದಿ ಅಗ್ನಿಶಾಮಕ ದಳಗಳಿಗೆ ಹಾಗೂ ಕಾರ್ಖಾನೆಯ ಮಾಲೀಕರಿಗೆ ಸುದ್ದಿ ಮುಟ್ಟಿಸಿದರೆನ್ನಲಾಗಿದೆ. ಮಂಗಳೂರಿನ ಕದ್ರಿ, ಪಾಂಡೇಶ್ವರದ ಅಗ್ನಿ ಶಾಮಕ ವಾಹನಗಳು, ಎಂಸಿಎಫ್, ಕಿಸ್ಕೋ, ಎಂಆರ್‌ಪಿಎಲ್ ಮಾತ್ರವಲ್ಲದೆ ಉಡುಪಿ ಜಿಲ್ಲೆಯಿಂದಲೂ ಅಗ್ನಿ ಶಾಮಕ ಇಲಾಖೆ ವಾಹನಗಳನ್ನು ತರಿಸಲಾಗಿತ್ತು. ಖಾಸಗಿ ಟ್ಯಾಂಕರ್‌ಗಳ ಮೂಲಕವೂ ನೀರು ಹಾಯಿಸಿದರೂ ಕಾರ್ಖಾನೆಯಲ್ಲಿ ಮೇಣಕ್ಕೆ ಸಂಬಂಧಿಸಿದ ವಸ್ತುಗಳು ಇರುವುದರಿಂದ ಹಾಗೂ ಆ ವಸ್ತುಗಳೆಲ್ಲವು ಬೆಂಕಿಯನ್ನು ಆಕರ್ಷಿಸುವುದರಿಂದಾಗಿ ಬೆಂಕಿಯನ್ನು ಹತೋಟಿಗೆ ತರಲು ಸಾಧ್ಯವಾಗಲಿಲ್ಲ. ಬೆಂಕಿ ನಂದಿಸುವ ಕಾರ್ಯದಲ್ಲಿ ಸ್ಥಳೀಯರು ಅಗ್ನಿ ಶಾಮಕ ಸಿಬ್ಬಂದಿಗಳಿಗೆ ನೆರವು ನೀಡಿದರು.
ಕ್ಯಾಂಡಲ್ ಕಾರ್ಖಾನೆಯಲ್ಲಿ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸದಲ್ಲಿದ್ದು. ಒಟ್ಟು 1,900 ಮಂದಿ ಕೆಲಸ ಮಾಡುತ್ತಿದ್ದು, ಬೈಕಂಪಾಡಿ, ಪಣಂಬೂರು, ಸುರತ್ಕಲ್ ಪರಿಸರದ ಯುವತಿಯರಲ್ಲದೆ, ಜಿಲ್ಲೆಯ ನಾನಾ ಭಾಗದಿಂದ ಬಂದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಗುರುವಾರ ರಾತ್ರಿ ಕಾರ್ಖಾನೆ ಬೆಂಕಿಗೆ ಆಹುತಿಯಾದ ಸುದ್ದಿ ಹಬ್ಬುತ್ತಿದ್ದಂತೆ ಶುಕ್ರವಾರ ಮುಂಜಾನೆಯೇ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಕಂಪನಿಯೆದುರು ಜಮಾಯಿಸಿದ್ದರು. ಇದೆ ಉದ್ಯೋಗವನ್ನು ನಂಬಿ ಜೀವನ ಸಾಗಿಸುತ್ತಿದ್ದ ಕೆಲವರು ಈ ಘಟನೆಯಿಂದ ಕಂಗಾಲಾದದ್ದು ಕಂಡುಬಂದಿತು. ಅಗ್ನಿ ಅನಾಹುತಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ. ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English