ವಿಮಾನದಲ್ಲಿ ಬಂದು ರೈಲಿನಲ್ಲಿ ಕಳ್ಳತನ ಮಾಡುತ್ತಿದ್ದ ಐಷಾರಾಮಿ ಕಳ್ಳರನ್ನು ಬಂಧಿಸಿದ ಪೊಲೀಸರು

8:51 PM, Thursday, October 5th, 2023
Share
1 Star2 Stars3 Stars4 Stars5 Stars
(5 rating, 1 votes)
Loading...

ಮಂಗಳೂರು : ಉತ್ತರ ಪ್ರದೇಶದಿಂದ ವಿಮಾನದಲ್ಲಿ ಆಗಮಿಸಿ ನಗರದಲ್ಲಿ ರೈಲು ಪ್ರಯಾಣಿಕರ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ರೈಲ್ವೆ ಪೊಲೀಸರು ಬಂಧಿಸಿದ್ದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಉತ್ತರ ಪ್ರದೇಶದ ಮಿರ್ಜಾಪುರ ಜಿಲ್ಲೆಯ ಅಭಯರಾಜ್ ಸಿಂಗ್ (26) ಹಾಗೂ ರಾಜ್‌ಪುರದ ಹರಿಶಂಕರ್ ಗಿರಿ(25) ಬಂಧಿತ ಆರೋಪಿಗಳಾಗಿದ್ದಾರೆ.

ಪ್ರಯಾಣಿಕರಿಂದ ಕಳವು ಮಾಡಿದ 125 ಗ್ರಾಂ ಚಿನ್ನಾಭರಣಗಳನ್ನು ರೈಲ್ವೆ ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.

ಸೆಪ್ಟೆಂಬರ್ 28ರಂದು ಮಂಗಳೂರು ಮತ್ತು ಸುರತ್ಕಲ್ ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಪ್ರಯಾಣಿಕರ ಚಿನ್ನಾಭರಣ ಕಳವು ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು. ಅದರಂತೆ ಅರ್‌ಪಿಎಫ್ ತಂಡವು ರೈಲಿನಲ್ಲಿದ್ದ ಇಬ್ಬರು ಯುವಕರ ಮೇಲೆ ಸಂಶಯಗೊಂಡು ಅವರನ್ನು ಪತ್ತೆಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿವೆ. ಬಳಿಕ ಈ ಕಳವು ಆರೋಪಿಗಳನ್ನ ರೈಲ್ವೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಎರಡು ವಾರದ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಆರೋಪಿಗಳು ಮಂಗಳೂರಿಗೆ ಆಗಮಿಸುವ ವೇಳೆ ಉತ್ತರಪ್ರದೇಶದಿಂದ ಸಂಚರಿಸುವ ರೈಲನ್ನು ಗುರಿಯಾಗಿಸಿಕೊಂಡು ಪ್ರಯಾಣ ಮಾಡುತ್ತಿದ್ದರು. ರಾತ್ರಿ ಮಲಗಿರುತ್ತಿದ್ದ ವೃದ್ದರು ಹಾಗೂ ಮಹಿಳಾ ಪ್ರಯಾಣಿಕರ ಚಿನ್ನಾಭರಣಗಳನ್ನು ದೋಚಲು ಸಂಚು ಹೂಡುತ್ತಿದ್ದರು. ರಾತ್ರಿ ವೇಳೆ ರೈಲಿನ ವೇಗ ಕಡಿಮೆಯಾಗುತ್ತಿದ್ದಂತೆ ಚಿನ್ನಾಭರಣಗಳನ್ನು ಎಳೆದೊಯ್ದು ಬೋಗಿಯಿಂದ ಹೊರಜಿಗಿದು ಪರಾರಿಯಾಗುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿಗಳು ಪಾಲಕ್ಕಾಡ್, ತಿರುವನಂತಪುರಂ, ಮಂಗಳೂರು ಮುಂಬೈ ನಡುವಿನ ಕೊಂಕಣ ರೈಲ್ವೆಯ ರೈಲಿನಲ್ಲಿ ಹೆಚ್ಚು ಕಳವು ಮಾಡುತ್ತಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English